ಜಿಲ್ಲೆಯಲ್ಲಿ 36 ಅಭ್ಯರ್ಥಿಗಳಿಗಿಂತ ನೋಟಾಗೆ ಹೆಚ್ಚು ಮತ:5554 ಮಂದಿ ಯಾವ ಅಭ್ಯರ್ಥಿಗೂ ನೀಡಿಲ್ಲ ವೋಟು

ಜಿಲ್ಲೆಯಲ್ಲಿ 36 ಅಭ್ಯರ್ಥಿಗಳಿಗಿಂತ ನೋಟಾಗೆ ಹೆಚ್ಚು ಮತ:5554 ಮಂದಿ ಯಾವ ಅಭ್ಯರ್ಥಿಗೂ ನೀಡಿಲ್ಲ ವೋಟು
Published on

ಹಾಸನ: ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಗೆದ್ದವರ ಸಂಭ್ರಮ ಸೋತವರ ಸೋಲಿನ ಪರಾಮರ್ಶೆ ನಡೆಯುತ್ತಿದೆ. ಆದರೆ ಕಣದಲ್ಲಿ ಇದ್ದ ಅಭ್ಯರ್ಥಿಗಳಲ್ಲಿ ಯಾರಿಗೂ ನನ್ನ ಮತವಿಲ್ಲ ಎಂದು ಸೂಚಿಸುವ ‘ನೋಟಾ’ ಬಟನ್ ಒತ್ತಿದವರ ಸಂಖ್ಯೆಯೂ ಕೂಡ ಜಿಲ್ಲೆಯಲ್ಲಿ ಅಧಿಕವಾಗಿದೆ ಎಂಬುದು ವಿಶೇಷ.

ಚುನಾವಣೆಯಲ್ಲಿ ಮತದಾನ ಪ್ರತಿಯೊಬ್ಬರ ಹಕ್ಕಾಗಿದೆ. ಅದೇ ರೀತಿ ಅಭ್ಯರ್ಥಿಗಳ ಆಯ್ಕೆಯೂ ಕೂಡ ಅವರ ಜವಾಬ್ದಾರಿಯಾಗಿದೆ. ಹಾಗೆಯೇ ಕಣದಲ್ಲಿ ಸ್ಪರ್ಧೆ ಮಾಡಿರುವ ಯಾವ ಅಭ್ಯರ್ಥಿಗಳಿಗೂ ನನ್ನ ಮತ ಇಲ್ಲ ಎಂಬ ಹಕ್ಕನ್ನು ಕೂಡ ಜನರಿಗೆ ಚುನಾವಣಾ ಆಯೋಗ ನೀಡಿದೆ.

ಜಿಲ್ಲೆಯಲ್ಲಿ ಒಟ್ಟು 5,554 ಮತಗಳು ನೋಟಾ ಗುರುತಿಗೆ ಚಲಾವಣೆಯಾಗಿದೆ. ಕಳೆದ ಚುಣಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 7,814 ಮತಗಳು ನೋಟಾಗೆ ಚಲಾವಣೆಯಾಗಿದ್ದವು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಚುನಾವಣೆಯಲ್ಲಿ 2260 ಮತಗಳು ಕಡಿಮೆಯಾಗಿವೆ. ಸರ್ಕಾರಿ ನೌಕರರು ಅಂಚೆ ಮತದಾನ ಹಾಗೂ 80 ವರ್ಷ ಮೇಲ್ಪಟ್ಟವರು ಮತ್ತು ಅಂಗವಿಕಲರ ಮತದಾರರು ಮತ ಹಾಕುವ ಸಂದರ್ಭದಲ್ಲಿ ಸಣ್ಣ- ಪುಟ್ಟ ವ್ಯತ್ಯಾಸ ಮಾಡಿರುವುದರಿಂದ ಜಿಲ್ಲೆಯಲ್ಲಿ ಸುಮಾರು 725 ಮತಗಳು ತಿರಸ್ಕೃತಗೊಂಡಿವೆ. ಸಕಲೇಶಪುರದಲ್ಲಿ 43, ಶ್ರವಣಬೆಳಗೊಳದಲ್ಲಿ 132, ಬೇಲೂರಿನಲ್ಲಿ 66, ಅರಕಲಗೂಡಿನಲ್ಲಿ 156, ಅರಸೀಕೆರೆಯಲ್ಲಿ 45, ಹಾಸನದಲ್ಲಿ 135, ಹೊಳೆನರಸೀಪುರ 148 ಮತಗಳು ತಿರಸ್ಕೃತಗೊಂಡಿವೆ.

ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಜನರು ನೋಟಾಗೆ ಮತ ಹಾಕಿದ್ದಾರೆ. 1231 ಜನರು ಈ ಕ್ಷೇತ್ರದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಬೇಡ ಎಂಬುದಾಗಿ ತಮ್ಮ ಮತವನ್ನು ನೋಟಾಗೆ ಚಲಾಯಿಸಿದ್ದಾರೆ. ಈ ಚುನಾವಣೆಯಲ್ಲಿ ಎಚ್.ಕೆ. ಕುಮಾರಸ್ವಾಮಿ ವಿರುದ್ಧ ಸಿಮೆಂಟ್ ಮಂಜು ಅವರು ಗೆದ್ದಿರುವ ಅಂತರ ಕೇವಲ 2056. ಒಂದು ವೇಳೆ ನೋಟಾಗೆ ಬಿದ್ದ ಮತಗಳು ಕುಮಾರಸ್ವಾಮಿ ಅವರಿಗೆ ಬಂದಿದ್ದರೆ ಸೋಲಿನ ಅಂತರ ಕೇವಲ 825 ಆಗುತ್ತಿತ್ತು.

ಈ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿ ಪವನ್ ಕುಮಾರ್ 1002, ಕರುನಾಡು ಪಕ್ಷದ ಎಚ್.ಎಸ್.ಕುಮಾರಸ್ವಾಮಿ, 645,ಪ್ರಜಾಕೀಯ ಪಕ್ಷದ ಕೆ.ಎ. ಪ್ರತಾಪ್ 1000, ಕೆಆರ್‌ಎಸ್ ಪಕ್ಷದ ಪ್ರದೀಪ್ 414, ಪಕ್ಷೇತರರಾದ ರವಿ 314, ಎಂ.ಆರ್. ವೇಣು 793 ಮತಗಳನ್ನ ಪಡೆದಿದ್ದಾರೆ. ಅಂದರೆ ನೋಟಾಕ್ಕಿಂತ ಕಡಿಮೆ ಮತಗಳನ್ನು ಪಡೆದಿಕೊಂಡಿದ್ದಾರೆ.

ಅದೇ ರೀತಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ 888 ನೋಟಾ ಮತಗಳು ಬಂದಿದ್ದು, ಇದಕ್ಕಿಂತ ಕಡಿಮೆ ಮತ ಪಡೆದವರು ಬಿಎಸ್‌ಪಿಯ ಮಲ್ಲಯ್ಯ 463, ಕೆಆರ್‌ಎಸ್ ಪಕ್ಷದ ವಿ.ರಮೇಶ್ ಬೂವನಹಳ್ಳಿ 452, ಪಕ್ಷೇತರರಾದ ಆರ್.ಜಿ.ಸತೀಶ್ ರಾಮದೇವ್‌ಪುರ 80, ಎಚ್.ವಿ.ಸ್ವಾಮಿ 139 ಮತ ಪಡೆದಿದ್ದಾರೆ.

ಶ್ರವಣಬೆಳಗೊಳ ಕ್ಷೇತ್ರದಲ್ಲಿ 667 ನೋಟಾ ಮತಗಳು ಬಂದಿದ್ದು, ಬಿಎಸ್‌ಪಿಯ ಆರ್.ರಾಜ್ ಕುಂದೂರ್ 520, ಕೆಆರ್‌ಪಿಪಿ ಪಕ್ಷದ ಜೆ.ಕೆ. ಪವಿತ್ರಾ 225, ಪಕ್ಷೇತರರಾದ ಎಚ್.ಡಿ.ರೇವಣ್ಣ 298, ಶಿವಕುಮಾರ್ 160, ನಟರಾಜ್ 233, ಎಚ್.ಎಂ.ರವಿ 415, ಸುಬ್ರಮಣ್ಯ 539ಮತ ಪಡೆದಿದ್ದಾರೆ. ಇವರು ಸಹ ನೋಟಾಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದಾರೆ.

ಬೇಲೂರು ಕ್ಷೇತ್ರದಲ್ಲಿ 767ನೋಟಾ ಮತಗಳು ಬಂದಿದ್ದು, ಕೆ.ಆರ್‌ಎಸ್‌ನ ಆದೀಶ್ ಚೌಡನಹಳ್ಳಿ 475, ಆರ್‌ಪಿಐನ ಡಿ.ಡಿ.ಲೋಕೇಶ ದೇವಿಹಳ್ಳಿ 154, ಪಕ್ಷೇತರರಾದ ದಿನೇಶ್ ಗೌರಿರಾಮ್ 225, ಪರಮೇಶ್ 425, ಹನಿಕೆ ಪ್ರದೀಪ್ 256, ಜಾವಗಲ್ ಮಲ್ಲಿಕಾರ್ಜುನ್ 294, ಮಹೇಶ್ 563 ಮತ ಪಡೆದಿದ್ದಾರೆ. ಇವರಿಗಿಂತ ನೋಟಾಗೆ ಹೆಚ್ಚು ಮತ ಚಲಾವಣೆಯಾಗಿವೆ.

ಹೊಳೆನರಸೀಪುರ ಕ್ಷೇತ್ರದಲ್ಲಿ 760 ಮಂದಿ ನೋಟಾಗೆ ಮತ ಚಲಾಯಿಸಿದ್ದಾರೆ. ಇದಕ್ಕಿಂತ ಕಡಿಮೆ ಮತ ಪಡೆದವರು ಬಿಎಸ್‌ಪಿಯ ಎಚ್.ಕೆ. ತಾರೇಶ್ 694, ಪಕ್ಷೇತರ ಅಭ್ಯರ್ಥಿ ಡಿ.ಆರ್.ರಂಗಸ್ವಾಮಿ 449 ಮತ ಪಡೆದಿದ್ದಾರೆ.

