ಜಿಲ್ಲೆಯಲ್ಲಿ 2ನೇ ಬಾರಿಗೆ ಮಾವು, ಹಲಸು ಮೇಳ!; ಮೇ 27 ರಿಂದ 3 ದಿನ ಆಯೋಜನೆ

mango
Published on

ಬೆಂಗಳೂರು ಗ್ರಾಮಾಂತರ: ಕರೊನಾ ಸಂಕಷ್ಟದ ಬಳಿಕ ನೆಲಕಚ್ಚಿರುವ ತೋಟಗಾರಿಕೆ ಬೆಳೆಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಜಿಲ್ಲಾ ತೋಟಗಾರಿಗೆ ಇಲಾಖೆ ಮಾವು ಹಾಗೂ ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜನೆಗೆ ಸಿದ್ಧತೆ ನಡೆಸಿದೆ.

ಈ ಹಿಂದೆ ಜಿಲ್ಲಾಧಿಕಾರಿ ಕರೀಗೌಡ ಅವಧಿಯಲ್ಲಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮಾವು ಮೇಳ ಆಯೋಜಿಸಲಾಗಿತ್ತು. ಆದರೆ ಎರಡು ವರ್ಷದಿಂದ ಕರೊನಾ ಕಾರಣದಿಂದ ಎಲ್ಲ ಚಟುವಟಿಕೆಗಳು ಬಂದ್ ಆಗಿತ್ತು. ಈಗ ಮತ್ತೊಮ್ಮೆ ಮಾವು ಹಾಗೂ ಹಲಸು ಮೇಳಕ್ಕೆ ಜಿಲ್ಲಾಡಳಿತ ಹಸಿರು ನಿಶಾನೆ ತೋರಿದ್ದು, ಮೇ 27ರಿಂದ 29ರವರೆಗೆ ಮೇಳ ಆಯೋಜಿಸಿದೆ.

50ಕ್ಕೂ ಹೆಚ್ಚು ಸ್ಟಾಲ್: ದೇವನಹಳ್ಳಿಯ ನಂದಿಉಪಚಾರ್ ಹೋಟೆಲ್ ಮುಂಭಾಗದ ರಾಣಿ ಸರ್ಕಲ್ ಬಳಿ ಮೇಳ ಆಯೋಜನೆಗೆ ಜಾಗ ಗುರುತಿಸಲಾಗಿದೆ. ಜಿಲ್ಲೆಯ ನಾಲ್ಕೂ ತಾಲೂಕುಗಳ ರೈತರಿಗೆ ಅನುಕೂಲವಾಗಲಿದೆ. ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ಮೇಳವೂ ಯಶಸ್ವಿಯಾಗಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರವಾಗಿದೆ. ಈ ಹಿಂದೆಯೂ ಇದೇ ಸ್ಥಳದಲ್ಲಿ ಆಯೋಜಿಸಿ ಯಶಸ್ವಿಯಾಗಿತ್ತು. 50ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ಮೇಳ ಒಳಗೊಳ್ಳಲಿದ್ದು, ಮಾವು ಹಾಗೂ ಹಲಸಿಗೆ ಪ್ರತ್ಯೇಕ ಸ್ಟಾಲ್‌ಗಳ ಸೌಲಭ್ಯ ಕಲ್ಪಿಸಲಾಗುವುದು.

