ಜಿಲ್ಲೆಯಲ್ಲಿ ಅವಾಂತರ ಸೃಷ್ಟಿಸಿದ ವರುಣ

08rajesh5
Published on

ಚಾಮರಾಜನಗರ: ವಿವಿಧ ಕಡೆಗಳಲ್ಲಿ ಗುರುವಾರ ಮಧ್ಯಾಹ್ನ ಮಳೆ ಸುರಿದಿದ್ದು, ಹಲವೆಡೆ ಆವಾಂತರಗಳನ್ನು ಸೃಷ್ಟಿ ಮಾಡಿದೆ. ಜಿಲ್ಲೆಯ ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ, ಗುಂಡ್ಲುಪೇಟೆ ಹಾಗೂ ಹನೂರು ತಾಲೂಕಿನ ವ್ಯಾಪ್ತಿಯಲ್ಲಿ ಮಧ್ಯಾಹ್ನದ ವೇಳೆಗೆ ಮಳೆಯಾಗಿದ್ದು, ಬಿಸಲಿನ ಬೇಗೆಯಿಂದ ಬೇಸತ್ತಿದ್ದ ಜನರಿಗೆ ತಂಪೆರೆಯಿತು.

ಸುಮಾರು ಅರ್ಧ ತಾಸಿಗಿಂತಲೂ ಅಧಿಕ ಸಮಯ ಸುರಿದ ಮಳೆಯಿಂದಾಗಿ ಜನರು ಕೆಲಕಾಲ ಸಮಸ್ಯೆ ಅನುಭವಿಸಿದರು. ಚಾಮರಾಜನಗರ ತಾಲೂಕಿನ ವ್ಯಾಪ್ತಿಯ ಹಲವಾರು ಗ್ರಾಮಗಳಲ್ಲಿ ಬುಧವಾರ ರಾತ್ರಿಯೂ ಗುಡುಗು-ಸಿಡಿಲಿನ ಸಹಿತ ಕೆಲಕಾಲ ಭಾರಿ ಮಳೆ ಸುರಿದಿದ್ದು, ಹಲವು ಕಡೆಗಳಲ್ಲಿ ಆವಾಂತರ ಸೃಷ್ಟಿಯಾಯಿತು. ಕೆಲವು ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.

ಉಕ್ಕಿ ಹರಿದ ಚರಂಡಿನೀರು:

ನಗರದಲ್ಲಿ ಮಧ್ಯಾಹ್ನದ ಸಮಯದಲ್ಲಿ ಸುರಿದ ಮಳೆಯಿಂದಾಗಿ ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಹಿಂಭಾಗದ ಚರಂಡಿಯ ನೀರು ರಸ್ತೆಗೆ ಉಕ್ಕಿ ಹರಿದ ಪರಿಣಾಮವಾಗಿ ವಾಹನ ಸವಾರರು ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಸಮಸ್ಯೆ ಉಂಟಾಯಿತು. ನಗರದ ಸುಲ್ತಾನ್ ಷರ್ೀ ವೃತ್ತ, ಗಾಳಿಪುರ ಬಡಾವಣೆ, ಗುಂಡ್ಲುಪೇಟೆ ವೃತ್ತ ಹಾಗೂ ದೊಡ್ಡಂಗಡಿ ಬೀದಿಯಿಂದ ಈ ಭಾಗದಲ್ಲಿ ಮಳೆಯ ನೀರು ಹರಿದುಹೋಗುತ್ತದೆ. ಈ ಜಾಗದಲ್ಲಿ ಹಲವಾರು ದಿನಗಳಿಂದಲೂ ಚರಂಡಿಯ ನೀರು ಸೂಕ್ತ ರೀತಿಯಲ್ಲಿ ಹರಿದು ಹೋಗಲು ಜಾಗವಿಲ್ಲದೇ ಮಳೆಬಂದಾಗ ಸಮಸ್ಯೆ ಉಂಟಾಗುತ್ತದೆ. ಈ ರಸ್ತೆಗಳಲ್ಲಿ ಹತ್ತಾರು ಸಂಖ್ಯೆಯಲ್ಲಿ ಬೀದಿ ಬದಿಯ ವ್ಯಾಪಾರಿಗಳು ತರಕಾರಿ, ಹಣ್ಣು, ಹೂ ಮತ್ತು ಇನ್ನಿತರೆ ವ್ಯಾಪಾರ ಮಾಡುತ್ತಾರೆ. ಚರಂಡಿಯ ನೀರು ರಸ್ತೆಗೆ ಹರಿಯುವುದರಿಂದ ಮಳೆ ಬಂದಾಗ ಸಾಕಷ್ಟು ಸಮಸ್ಯೆ ಉಂಟಾಗುತ್ತದೆ. ಆಗಾಗಿ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತಕ್ರಮವಹಿಸಬೇಕು ಎಂದು ಸಾರ್ವಜನಿಕರು ಹಾಗೂ ವ್ಯಾಪಾರಿಗಳು ದೂರಿದರು.

