

ಕಲಬುರಗಿ: ಮಂಗಳವಾರ ಸಂಜೆಯಿಂದ ಕಲಬುರಗಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಬುಧವಾರವೂ ಮುಂದುವರಿದಿದ್ದು, ಜಿಲ್ಲೆಯ ಬಹುತೇಕ ಹಳ್ಳ-ಕೊಳ್ಳಗಳು ಮೈದುಂಬಿಕೊಂಡಿವೆ. ಈ ಸಲ ಮುಂಗಾರು ಮಳೆ ರೈತನಲ್ಲಿ ಸಂತಸವನ್ನು ಮೂಡಿಸಿದೆ. ಈ ಮಧ್ಯೆ ಈಗಾಗಲೇ ಬಿತ್ತನೆಯಾಗಿರುವ ಹೆಸರು, ಉದ್ದು ಸೇರಿ ಅಲ್ಪಾವಧಿ ಬೆಳೆಗಳಿಗೆ ಅತೀವೃಷ್ಟಿಯಾಗುವ ಸಾಧ್ಯತೆಗಳು ಇವೆ.
ಕಳೆದೆರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದಲ್ಲಿ ಅನೇಕ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ಕೈಲಾಶನಗರ, ಜನತಾ ಲೇಔಟ್ ಸೇರಿ ಕೆಲವು ಬಡಾವಣೆಗಳಲ್ಲಿ ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಹೊಲಗಳಿಗೆ ನೀರು ನುಗ್ಗಿದ್ದು, ಇದೀಗ ತಾನೆ ಮೊಳಕೆಯೊಡೆದಿರುವ ಬೆಳೆಗಳು ನೀರಲ್ಲಿ ನಿಂತಿವೆ. ಎರಡು ದಿನಗಳಿಂದ ಜಿಲ್ಲೆಗೆ ಸೂರ್ಯದೇವನ ದರುಶನವೇ ಅಪರೂಪವಾಗಿದೆ. ಅನೇಕರು ಮಳೆಯಲ್ಲಿಯೇ ತೊಯಿಸಿಕೊಂಡು ಮನೆ ಸೇರಿದರು. ಲಾಕ್ಡೌನ್ ಹಿನ್ನಲೆಯಲ್ಲಿ ಆಟೋಗಳು ಇಲ್ಲದ್ದರಿಂದ ಜನತೆ ನಡೆದುಕೊಂಡು ಮನೆ ಸೇರುವುದು ಕಂಡು ಬಂದಿತು. ಇಂಥದರಲ್ಲಿ ಅನಗತ್ಯವಾಗಿ ಓಡಾಡುತ್ತಿರುವುದೇಕೆ ಎಂದು ಖಾಕಿಧಾರಿಗಳು ಅಲ್ಲಲ್ಲಿ ಲಾಠಿ ಬೀಸಿ ಜನರನ್ನು ಇನ್ನಷ್ಟು ಬೆಸ್ತು ಬೀಳುವಂತೆ ಮಾಡಿದ್ದು ಕಂಡು ಬಂದಿತು.
ಮಂಗಳವಾರ ಸಂಜೆಯಿಂದಲೇ ಆರಂಭವಾದ ಮಳೆ, ಬುಧವಾರ ಬೆಳಗಿನ ಸಮಯದಲ್ಲಿ ಕೊಂಚ ರಿಲೀಫ್ ನೀಡಿತ್ತು. ಆದರೆ ಮಧ್ಯಾಹ್ನ ಆಗುತ್ತಲೇ ಮತ್ತೇ ವರುಣದೇವ ಮಳೆಯನು ಧೋ, ಧೋ ಎಂದು ಸುರಿಸಲಾರಂಭಿಸಿದ.
ಹೀಗಿರುವಾಗ ಮಧ್ಯಾಹ್ನ ಎರಡು ಗಂಟೆಗೆ ಶುರುವಾದ ಮಳೆ ರಾತ್ರಿಯಾದರೂ ಸುರಿಯುತ್ತಲೇ ಇತ್ತು. ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಜಲಾವೃತವಾಗಿ ಯಾವುದೇ ವಾಹನಗಳು ಓಡಾಡದಂತಾಯಿತು. ಲಾಳಗೇರಿ ಕ್ರಾಸ್ದಿಂದ ಸೂಪರ್ ಮಾರ್ಕೇಟ್ ಸೇರುವ ರಸ್ತೆ, ಸಿದ್ದಿಪಾಶಾ ದರ್ಗಾದ ಮುಖ್ಯ ರಸ್ತೆ ಮೇಲೆ ಕೊಳಚೆ ನೀರು ನದಿಯಂತೆ ನೀರು ಹರಿಯಿತು. ಹೀಗಾಗಿ ಅನೇಕ ವಾಹನಗಳು ನೀರಲ್ಲಿ ನಿಲ್ಲಬೇಕಾಯಿತು.
ಲಾಕ್ಡೌನ್ ಹಿನ್ನೆಲೆಯಲ್ಲಿ ಮಧ್ಯಾಹ್ನ ಎರಡು ಗಂಟೆವರೆಗೆ ಮಾತ್ರ ಪೆಟ್ರೋಲ್ ಬಂಕ್ಗಳನ್ನು ತೆರೆಯಲು ಜಿಲ್ಲಾಡಳಿತ ಅನುಮತಿ ನೀಡಿದ್ದು, ನಂತರ ಪೆಟ್ರೋಲ್ ಡಿಸೈಲ್ ಇಲ್ಲದೇ ಜನತೆ ಪರದಾಡಿದ್ದು ಕಂಡು ಬಂದಿತು.
ನಗರದ ಸೂಪರ್ ಮಾರ್ಕೇಟ್, ಕಿರಾಣಾ ಬಜಾರ್, ಬಟ್ಟೆ ಬಜಾರ್, ಸರಾಫೆ ಬಜಾರ್,ಫೋರ್ಟ ರೋಡ, ಗಂಜ್ ಪ್ರದೇಶ, ತರಕಾರಿ ಮಾರುಕಟ್ಟೆಗಳು ಬಂದ್ ಆಗಿದ್ದವು. ಇಂದು ಲಾಕ್ಡೌನ್ನ ಎರಡನೇ ದಿನವಾಗಿತ್ತು. ಇನ್ನೂ ಐದು ದಿನ ಬಾಕಿ ಉಳಿದಿದೆ.