

ಬೆಂಗಳೂರು ಗ್ರಾಮಾಂತರ: ಕರೊನಾ ಆತಂಕ, ಸರ್ಕಾರದ ನಿಯಮಗಳ ನಡುವೆಯೂ ಗೌರಿ ಗಣೇಶ ಹಬ್ಬದ ಸಂಭ್ರಮಾಚರಣೆಗೆ ಗ್ರಾಮಾಂತರ ಜಿಲ್ಲೆ ಸಜ್ಜುಗೊಂಡಿದೆ.
ಪ್ರತಿ ವರ್ಷ ಜಿಲ್ಲೆಯಲ್ಲಿ ಅದ್ದೂರಿಯಾಗಿ ಆಚರಣೆಯಾಗುತ್ತಿದ್ದ ಗಣೇಶ ಉತ್ಸವಕ್ಕೆ ಈ ಬಾರಿ ಬ್ರೇಕ್ ಬಿದ್ದಿದ್ದರೂ ಸಂಭ್ರಮಾಚರಣೆ ಗರಿಗೆದರಿದೆ. ಸಾರ್ವಜನಿಕ ಗಣೇಶ ಉತ್ಸವಕ್ಕೆ ಕೆಲವೊಂದು ಕಟ್ಟುಪಾಡು ತಡೆಗಳಿದ್ದರೂ ಮನೆ ಮನೆ ಗಣೇಶ ಉತ್ಸವಕ್ಕೆ ಕೊರತೆಯಿಲ್ಲದಿರುವುದು ಗಜಮುಖನ ಆರಾಧಕರ ಮೊಗದಲ್ಲಿ ಮಂದಹಾಸ ತಂದಿದೆ.
ಪರಿಸರ ಸ್ನೇಹಿ ಗಣಪ: ಐದಾರು ವರ್ಷದಿಂದ ಪರಿಸರ ಸ್ನೇಹಿ ಗಣಪನ ಆರಾಧನೆಗೆ ಜಿಲ್ಲೆಯಲ್ಲಿ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತಿದೆ. ಕರೊನಾ ಕಾರಣದಿಂದ ಈ ಬಾರಿ ಹಿಂದೆಂದೆಗಿಂತಲೂ ಅಧಿಕ ಪ್ರಮಾಣದ ಪರಿಸರ ಸ್ನೇಹಿ ಗಣಪ ಮೂರ್ತಿ ಮಾರುಕಟ್ಟೆಗಳಲ್ಲಿ ವಿರಾಜಮಾನವಾಗಿವೆ. ಈಗಾಗಲೇ ಖರೀದಿಯಾಗುತ್ತಿರುವ ಭಾಗಶಃ ಗಣೇಶ ಮೂರ್ತಿಗಳು ಪರಿಸರ ಸ್ನೇಹಿಯಾಗಿವೆ ಎಂಬುದೇ ವಿಶೇಷ.
ಎತ್ತರ ತಗ್ಗಿಸಿಕೊಂಡ ಗಣೇಶ: ಪ್ರತಿ ವರ್ಷ ಪೈಪೋಟಿಗೆ ಬಿದ್ದಂತೆ ಎತ್ತರೆತ್ತರ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಸಂಭ್ರಮ ಪಡುತ್ತಿದ್ದ ಸಾರ್ವಜನಿಕ ಗಣೇಶ ಅದೃಶ್ಯವಾಗಿ, ಸರ್ಕಾರದ ಮಾರ್ಗಸೂಚಿಯಂತೆ ನಾಲ್ಕು ಅಡಿಗಳಿಗೆ ಸೀಮಿತವಾಗಿದ್ದಾನೆ.
ಗಣೇಶ ಪ್ರತಿಷ್ಠಾಪನೆಗೆ ನಿರ್ಬಂಧ: ಸರ್ಕಾರದ ಆದೇಶದಂತೆ, ಅತ್ಯಗತ್ಯ ಚಟುವಟಿಕೆ ಹೊರತುಪಡಿಸಿ, ಅನವಶ್ಯಕ ಕಾರ್ಯಕ್ರಮಗಳಿಗೆ ಅನುಮತಿ ಇಲ್ಲ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಆದೇಶಿಸಿದ್ದಾರೆ.