7,586 ಹೆಕ್ಟೇರ್ ಮಾವು: ಜಿಲ್ಲೆಯಲ್ಲಿ 7,586 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಪ್ರಮುಖವಾಗಿ ತೋತಾಪುರಿ, ಮಲ್ಲಿಕಾ, ರಸಪುರಿ, ಸೇಂದೂರ ತಳಿಗಳಿಗೆ ಬೇಡಿಕೆ ಇದೆ, ವಾರ್ಷಿಕವಾಗಿ 22ರಿಂದ 25 ಸಾವಿರ ಮೆಟ್ರಿಕ್ ಟನ್ ಉತ್ಪಾದನೆಯಾಗಲಿದೆ. ಅದೇ ರೀತಿ 69.52 ಹೆಕ್ಟೇರ್ ಪ್ರದೇಶದಲ್ಲಿ ಹಲಸು ಬೆಳೆಯಲಾಗುತ್ತಿದ್ದು, 2100 ರಿಂದ 2242 ಮೆಟ್ರಿಕ್ ಟನ್ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಎರಡೂ ಹಣ್ಣುಗಳು ಜಿಲ್ಲೆಯ ಪ್ರಮುಖ ತೋಟಗಾರಿಕಾ ಬೆಳೆಯಾಗಿದ್ದು, ಗುಣಮಟ್ಟದ ಹಣ್ಣುಗಳ ನೇರ ಮಾರಾಟ ವ್ಯವಸ್ಥೆಯೊಂದಿಗೆ ರೈತರಿಗೆ ಉತ್ತಮ ಬೆಲೆ ಸಿಗಬೇಕು, ಗ್ರಾಹಕರಿಗೂ ರಿಯಾಯಿತಿ ದರದಲ್ಲಿ ಹಣ್ಣು ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ಮೇಳ ಹಮ್ಮಿಕೊಳ್ಳಲಾಗಿದೆ.

ತೂಬಗೆರೆ ಹಲಸಿಗೆ ಬೇಡಿಕೆ: ಜಿಲ್ಲೆಯಲ್ಲದೆ ರಾಜ್ಯದ ಎಲ್ಲ ಕಡೆಯಿಂದಲೂ ಬಹಳ ಬೇಡಿಕೆ ಇರುವ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹಲಸು ಈ ಬಾರಿಯ ಹಲಸಿನ ಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಲಿದೆ. ಹಲಸು ಋತುಮಾನ ಆಧಾರಿತ ಬೆಳೆಯಾಗಿದ್ದು, ಪ್ರಸ್ತುತ ಹಂಗಾಮಿನಲ್ಲಿ ಎರಡೂ ಬೆಳೆಗಳು ಕಟಾವಿಗೆ ಬಂದಿರುವ ಹಿನ್ನೆಲೆಯಲ್ಲಿ ಉತ್ತಮ ವಹಿವಾಟಿನ ನಿರೀಕ್ಷೆ ವ್ಯಕ್ತವಾಗಿದೆ.

ಸಚಿವರಿಂದ ಉದ್ಘಾಟನೆ: ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಮೇಳ ಉದ್ಘಾಟಿಸಲಿದ್ದು, ಶಾಸಕ ನಿಸರ್ಗ ನಾರಾಯಣಸ್ವಾಮಿ ಮೇಳದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ಜಿಪಂ ಸಿಇಒ ರೇವಣಪ್ಪ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ---

ಕರೊನಾ ಹಾಗೂ ಅಕಾಲಿಕ ಮಳೆ ಹಿನ್ನೆಲೆಯಲ್ಲಿ ತೋಟಗಾರಿಕೆ ಬೆಳೆಗಾರರು ಸಂಕಷ್ಟ ಎದುರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರಿಗೆ ಉತ್ತಮ ಬೆಲೆ ದೊರಕಿಸಿಕೊಡುವುದು, ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ತಾಜಾ ಹಣ್ಣುಗಳನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಮೇಳ ಆಯೋಜಿಸಲಾಗಿದೆ, ಜಿಲ್ಲೆಯಲ್ಲಿ ಇದು ಎರಡನೇ ಮೇಳವಾಗಿದ್ದು, ರೈತರಿಂದ ಗ್ರಾಹಕರಿಗೆ ನೇರ ಮಾರಾಟ ವ್ಯವಸ್ಥೆ ಇರಲಿದೆ. ಗುಣವಂತ, ಉಪನಿರ್ದೇಶಕ ತೋಟಗಾರಿಕೆ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net