ದೇಮಹಳ್ಳಿಯಲ್ಲಿ ನೆಲಕಚ್ಚಿದ ಬಾಳೆ:

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬುಧವಾರ ರಾತ್ರಿ ಸುರಿದ ಗುಡುಗು ಸಹಿತ ಭಾರಿ ಮಳೆಯಿಂದಾಗಿ ಹಲವಾರು ರೈತರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ನಾಶವಾಗಿದೆ. ತಾಲೂಕಿನ ದೇಮಹಳ್ಳಿ ಗ್ರಾಮದಲ್ಲಿ ಬಿರುಗಾಳಿ, ಆಲಿಕಲ್ಲು ಸಹಿತ ಸುರಿದ ಮಳೆಗೆ ರೈತರು ಬೆಳೆದಿದ್ದ ಬಾಳೆ,ಟೋಮ್ಯಾಟೊ, ಕಲ್ಲಂಗಡಿ ಹಾಗೂ ಇನ್ನಿತರೆ ಬೆಳೆಗಳು ನೆಲಕಚ್ಚಿದೆ. ಗ್ರಾಮದ ರೈತರಾದ ಗುರುಪಾದಸ್ವಾಮಿ ಅವರಿಗೆ ಸೇರಿದ 1.20 ಎಕರೆ, ಸತೀಶ್ ಅವರ 1.20 ಎಕರೆ, ಡಿ.ಎಸ್.ಮಹದೇವಪ್ಪ 2 ಎಕರೆ, ರಾಜೇಶ್ 1 ಎಕರೆ, ಮಹದೇವ 2 ಎಕರೆ, ಪ್ರಸಾದ್ ಕಂಠಿ 1 ಎಕರೆ ಹಾಗೂ ಇನ್ನಿತರೆ ರೈತರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ನಾಶವಾಗಿದೆ. ಒಂದು ಎಕರೆ ಜಮೀನಿನಲ್ಲಿ 1200 ಬಾಳೆಗಳು ಇದ್ದು, ಎಲ್ಲವೂ ಬಿರುಗಾಳಿ ಮಳೆಗೆ ಬಿದ್ದುಹೋಗಿದೆ. ಅದಲ್ಲದೇ ಇನ್ನಿತರೆ ರೈತರು ಬೆಳೆದಿದ್ದ ಕಲ್ಲಂಗಡಿ, ಟೊಮೊಟೊ ಬೆಳೆಗಳು ಮಳೆಗೆ ಹಾಳಾಗಿರುವುದರಿಂದ ಈ ಭಾಗದ ರೈತರಿಗೆ ಕೋಟ್ಯಾಂತರ ರೂ, ನಷ್ಟವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ. ಆದ್ದರಿಂದ ಈ ಕೂಡಲೇ ಕೃಷಿ ಅಧಿಕಾರಿಗಳು ಗ್ರಾಮದ ರೈತರುಗಳ ಜಮೀನುಗಳಿಗೆ ತೆರಳಿ, ಪರಿಶೀಲನೆ ನಡೆಸಿ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net