ಜಿಲ್ಲೆಯಲ್ಲಿ ಕರೊನಾ ಎರಡನೇ ಅಲೆ ಬಿರುಸು ; ಒಂದೇ ದಿನ 340 ಜನರಿಗೆ ಸೋಂಕು ; 43 ವರ್ಷದ ಮಹಿಳೆ ಸಾವು

DSC_9669
Published on

ತುಮಕೂರು : ಜಿಲ್ಲೆಯಲ್ಲಿ ಕರೊನಾ ಎರಡನೇ ಅಲೆ ಬಿರುಸಾಗಿದ್ದು, ಗುರುವಾರ ಬರೋಬ್ಬರಿ 340 ಜನರಿಗೆ ಸೋಂಕು ಕಾಣಿಸಿಕೊಂಡಿದೆೆ. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 198 ಜನರು ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2064ಕ್ಕೇರಿದೆ.

ಸೋಂಕಿನ ಸಾವಿನ ಸರಣಿ ಮುಂದುವರಿದಿದ್ದು, ಕುಣಿಗಲ್ ಪಟ್ಟಣದ 43 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ, ಜಿಲ್ಲಾಸ್ಪತ್ರೆ ತುರ್ತು ನಿಗಾ ಘಟಕದಲ್ಲಿ 15ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಕರೊನಾ ಸೋಂಕಿತಯರ ಸಂಪರ್ಕದಲ್ಲಿರುವ 17117 ಜನರ ಮೇಲೆ ನಿಗಾ ಇಡಲಾಗಿದೆಯಾದರೂ ಮೊದಲ ಅಲೆ ಕಾಣಿಸಿಕೊಂಡಾಗ ವಹಿಸುತ್ತಿದ್ದ ಎಚ್ಚರಿಕೆಯನ್ನು ಈಗ ಪಾಲಿಸುತಿಲ್ಲ, ರೋಗ ಲಕ್ಷಣ ಬಂದವರು ತಾವಾಗಿಯೇ ಪರೀಕ್ಷೆ ಮಾಡಿಕೊಂಡು ಚಿಕಿತ್ಸೆಗೆ ದಾಖಲಾಗುವ ಪರಿಸ್ಥಿತಿಯಿದ್ದು, ಸೋಂಕು ಕಾಣಿಸಿಕೊಂಡ ಮನೆಗಳ ಸುತ್ತಮುತ್ತಲೂ ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳುತ್ತಿಲ್ಲ.

ಗುರುವಾರ ತುಮಕೂರು ತಾಲೂಕಿನಲ್ಲಿ 132, ಗುಬ್ಬಿ 44, ಮಧುಗಿರಿ 30, ತುರುವೇಕೆರೆ 23, ತಿಪಟೂರು 17, ಶಿರಾ 22, ಚಿಕ್ಕನಾಯನಕಹಳ್ಳಿ 21, ಕುಣಿಗಲ್ 14, ಪಾವಗಡ 22, ಕೊರಟಗೆರೆ ತಾಲೂಕಿನಲ್ಲಿ 15 ಜನರಿಗೆ ಸೋಂಕು ವಕ್ಕರಿಸಿದೆ. ಈವರೆಗೆ ಜಿಲ್ಲೆಯಲ್ಲಿ 25868 ಜನರು ಕರೊನಾದಿಂದ ಗುಣಮುಖರಾಗಿದ್ದು, ಸಾವಿನ ಸಂಖ್ಯೆ 470ಕ್ಕೇರಿದೆ.

ಎಲ್ಲ ವಾರ್ಡ್‌ಗಳಲ್ಲಿ ಲಸಿಕೆ ಕೇಂದ್ರ ಆರಂಭ: ಕರೊನಾ ಹರೋಟಿಗೆ ತುಮಕೂರು ಮಹಾನಗರ ಪಾಲಿಕೆ ಜತೆ ನಾಗರಿಕರು ಸಹಕಾರ ನೀಡಬೇಕು, 45 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮೇಯರ್ ಬಿ.ಜಿ.ಕೃಷ್ಣಪ್ಪ ಮನವಿ ಮಾಡಿದರು. ತುಮಕೂರಿನ ಟೌನ್‌ಹಾಲ್ ಮುಂಭಾಗದಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ಉಚಿತ ಕರೊನಾ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಲಸಿಕೆ ಕೇಂದ್ರಗಳನ್ನು ಎಲ್ಲ ವಾರ್ಡ್‌ಗಳಲ್ಲಿಯೂ ಆರಂಭಿಸಲಾಗಿದ್ದು, ಲಸಿಕೆ ಹಾಕಿಸಿಕೊಳ್ಳಬೇಕು ಎಂದರು. ನಗರಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ, ಕರೊನಾ ಅಬ್ಬರ ಕಡಿಮೆ ಮಾಡುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಶೇ.25 ಜನರಿಗೆ ಲಸಿಕೆ ಹಾಕುವ ಗುರಿ ಹೊಂದಿದೆ ಎಂದರು.

ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ, ಐಸಿಯು ಮೀಸಲಿಡಿ: ಸರ್ಕಾರದ ಮಾರ್ಗಸೂಚಿಯಂತೆ ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ ಮತ್ತು ಐಸಿಯು ಮೀಸಲಿಡಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದರು.

ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಗುರುವಾರ ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸಿ ಎಲ್ಲ ಆಸ್ಪತ್ರೆಗಳೂ ಶೇ.50 ಐಸಿಯು ಮತ್ತು ಹಾಸಿಗೆಗಳನ್ನು ಮೀಸಲಿಡಬೇಕು. ಮೀಸಲಿಡದ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಳೆದ ವರ್ಷ ಕೋವಿಡ್ ಸೋಂಕಿತರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿಆರ್‌ಕೆ) ಯೋಜನೆಯಡಿ ನೀಡಿದ್ದ ಚಿಕಿತ್ಸೆಯ ಹಣ ಇನ್ನೂ ಪಾವತಿಯಾಗಿಲ್ಲ. ಇದರಿಂದ ಆಸ್ಪತ್ರೆ ನಡೆಸುವುದೇ ಕಷ್ಟ ಎನ್ನುವಂತಾಗಿದ್ದು, ಬಾಕಿ ಇರುವ ಬಿಲ್ಲುಗಳ ಪಾವತಿಗಾಗಿ ಕ್ರಮ ಕೈಗೊಳ್ಳಬೇಕು ಎಂದು ವೈದ್ಯರು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಜಿಲ್ಲೆಯು ಕರೊನಾ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳೂ ಜನರ ಆರೋಗ್ಯಕ್ಕಾಗಿ ಸೇವೆ ಸಲ್ಲಿಸಬೇಕು. ಎಬಿಆರ್‌ಕೆ ಯೋಜನೆಯಡಿ ಕಳೆದ ವರ್ಷ ಸೋಂಕಿತರಿಗೆ ನೀಡಿದ್ದ ಚಿಕಿತ್ಸೆಗೆ ಸಂಬಂಧಿಸಿದಂತೆ ಬಾಕಿ ಇರುವ ಬಿಲ್‌ಗಳ ಪಾವತಿಗಾಗಿ ಸಂಬಂಧಪಟ್ಟವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಖಾಸಗಿ ಆಸ್ಪತ್ರೆಗಳ ವೈದ್ಯರು ಎಬಿಆರ್‌ಕೆ ಯೋಜನೆಯಡಿ ನೀಡಲಾಗುವ ಔಷಧಗಳನ್ನು ಲಾಜಿಸ್ಟಿಕ್ಸ್ ಮೂಲಕ ಸರಬರಾಜು ಮಾಡಿದರೆ ಸೋಂಕಿತರಿಗೆ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದು ಮನವಿ ಮಾಡಿದಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಪ್ರತಿಕ್ರಿಯಿಸಿ, ಇಲಾಖೆಯಲ್ಲಿ ಲಾಗಿಸ್ಟಿಕ್ಸ್ ಮೂಲಕ ಸರಬರಾಜು ಮಾಡಲು ಅವಕಾಶವಿಲ್ಲ. ಆದ್ದರಿಂದ ಈಗಿರುವ ವ್ಯವಸ್ಥೆಯಲ್ಲಿಯೇ ಚಿಕಿತ್ಸೆ ನೀಡುವಂತೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ಮಮತಾ, ನೋಡಲ್ ಡೆಪ್ಯುಟಿ ಡೈರೆಕ್ಟರ್ ಡಾ.ಚಂದ್ರಕಲಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಸುರೇಶ್‌ಬಾಬು, ಆರ್‌ಎಂಒ ಡಾ.ವೀಣಾ, ಡಾ.ಚೇತನ್, ಡಾ.ಮಹಿಮಾ, ಡಾ.ಕೇಶವರಾಜ್, ಡಾ.ಸನತ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net