

ಅಶೋಕ ಶೆಟ್ಟರ, ಬಾಗಲಕೋಟೆ:
ರಾಜ್ಯದಲ್ಲಿ ಬೆಳಗಾವಿ ಜಿಲ್ಲೆಯ ಬಳಿಕ ಅತಿ ಹೆಚ್ಚು ಸಕ್ಕರೆ ಕಾರ್ಖಾನೆ ಹಾಗೂ ಕಬ್ಬು ಕ್ಷೇತ್ರ ಹೊಂದಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಸದ್ಯ ಐದು ಕಾರ್ಖಾನೆಗಳು ಪ್ರಸಕ್ತ ವರ್ಷದ ಕಬ್ಬು ಸುರಿಸುವಿಕೆ ಹಂಗಾಮಿಗೆ ಚಾಲನೆ ನೀಡಿವೆ.
ಗೋದಾವರಿ ಕಾರ್ಖಾನೆ ಆಡಳಿತವು ನ.೯ ರಂದು ಕೇನ್ ಕ್ಯಾರಿಯರ್ ಪೂಜೆ ನೆರವೇರಿಸಿ ರೈತರ ಸಮ್ಮುಖದಲ್ಲಿ ಟನ್ ಕಬ್ ಗೆ ಮೊದಲ ಕಂತು ೩ ಸಾವಿರ ರೂ. ಪಾವತಿಸುವುದಾಗಿ ಘೋಷಿಸಿದೆ. ಮುಧೋಳದ ಎಂಆರ್‌ಎನ್ ಸಕ್ಕರೆ ಕಾರ್ಖಾನೆ ಸಹ ಟನ್ ಗೆ ೩ ಸಾವಿರ ರೂ. ಘೋಷಿಸಿದೆ. ಜಮಖಂಡಿ ಉಪ ವಿಭಾಗದಲ್ಲಿ ಬರುವ ಬಹುತೇಕ ಸಕ್ಕರೆ ಕಾರ್ಖಾನೆಗಳು ಇದೇ ಬೆಲೆ ಘೋಷಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಜಮಖಂಡಿ ತಾಲೂಕಿನ ಸಾಯಿಪ್ರಿಯಾ ಕಾರ್ಖಾನೆ, ಜಮಖಂಡಿ ಶುರ‍್ಸ್ ಸಹ ಕ್ರಷಿಂಗ್ ಆರಂಭಿಸಿವೆ. ಹಾಗೆಯೇ ಎಂಆರ್‌ಎನ್ ಗ್ರುಪ್‌ನ ಬಾದಾಮಿ ತಾಲೂಕಿನ ಕೆರಕಲಮಟ್ಟಿ ಬಳಿಯ ಕೇಧಾರನಾಥ, ಕುಳಗೇರಿ ಬಳಿಯ ಎಂಆರ್‌ಎನ್ ಕಾರ್ಖಾನೆ ಸಹ ಹಂಗಾಮಿ ಆರಂಭಿಸಿವೆ. ನ. ೧೧ ರಂದು ಮುಧೋಳದ ಎಂಆರ್‌ಎನ್ ಕಾರ್ಖಾನೆಯಲ್ಲೂ ಕಬ್ಬು ನುರಿಸುವಿಕೆ ಆರಂಭ ಮಾಡುವುದಾಗಿ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಹಿಂದಿನ ಬಾಕಿ ಪಾವತಿ ಹಾಗೂ ಪ್ರಸಕ್ತ ವರ್ಷದ ಕಬ್ಬಿಗೆ ಬೆಲೆ ಘೋಷಿಸದ ಹೊರತು ಕಾರ್ಖಾನೆ ಆರಂಭ ಮಾಡಬಾರದು ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದರು. ಈ ಬಗ್ಗೆ ಜಿಲ್ಲಾಡಳಿತವೂ ಮೂರು ಸಭೆಗಳನ್ನು ನಡೆಸಿದ್ದರೂ ಒಮ್ಮತ ಮೂಡಿರಲಿಲ್ಲ. ಈ ಮಧ್ಯ ರೈತರು ಮುಧೋಳದಲ್ಲಿ ಪ್ರತಿಭಟನೆಯನ್ನು ಆರಂಭಿಸಿದ್ದರು.
ಆದರೆ, ಗೋಧಾವರಿ ಸಕ್ಕರೆ ಕಾರ್ಖಾನೆ ಹಳೇ ಬಾಕಿ ಪಾವತಿಸಿ, ಈ ವರ್ಷ ಟನ್ ಕಬ್ಬಿಗೆ ೩ ಸಾವಿರ ರೂ. ಕೊಡುವುದಾಗಿ ಮೊದಲು ಘೋಷಿಸಿದ್ದರಿಂದ ಭಾನುವಾರದಿಂದಲೇ ಕಬ್ಬು ಕ್ರಷಿಂಗ್ ಆರಂಭಮಾಡಿದೆ. ಜಮಖಂಡಿಯ ಸಾಯಿಪ್ರಿಯಾ ಕಾರ್ಖಾನೆ ಒಂದು ವಾರದ ಬಳಿಕ ರೈತರು ಚರ್ಚಿಸಿ ಬೆಲೆ ಘೋಷಿಸಲಿದ್ದಾರೆ.
