ಜಿಲ್ಲೆಯಲ್ಲಿ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಸಂಚಾರ

Published on

ಬಳ್ಳಾರಿ : 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ಅ. 19 ಮತ್ತು 20 ರಂದು ಜಿಲ್ಲಾದ್ಯಂತ ಸಂಚರಿಸಲಿದೆ ಎಂದು ಎಸಿ ಪ್ರಮೋದ್ ಹೇಳಿದರು.
ನಗರದ ನೂತನ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಬೆಯಲ್ಲಿ ಮಾತನಾಡಿದರು. ರಥಯಾತ್ರೆಗೆ ಗೌರವಯುತವಾಗಿ ಸ್ವಾಗತ ಮತ್ತು ಬೀಳ್ಕೊಡುಗೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಅ. 19 ಮತ್ತು 20 ರಂದು ಸಿರಗುಪ್ಪ ತಾಲೂಕಿಗೆ ಆಗಮಿಸಲಿದೆ. ಕನ್ನಡ ಜ್ಯೋತಿ ಹೊತ್ತ ಕನ್ನಡ ರಥವನ್ನು ಅಲ್ಲಿನ ತಾಲೂಕು ಆಡಳಿತ ಸ್ವಾಗತಿಸಲಾಗುವುದು. ರಥವು ಸಿರಗುಪ್ಪದಿಂದ ಕುರುಗೋಡು, ಬಳ್ಳಾರಿ, ಸಂಡೂರು, ಕಂಪ್ಲಿ ತಾಲೂಕು ಮೂಲಕ ವಿಜಯನಗರ ಜಿಲ್ಲೆಗೆ ಸಂಚರಿಸಲಿದೆ ಎಂದರು. ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ಯಶಸ್ವಿಯಾಗಿ ಜರುಗಬೇಕು. ರಥಯಾತ್ರೆ ಆಗಮಿಸಿದಾಗ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು, ಕನ್ನಡಪರ, ರೈತ, ಕಾರ್ಮಿಕ ಸಂಘಟನೆಗಳು, ವಿದ್ಯಾ ಸಂಸ್ಥೆಗಳು, ಎನ್‌ಸಿಸಿ., ಎನ್‌ಎಸ್‌ಎಸ್, ಸ್ಕೌಟ್ಸ್ ಮತ್ತು ಗೈಡ್ಸ್, ಸ್ತ್ರಿ-ಶಕ್ತಿ ಸಂಘಗಳು ಸೇರಿದಂತೆ ಇತರ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರನ್ನು ಜತೆಗೂಡಿಸಿಕೊಂಡು ಕನ್ನಡ ರಥಕ್ಕೆ ಗೌರವಯುತವಾಗಿ ಸ್ವಾಗತಿಸಬೇಕು. ಆಯಾ ತಾಲೂಕುಗಳಲ್ಲಿ ಸಂಚರಿಸುವ ವ್ಯವಸ್ಥೆ ಮಾಡಬೇಕು. ನಂತರ ತಾಲ್ಲಕಿನ ಗಡಿ ಭಾಗಗಳಲ್ಲಿ ಬೀಳ್ಕೊಡಬೇಕು ಎಂದರು.
ತಾಲೂಕು ಆಡಳಿತ, ಜಿಲ್ಲಾ ಸಾಹಿತ್ಯ ಪರಿಷತ್ ಸೇರಿದಂತೆ ಆಯಾ ತಾಲೂಕಿನ ತಾಲೂಕು ಮಟ್ಟದ ಅಧಿಕಾರಿಗಳು ಕನ್ನಡ ಪರ ಸಂಘಟನೆಗಳು, ಶಾಲಾ-ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿವಿಧ ಸಂಘಟನೆಗಳ ಪೂರ್ವಭಾವಿ ಸಭೆ ಏರ್ಪಡಿಸುವ ಮೂಲಕ ಕನ್ನಡ ಜ್ಯೋತಿ ರಥಯಾತ್ರೆಯನ್ನು ಯಶಸ್ವಿಯಾಗಿ ಆಯೋಜಿಸಬೇಕು ಮತ್ತು ಎಲ್ಲರೊಂದಿಗೆ ಸೂಕ್ತ ಸಮನ್ವಯ ಸಾಧಿಸಿ, ರಥಯಾತ್ರೆಯನ್ನು ಯಶಸ್ವಿಗೊಳಿಸಲು ಕ್ರಮವಹಿಸಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net