ದೇವಸ್ಥಾನದೊಳಗೆ, ಮನೆಗಳಲ್ಲಿ ಅಥವಾ ಸರ್ಕಾರಿ, ಖಾಸಗಿ, ಸಾರ್ವಜನಿಕ ಬಯಲು ಪ್ರದೇಶಗಳಲ್ಲಿ ಕನಿಷ್ಠ ಸಂಖ್ಯೆಯೊಂದಿಗೆ ಸರಳವಾಗಿ ಉತ್ಸವ ಆಚರಿಸಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವವರು ಗಣೇಶ ಮೂರ್ತಿಯನ್ನು 4 ಅಡಿ ಎತ್ತರ ಮೀರದಂತೆ ಹಾಗೂ ಮನೆಯೊಳಗೆ 2 ಅಡಿ ಮೀರದಂತೆ ಪ್ರತಿಷ್ಠಾಪಿಸಬಹುದು. ಪಾರಂಪರಿಕ ಗಣೇಶೋತ್ಸವ ಸಮಿತಿ, ಮಂಡಳಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಮುನಿಸಿಪಲ್ ಕಾರ್ಪೋರೇಷನ್, ಸ್ಥಳೀಯ ಆಡಳಿತದಿಂದ ಪೂರ್ವಾನುಮತಿ ಪಡೆಯಬೇಕು. ಒಂದು ವಾರ್ಡ್ ಅಥವಾ ಒಂದು ಗ್ರಾಮಕ್ಕೆ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಅನುಮತಿ ಇದೆ.
ಗಣೇಶಮೂರ್ತಿ ಪ್ರತಿಷ್ಠಾಪನೆ ಸ್ಥಳದಲ್ಲಿ ಯಾವುದೇ ಸಾಂಸ್ಕ್ರತಿಕ, ಮನರಂಜನಾ ಕಾರ್ಯಕ್ರಮ ಆಯೋಜನೆಗೆ ಅವಕಾಶವಿಲ್ಲ. ಗಣೇಶ ತರುವಾಗ ಹಾಗೂ ವಿಸರ್ಜಿಸುವಾಗ ಮೆರವಣಿಗೆ ನಡೆಸುವಂತಿಲ್ಲ.
ಪಾರಂಪರಿಕ ಗಣೇಶ ಮೂರ್ತಿ ಮತ್ತು ಮನೆಯಲ್ಲಿ ವಿಗ್ರಹ ಪೂಜಿಸುವವರು ಮನೆಯಲ್ಲಿಯೇ ವಿಸರ್ಜಿಸಬೇಕು.
ಬಯಲು ಪ್ರದೇಶಗಳಲ್ಲಿ ಪ್ರತಿಷ್ಠಾಪಿಸಲು ಅತಿ ಸಮೀಪದ ಮಾರ್ಗ ಬಳಸಿಕೊಂಡು ಜಿಲ್ಲಾಡಳಿತ ಹತ್ತಿರದ ಸ್ಥಳೀಯ ಸಂಸ್ಥೆಗಳ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರ್ಮಿಸಿದ ಹೊಂಡ ಅಥವಾ ಮೊಬೈಲ್ ಟ್ಯಾಂಕ್‌ಗಳಲ್ಲಿ ಅಥವಾ ಕೃತಕ ವಿಸರ್ಜನಾ ಟ್ಯಾಂಕರ್‌ಗಳಲ್ಲಿ ಗಣಪತಿ ವಿಸರ್ಜಿಸಬೇಕು.
ಸಾರ್ವಜನಿಕ ಸ್ಥಳಗಳಲ್ಲಿ ದಿನನಿತ್ಯ ಸ್ಯಾನಿಟೈಸೇಷನ್, ಭಕ್ತರಿಗೆ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸುವುದು. ಭಕ್ತರಿಗೆ ಕನಿಷ್ಠ 6 ಅಡಿ ಪರಸ್ಪರ ಅಂತರ ಗುರುತಿಸುವುದು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಡಿಸಿ ತಿಳಿಸಿದ್ದು, ರಾಷ್ಟ್ರೀಯ ನಿರ್ದೇಶನ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.