ಜಿಲ್ಲೆಯಲ್ಲಿ ಆರು ಕರೊನಾ ಕೇಸ್ ಪತ್ತೆ

carona logo
Published on

ಕಾರವಾರ ಜಿಲ್ಲೆಯಲ್ಲಿ ಎರಡು ದಿನ ಹೊಸ ಪ್ರಕರಣವಿಲ್ಲ ಎಂಬ ಸಮಾಧಾನವಿತ್ತು. ಆದರೆ, ಶನಿವಾರ ಒಂದೇ ದಿನ 6 ಪ್ರಕರಣಗಳು ಖಚಿತವಾಗಿವೆ. ಮುಂಬೈನಿಂದ ಆಗ ಮಿಸಿ ಹೋಟೆಲ್ ಕ್ವಾರಂಟೈನ್​ನಲ್ಲಿದ್ದ ಕುಮಟಾದ ಒಂದೇ ಕುಟುಂಬದ ನಾಲ್ವರಲ್ಲಿ ಕರೊನಾ ಇರುವುದು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ತಿಳಿಸಿದ್ದಾರೆ. ಅವರ ಕುರಿತ ಹೆಚ್ಚಿನ ವರದಿ ಭಾನುವಾರ ಸಂಜೆ ಆರೋಗ್ಯ ಇಲಾಖೆ ನೀಡುವ ಬುಲೆಟಿನ್​ನಲ್ಲಿ ಬರಲಿದೆ.

ಇನ್ನು ದಾಂಡೇಲಿಯ 38 ವರ್ಷದ ವ್ಯಕ್ತಿಗೆ ಕರೊನಾ ಇರುವುದು ಖಚಿತವಾಗಿದ್ದು, ರಾಜ್ಯ ಹೆಲ್ತ್ ಬುಲೆಟಿನ್​ನಲ್ಲಿ ಪ್ರಕಟವಾಗಿದೆ. ಇಲೆಕ್ಟ್ರೀಶಿಯನ್ ವೃತ್ತಿ ಮಾಡುತ್ತಿರುವ ಅವರು ಹೊರಗಡೆ ಓಡಾಡಿದ ಯಾವುದೇ ಮಾಹಿತಿ ಇಲ್ಲ. ಉಡುಪಿಯ ಖಾಸಗಿ ಪ್ರಯೋಗಾಲಯದಲ್ಲಿ ವರದಿ ಪಾಸಿಟಿವ್ ಬಂದಿದ್ದು, ಕಾರವಾರದ ಪ್ರಯೋಗಾಲಯದಲ್ಲಿ ನೆಗೆಟಿವ್ ಬಂದಿದೆ. ಅವರ ಗಂಟಲ ದ್ರವದ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕವೇ ಖಚಿತವಾಗಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಇನ್ನು ಮುಂಬೈನಿಂದ ಕುಟುಂಬದ ಜತೆಗೆ ಆಗಮಿಸಿ ಕಾರವಾರದ ಖಾಸಗಿ ಹೋಟೆಲ್​ನಲ್ಲಿ ಕ್ವಾರಂಟೈನ್​ನಲ್ಲಿದ್ದ 35 ವರ್ಷದ ಮಹಿಳೆಗೆ ಕರೊನಾ ಇರುವುದು ಖಚಿತವಾಗಿದೆ. ಆಕೆಯ ಸಂಪರ್ಕಕ್ಕೆ ಬಂದವರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.

ಭಾನುವಾರ ಲಾಕ್​ಡೌನ್ ಸಡಿಲಿಕೆ: ಮೇ 31ರ ಲಾಕ್​ಡೌನ್ ಅನ್ನು ರದ್ದು ಮಾಡಿ ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಆದೇಶ ಹೊರಡಿಸಿದ್ದಾರೆ. ವಾರದ ಉಳಿದ ದಿನಗಳಂತೆ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೂ ಅಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಆದೇಶ ಭಟ್ಕಳ ತಾಲೂಕಿಗೆ ಅನ್ವಯವಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಾಳೆಯಿಂದ ಪರೀಕ್ಷೆ ಆರಂಭ..? ಮೆಡಿಕಲ್ ಕಾಲೇಜ್​ನಲ್ಲಿ ಅಳವಡಿಸಿದ ನೂತನ ಆರ್​ಟಿಪಿಸಿಆರ್ ಯಂತ್ರದಲ್ಲಿ ಈಗಾಗಲೇ ಕರೊನಾ ಮಾದರಿಯ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಎಂಸಿಐಆರ್) ಅನುಮತಿ ಪಡೆಯುವ ಕಾರ್ಯ ಪ್ರಗತಿಯಲ್ಲಿದೆ. ಕರೊನಾ ಮಾದರಿಗಳ ಪ್ರಯೋಗಾಲಯ ಪರೀಕ್ಷೆ ಕಾಯಂ ಆಗಿ ಸೋಮವಾರ ಇಲ್ಲಿಯೇ ಪ್ರಾರಂಭವಾಗಲಿದೆ ಎಂದು ಡಾ. ಹರೀಶ ಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net