ಜಿಲ್ಲೆಯಲ್ಲಿ ಒಟ್ಟು 36 ಮತಗಟ್ಟೆ

14-klr-3
Published on

ಕೋಲಾರ: ಆಗ್ನೇಯ ಪದವೀದರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಅ. 28ರಂದು ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಜಿಲ್ಲೆಯಲ್ಲಿ ಒಟ್ಟು 21,521 ಮತದಾರರಿದ್ದು, ಒಟ್ಟು 36 ಮತಗಟ್ಟೆ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಸಿ.ಸತ್ಯಭಾಮ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ 3 ಅಭ್ಯರ್ಥಿಗಳು ಸೇರಿ ಚುನಾವಣೆಗೆ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜಿಲ್ಲೆಯ ಎಲ್ಲ 27 ಹೋಬಳಿಗಳಲ್ಲಿ ತಲಾ 1 ಹಾಗೂ 9 ಹೆಚ್ಚುವರಿ ಮತಗಟ್ಟೆ ಸೇರಿ ಒಟ್ಟು 36 ಮತಗಟ್ಟೆ ತೆರೆಯಲಾಗಿದೆ ಎಂದರು.

ಪದವೀಧರ ಚುನಾವಣೆಗೆ ಪದವೀದಧರು ಈಗಾಗಲೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದು, 13,061 ಪುರುಷ, 8,460 ಮಹಿಳಾ ಮತದಾರರು ಸೇರಿ ಒಟ್ಟು 21,521 ಮತದಾರರಿದ್ದಾರೆ. ಶ್ರೀನಿವಾಸಪುರದಲ್ಲಿ 4818, ಮುಳಬಾಗಿಲಿನಲ್ಲಿ 3052, ಕೋಲಾರ 7163, ಮಾಲೂರು 2558, ಬಂಗಾರಪೇಟೆ 2028 ಹಾಗೂ ಕೆಜಿಎಫ್‌ನಲ್ಲಿ 1902 ಮತದಾರರಿದ್ದಾರೆ ಎಂದರು.

ಪಾರದರ್ಶಕವಾಗಿ ಚುನಾವಣೆ ನಡೆಸಲು 18 ವಿಚಕ್ಷಣಾ ದಳ ರಚಿಸಿದ್ದು 6 ವಿಶೇಷ ವಿಡಿಯೊ ತಂಡ ರಚಿಸಲಾಗಿದೆ. ಹೋಬಳಿಗೆ ಒಬ್ಬರಂತೆ 27 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳಲು ಜಿಪಂ ಸಿಇಒ ನೋಡಲ್ ಅಧಿಕಾರಿಗಳಾಗಿ, ತಾಲೂಕು ಮಟ್ಟದಲ್ಲಿ ತಾಪಂ ಇಒ, ತಾಲೂಕು ಆರೋಗ್ಯಾಧಿಕಾರಿಗಳು ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಾರೆ ಎಂದರು.

ಜಿಲ್ಲೆಯಲ್ಲಿ 7 ಕಂಟ್ರೋಲ್ ರೂಂ ತಂಡಗಳು, ಡಿಸಿ ಕಚೇರಿ ಮತ್ತು ಆಯಾ ತಾಲೂಕು ಮಟ್ಟದದಲ್ಲಿ ಒಂದರಂತೆ 6 ಕಂಟ್ರೋಲ್ ರೂಂ ರಚಿಸಲಾಗಿದೆ. ಮತದಾನ ಸಿಬ್ಬಂದಿಗೆ ಅ.16, 20 ಮತ್ತು ಮಸ್ಟರಿಂಗ್ ದಿನವಾದ ಅ.27ರಂದು ತರಬೇತಿ ನೀಡಲಾಗುವುದು ಎಂದರು.

ನೋಟಿಸ್ ಜಾರಿ: ಚುನಾವಣೆಗೆ ಮೈಕ್ರೋ ವೀಕ್ಷಕರಾಗಿ 50 ಜನ ಸೇರಿ ಒಟ್ಟು 250 ಮತದಾನ ಸಿಬ್ಬಂದಿ ನೇಮಿಸಲಾಗಿದೆ. ನವೆಂಬರ್ 2ವರೆಗೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ನಿಗಾ ವಹಿಸಲಾಗಿದೆ. ವೇಮಗಲ್‌ನಲ್ಲಿ ಶಾಸಕರು ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿರುವ ಸಂಬಂಧ ನೋಟಿಸ್ ಜಾರಿ ಮಾಡಲಾಗಿದೆ ಎಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಕೋಲಾರ ಉಪವಿಭಾಗಾಧಿಕಾರಿ ಸೋಮಶೇಖರ್ ಉಪಸ್ಥಿತರಿದ್ದರು.

ಕಂದಾಯ ಅದಾಲತ್: ಜಿಲ್ಲೆಯಲ್ಲಿ ಕಂದಾಯ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಪಹಣಿ ತಿದ್ದುಪಡಿ, ಎ ಮತ್ತು ಬಿ ಖರಾಬು ತಿದ್ದುಪಡಿ, 3-9 ಹೊಂದಾಣಿಕೆಯಾಗದಿರುವ ಹೆಸರು ತಿದ್ದುಪಡಿ, ಬಿನ್/ಕೋಂ ತಿದ್ದುಪಡಿಗಳನ್ನು ಕಂದಾಯ ಅದಾಲತ್‌ನಲ್ಲಿ ಮಾಡಲಾಗುವುದು. ಮಾಲೂರು ತಾಲೂಕಿನ ಟೇಕಲ್ ಹೋಬಳಿಯಲ್ಲಿ ಅ.20ರಂದು, ಕೋಲಾರದ ಕಸಬಾ ಹೋಬಳಿಯಲ್ಲಿ 21, ಶ್ರೀನಿವಾಸಪುರ ಕಸಬಾ ಹೋಬಳಿಯಲ್ಲಿ 22ರಂದು, ಮುಳಬಾಗಿಲಿನ ಕಸಬಾ ಹೋಬಳಿಯಲ್ಲಿ 23ರಂದು, ಕೆಜಿಎಫ್ ಕಸಬಾ ಹೋಬಳಿಯಲ್ಲಿ ನ.4 ರಂದು , ಬಂಗಾರಪೇಟೆ ಕಸಬಾ ಹೋಬಳಿಯಲ್ಲಿ ನ.5 ರಂದು ಕಂದಾಯ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಸತ್ಯಭಾಮ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net