ಜಿಲ್ಲೆಯಲ್ಲಿ ಐವರಿಗೆ ಕರೊನಾ ಪಾಸಿಟಿವ್

3sirsi7
Published on

ಕಾರವಾರ: ಜಿಲ್ಲೆಯಲ್ಲಿ ಶುಕ್ರವಾರ ಹೊಸದಾಗಿ ಐದು ಜನರಿಗೆ ಕರೊನಾ ಇರುವುದು ಖಚಿತವಾಗಿದೆ.

ಹುಬ್ಬಳ್ಳಿ ಕಿಮ್ಸ್​ಗೆ ಶಸ್ತ್ರ ಚಿಕಿತ್ಸೆಗಾಗಿ ತೆರಳಿದ ಮುಂಡಗೋಡ ಟಿಬೆಟಿಯನ್ ಕಾಲನಿಯ 73 ವರ್ಷದ ವೃದ್ಧನಿಗೆ ರೋಗ ಖಚಿತವಾಗಿದೆ. ಶಸ್ತ್ರ ಚಿಕಿತ್ಸೆಗೂ ಮೊದಲು ಪರೀಕ್ಷೆ ನಡೆಸಿದಾಗ ರೋಗ ಕಂಡುಬಂದಿದ್ದರಿಂದ ಆತನನ್ನು ಅಲ್ಲಿಂದ ವಾಪಸ್ ಕಳಿಸಲಾಗಿತ್ತು. ಕಾರವಾರ ಕ್ರಿಮ್ಸ್​ನಲ್ಲಿ ಮತ್ತೊಮ್ಮೆ ಪರೀಕ್ಷೆ ಮಾಡಿ ಸೇರಿಸಿಕೊಳ್ಳಲಾಗಿದೆ.

ಭಟ್ಕಳಕ್ಕೆ ವಿಜಯವಾಡದಿಂದ ವಾಪಸಾಗಿದ್ದ ಒಂದೇ ಕುಟುಂಬದ 34 ವರ್ಷದ ಮಹಿಳೆ, 10 ವರ್ಷದ ಬಾಲಕ ಹಾಗೂ 13 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ. ಶಿರಸಿಗೆ ಬೆಂಗಳೂರಿನಿಂದ ಆಗಮಿಸಿದ 40 ವರ್ಷದ ವ್ಯಕ್ತಿಗೆ ಕರೊನಾ ದೃಢಪಟ್ಟಿದೆ.

ಕರೊನಾದಿಂದ ಗುಣ ಹೊಂದಿದ 8 ಜನರನ್ನು ಶುಕ್ರವಾರ ಕ್ರಿಮ್್ಸ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಭಟ್ಕಳದ 75 ವರ್ಷದ ವೃದ್ಧ, 3 ವರ್ಷದ ಬಾಲಕಿ, ಯಲ್ಲಾಪುರದ 25 ವರ್ಷದ ಕಂಡಕ್ಟರ್, ಶಿರಸಿಯ 55 ವರ್ಷದ ಪುರುಷ, ಮುಂಡಗೋಡಿನ 27 ವರ್ಷದ ಯುವಕ, ಜೊಯಿಡಾದ 53 ವರ್ಷದ ವ್ಯಕ್ತಿ, ದಾಂಡೇಲಿಯ 50 ವರ್ಷದ ವ್ಯಕ್ತಿ, ಹೊನ್ನಾವರದ 33 ವರ್ಷದ ಮಹಿಳೆಗೆ ಪ್ರಮಾಣಪತ್ರ ನೀಡಿ ಕಳಿಸಿಕೊಡಲಾಗಿದೆ.