ಎರಡು ವರ್ಷ ಬಂದ್ ಇದ್ದ ಮುಧೋಳ ತಾಲೂಕಿನ ತಿಮ್ಮಾಪುರ ಬಳಿಕ ರನ್ನ ಸಕ್ಕರೆ ಕಾರ್ಖಾನೆ ಇದೀಗ ಎಸ್.ಆರ್.ಪಾಟೀಲ ಅವರಿಗೆ ಟೆಂಡರ್ ಆಗಿದ್ದರಿಂದ ಈ ಹಂಗಾಮಿನಲ್ಲಿ ಕಾರ್ಖಾನೆ ಕಬ್ಬು ಕ್ರಷಿಂಗ್ ಶುರುಮಾಡಿದರೆ ಜಿಲ್ಲೆಯಲ್ಲಿ ಈ ಸಲ ಒಟ್ಟು ೧೪ ಕಾರ್ಖಾನೆಗಳು ಕ್ರಷಿಂಗ್ ಮಾಡಲಿವೆ. ಸದ್ಯ ೫ ಕಾರ್ಖಾನೆಗಳು ಶುರುವಾಗಿದ್ದು, ಮರ‍್ನಾಲ್ಕು ದಿನಗಳಲ್ಲಿ ಉಳಿದ ಕಾರ್ಖಾನೆಗಳು ಆರಂಭವಾಗುವ ಸೂಚನೆಗಳು ಕಂಡು ಬರುತ್ತಿವೆ.
ಇಂದು ಮುಧೋಳದಲ್ಲಿ ರೈತರ ಸಭೆ :
ಕಾರ್ಖಾನೆಗಳು ಕಬ್ಬು ಕ್ರಷಿಂಗ್ ಆರಂಭಿಸಿದ್ದರಿಂದ ತಮ್ಮ ಬೇಡಿಕೆ ಮತ್ತು ಮುಂದಿನ ನಿಲುವು ಕುರಿತು ನ.೧೧ ರಂದು ಮುಧೋಳದ ಜಿಎಲ್‌ಬಿಸಿ ಆವರಣದಲ್ಲಿ ಕಬ್ಬು ಬೆಳೆಗಾರರ ಸಭೆಯನ್ನು ಕರೆಯಲಾಗಿದೆ. ಇಲ್ಲಿ ಮುಖ್ಯವಾಗಿ ೨೦೨೧-೨೨ನೇ ಸಾಲಿನ ೨ನೇ ಕಂತಿನ ೬೨ ರೂ. ಬಾಕಿ ಹಣವನ್ನು ಗೋದಾವರಿ ಕಾರ್ಖಾನೆ ಸಂಪೂರ್ಣವಾಗಿ ಪಾವತಿಸಿದೆ. ಕೆಲವು ಭರವಸೆ ನೀಡಿವೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ ಪ್ರಕಟಿಸಲಿದ್ದಾರೆ.
ನ.೮ ರಿಂದ ಆರಂಭಿಸಲು ಸರ್ಕಾರ ಸೂಚನೆ:
ರಾಜ್ಯ ಸರ್ಕಾರ ಈ ಮೊದಲು ನ.೧೫ ರಿಂದ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸುವಂತೆ ಸೂಚಿಸಿತ್ತು. ಬಳಿಕ ಆದೇಶ ಪರಿಷ್ಕರಿಸಿ ನ.೮ ರಿಂದಲೇ ಕಬ್ಬು ನುರಿಸುವಿಕೆ ಆರಂಭಿಸಲು ತಿಳಿಸಿತ್ತು. ಇದೀಗ ಜಿಲ್ಲೆಯಲ್ಲಿ ಒಂದೊಂದಾಗಿ ಕಾರ್ಖಾನೆ ಆರಂಭ ಆಗುತ್ತಿವೆ. ಈ ನಡುವೆ ರೈತ ಮುಖಂಡರು ಇನ್ನು ತಮ್ಮ ಬೇಡಿಕೆಗೆ ಕಾರ್ಖಾನೆಗಳು ಸಂಪೂರ್ಣವಾಗಿ ಒಪ್ಪಿಲ್ಲ. ಟನ್ ಗೆ ೩ ಸಾವಿರ ಘೋಷಿಸಿದ್ದರೂ ಕಳೆದ ವರ್ಷಕ್ಕೆ ಹೊಲಿಕೆ ಮಾಡಿದರೆ ಈ ಸಲ ಇನ್ನಷ್ಟು ಹೆಚ್ಚು ಬೆಲೆ ಘೋಷಿಸಬೇಕಿತ್ತು. ಈ ಬಗ್ಗೆ ಸೋಮವಾರದ ಸಭೆಯಲ್ಲಿ ಚರ್ಚಿಸುತ್ತೇವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತಪ್ಪ ಕಾಂಬಳೆ ತಿಳಿಸಿದ್ದಾರೆ.