ಅರಸೀಕೆರೆ ಕ್ಷೇತ್ರದಲ್ಲಿ 617 ನೋಟಾ ಮತಗಳು ಬಂದಿದ್ದು, ಇದಕ್ಕಿಂತ ಕಡಿಮೆ ಮತ ಪಡೆದವರು ಹೊಳೆಯಪ್ಪ 466, ಡಿ.ಕಿಶೋರ್ ಕುಮಾರ್ 456 ಮತ ಪಡೆದಿದ್ದಾರೆ.

ಅರಕಲಗೂಡಿನಲ್ಲಿ 624 ಮಂದಿ ನೋಟಾಗೆ ಮತ ಚಲಾಯಿಸಿದ್ದಾರೆ. ಕೆಆರ್‌ಎಸ್ ಪಕ್ಷದ ಎಚ್.ಟಿ. ಕೇಶವಮೂರ್ತಿ 575, ಭಾರತೀಯ ಡಾ.ಬಿ.ಆರ್ ಅಂಬೇಡ್ಕರ್ ಜನತಾ ಪಾರ್ಟಿಯ ಎಚ್.ಪಿ. ಮಂಜುನಾಥ 190, ಪಕ್ಷೇತರ ಅಭ್ಯರ್ಥಿಗಳಾದ ಪುಟ್ಟರಾಜ 381, ಬಿ.ಆರ್. ಪುನೀತ್ 386, ವಿಜಯ ಭಾರತಿ 136, ಎಂ.ಸಿ. ವಿಶ್ವನಾಥ, 473, ಎಂ.ಆರ್. ಶಿವಣ್ಣ 294, ಎಂ.ಜಿ. ಶ್ರೀನಿವಾಸ್ 555 ಮತ ಪಡೆದಿದ್ದಾರೆ.

2013ರಲ್ಲಿ ನೋಟಾ ಪರಿಚಯ

ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ನೋಟಾ ಆಯ್ಕೆಯನ್ನು 2013ರಲ್ಲಿ ಪರಿಚಯಿಸಲಾಯಿತು. 2013 ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್ ಆದೇಶದಂತೆ ಚುನಾವಣಾ ಆಯೋಗವು ಇವಿಎಂಗಳಲ್ಲಿ ನೋಟಾ ಬಟನ್‌ಅನ್ನು ಮತದಾನ ಫಲಕದಲ್ಲಿ ಕೊನೆಯ ಆಯ್ಕೆಯಾಗಿ ಸೇರಿಸಿತ್ತು. ಈ ನೋಟಾ ಚಿಹ್ನೆಯನ್ನು ಚುನಾವಣಾ ಸಮಿತಿಗಾಗಿ ಅಹಮದಾಬಾದ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಿಸೈನ್ ವಿನ್ಯಾಸಗೊಳಿಸಿದೆ.

ಏನಿದು ನೋಟಾ ಮತದಾನ?

ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ವಿಶೇಷವಾದ ಮಹತ್ವವಿದೆ. ಮತಗಳು ಕೇವಲ ಅಭ್ಯರ್ಥಿ ಗೆಲುವಿಗೆ ಕಾರಣವಾಗುವುದು ಮಾತ್ರವಲ್ಲದೇ, ಪ್ರಜಾತಂತ್ರದ ಭವಿಷ್ಯದ ಕೂಡ ನಿಂತಿದೆ. ಒಂದು ಮತದಿಂದ ಸಹ ಗೆದ್ದ ಅನೇಕ ಉದಾಹರಣೆಗಳಿವೆ. ಆದರೆ, ಇಂದಿನ ಪ್ರಜ್ಞಾವಂತ ಜನರು ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗೆ ಮತ ಹಾಕಲು ಇಷ್ಟವಿಲ್ಲದಿದ್ದರೆ ‘ಮೇಲಿನ ಯಾವುದೂ ಅಲ್ಲ’ ಅಥವಾ ನೋಟಾಕ್ಕೆ ಮತ ಹಾಕಲು ಅವಕಾಶ ನೀಡಲಾಗಿದೆ. ನೋಟಾಕ್ಕೆ ತನ್ನ ಮತ ಚಲಾಯಿಸುವ ಸಂದರ್ಭದಲ್ಲಿ ಮತದಾನದ ಹಕ್ಕನ್ನು ಹೊಂದಿರುವ ಒಬ್ಬ ವ್ಯಕ್ತಿಯು ತಾನು ಯಾರನ್ನೂ ಆಯ್ಕೆ ಮಾಡುವುದಿಲ್ಲ ಎಂದು ತೀರ್ಮಾನ ಮಾಡಿರುತ್ತಾನೆ ಎಂದರ್ಥ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net