ಮರಾಠಿಕೊಪ್ಪದ ವಿಶಾಲನಗರ ಸೀಲ್​ಡೌನ್: ಶಿರಸಿ: ಬೆಂಗಳೂರಿನಿಂದ ವಾಪಾಸಾಗಿದ್ದ ಶಿರಸಿಯ ವ್ಯಕ್ತಿಯೊಬ್ಬರಿಗೆ ಶುಕ್ರವಾರ ಕರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ಇಲ್ಲಿನ ಮರಾಠಿಕೊಪ್ಪ ವಿಶಾಲನಗರದ 6 ಮನೆಗಳು ಹಾಗೂ ಎರಡು ಖಾಸಗಿ ಆಸ್ಪತ್ರೆಗಳನ್ನು ಸೀಲ್ ಮಾಡಲಾಗಿದೆ. ಬಂಗಾರದ ಕೆಲಸ ಮಾಡುವ ವ್ಯಕ್ತಿ ಜೂನ್ 23ರಂದು ಬೆಂಗಳೂರಿಗೆ ಹೋಗಿ, ಜೂ. 24ರಂದು ಶಿರಸಿಗೆ ವಾಪಾಸಾಗಿದ್ದ. ನಂತರ ಜ್ವರ ಕಾಣಿಸಿಕೊಂಡ ಹಿನ್ನ್ನೆಲೆಯಲ್ಲಿ ಜೂ. 29ರಂದು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರನ್ನು ಸಂರ್ಪಸಿದ್ದ. ನಂತರ ಜ್ವರದ ಸಂಬಂಧ ಗುಳಿಗೆ ನೀಡಿದ್ದ ವೈದ್ಯರು ತಾಲೂಕು ಆಡಳಿತದ ಗಮನಕ್ಕೆ ತಂದಿದ್ದರು. ಜ್ವರದ ಹಿನ್ನ್ನೆಲೆಯಲ್ಲಿ ವ್ಯಕ್ತಿಯ ಗಂಟಲ ದ್ರವ ತೆಗೆದು ಲ್ಯಾಬ್​ಗೆ ಕಳಿಸಲಾಗಿತ್ತು. ಪರೀಕ್ಷೆಯಲ್ಲಿ ಕರೊನಾ ದೃಢಪಟ್ಟಿದೆ. ಈತ ಮರಾಠಿಕೊಪ್ಪದಲ್ಲಿ ಹೋಂ ಕ್ವಾರಂಟೈನ್​ನಲ್ಲಿದ್ದಿದ್ದು, ಆತನನ್ನು ಕಾರವಾರಕ್ಕೆ ಕರೆದೊಯ್ಯಲಾಗಿದೆ. ಇದರ ಪರಿಣಾಮ ಮರಾಠಿಕೊಪ್ಪ ವಿಶಾಲನಗರದ 6 ಮನೆಗಳು ಹಾಗೂ ಚಿಕಿತ್ಸೆಗೆ ತೆರಳಿದ್ದ ದೇವಿಕೆರೆ ಹಾಗೂ ಕೋರ್ಟ್ ರಸ್ತೆ ಬಳಿಯ ಎರಡು ಖಾಸಗಿ ಆಸ್ಪತ್ರೆಗಳನ್ನು ಸೀಲ್​ಡೌನ್ ಮಾಡಲಾಗಿದೆ. ಸೋಂಕಿತನ ಸಂಪರ್ಕಗಳ ಬಗ್ಗೆ ಇನ್ನೂ ಮಾಹಿತಿ ಬೆಳಕಿಗೆ ಬರಬೇಕಿದೆ.

ಒಂದೇ ದಿನ 175 ಜನರ ಗಂಟಲ ದ್ರವ ಸಂಗ್ರಹ : ಭಟ್ಕಳ: ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸಿದ್ದು, ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಉಪವಿಭಾಗಾಧಿಕಾರಿ ಭರತ್ ಹೇಳಿದರು. ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದರು. ತಾಲೂಕಿನ ಜಾಲಿ ಪಪಂ, ಹೆಬಳೆ ಗ್ರಾಮ ಪಂಚಾಯಿತಿ ಹಾಗೂ ಭಟ್ಕಳ ಪುರಸಭೆಯಲ್ಲಿ ಕಠಿಣ ಕ್ರಮ ಅನಿವಾರ್ಯವಾಗಿದೆ. ಈಗಾಗಲೇ 3 ಹಾಟ್​ಸ್ಪಾಟ್​ಗಳನ್ನು ಗುರುತಿಸಿದ್ದು, ಅದನ್ನು ಸೀಲ್​ಡೌನ್ ಮಾಡಲಾಗುವುದು. ಅಗತ್ಯ ವಸ್ತುಗಳನ್ನು ಮನೆಗೇ ಪೂರೈಸುವ ವ್ಯವಸ್ಥೆ ಮಾಡಲಾಗುವುದು. ಭಟ್ಕಳ ಪಟ್ಟಣದ ಐದು ಕಡೆಗಳಲ್ಲಿ ಜ್ವರ ತಪಾಸಣಾ ಕ್ಲಿನಿಕ್ ಸ್ಥಾಪಿಸಲಾಗಿದ್ದು, ಪ್ರತಿಯೊಬ್ಬರೂ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು. ಭಟ್ಕಳದಲ್ಲಿ ಗುರುವಾರ ಒಂದೇ ದಿನ 175 ಜನರ ಗಂಟಲು ದ್ರವ ಸಂಗ್ರಹಿಸಿ ಕಾರವಾರಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಕಳೆದ ವಾರ ಮದುವೆಯಲ್ಲಿ ಭಾಗವಹಿಸಿದ್ದ 92 ಜನರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವಿವರಿಸಿದರು. ಎಎಸ್​ಪಿ ನಿಖಿಲ್ ಬಿ., ಮಾತನಾಡಿ, ಶಿರಾಲಿ, ಸರ್ಪನಕಟ್ಟೆ ಮತ್ತು ಸಾಗರ ರಸ್ತೆಯ ಚೆಕ್ ಪೋಸ್ಟ್​ಗಳಲ್ಲಿ ಸಾಕಷ್ಟು ಸಿಬ್ಬಂದಿಗಳನ್ನು ಹಾಕಲಾಗಿದ್ದು ಭಟ್ಕಳಕ್ಕೆ ಬರುವ ವಾಹನಗಳನ್ನು ತಪಾಸಣೆ ಮಾಡಿ, ಮಾಹಿತಿ ಕಲೆ ಹಾಕಲಾಗುವುದು. ರಾತ್ರಿ ಕರ್ಫ್ಯೂವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಎಲ್ಲ ಕ್ರಮ ಕೈಗೊಳ್ಳಲಾಗಿದೆ ಎಂದರು. ತಹಸೀಲ್ದಾರ್ ಎಸ್. ರವಿಚಂದ್ರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net