ಜಿಲ್ಲೆಯಲ್ಲಿ 29,456 ಮಕ್ಕಳ ನೋಂದಣಿ

28 Dwd 3
Published on

ಧಾರವಾಡ: ಕೋವಿಡ್ ಅಲೆಯಿಂದಾಗಿ ಶಾಲೆ- ಕಾಲೇಜುಗಳ ಬಾಗಿಲು ತೆರೆದಿಲ್ಲ. ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ನಿರ್ಧರಿಸುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಆಯೋಜನೆ ಹಲವು ತಿಂಗಳಿಂದ ಡೋಲಾಯಮಾನವಾಗಿದೆ. ಇದೀಗ ಸರ್ಕಾರ ಮುಂದಿನ ತಿಂಗಳು ಪರೀಕ್ಷೆ ನಡೆಸುವುದಾಗಿ ದಿನಾಂಕ ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆಯಿಂದ ಸಿದ್ಧತೆಗಳು ಭರದಿಂದ ಸಾಗಿವೆ.
ಕರೊನಾ ಹಿನ್ನೆಲೆಯಲ್ಲಿ 2019- 20ನೇ ಸಾಲಿನಲ್ಲಿ 1ರಿಂದ 9ನೇ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಸದೆ ಮುಂದಿನ ತರಗತಿಗಳಿಗೆ ಕಳುಹಿಸಲಾಗಿತ್ತು. 2020-21ನೇ ಸಾಲಿನಲ್ಲೂ ಕರೊನಾ ಹಾವಳಿ ಮುಂದುವರಿದು ಭೌತಿಕ ತರಗತಿಗಳು ಜರುಗಿದ್ದು ಕೆಲ ತಿಂಗಳು ಮಾತ್ರ. ಈ ನಡುವೆ ಎಸ್ಸೆಸ್ಸೆಲ್ಸಿ ಆನ್​ಲೈನ್, ಆಫ್​ಲೈನ್ ತರಗತಿ ನಡೆದಿದ್ದು, ಪರೀಕ್ಷೆ ದಿನಾಂಕ ಮುಂದಕ್ಕೆ ಹೋಗುತ್ತಲೇ ಇತ್ತು. ಇದೀಗ ಶಿಕ್ಷಣ ಸಚಿವರು ಜು. 19 ಮತ್ತು 22ರಂದು ಪರೀಕ್ಷೆ ಜರುಗಿಸುವುದಾಗಿ ಘೋಷಿಸಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ 29,456 ವಿದ್ಯಾಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, 161 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಪರೀಕ್ಷೆಗೆ 2 ದಿನಗಳ ಮೊದಲು ಕೊಠಡಿ ಗಳನ್ನು ಸ್ಯಾನಿಟೈಸೇಷನ್ ಮಾಡಲಾಗುತ್ತದೆ. ಪ್ರತಿ ಕೇಂದ್ರದಲ್ಲಿ ಐಸೋಲೇಷನ್ ಕೊಠಡಿ, ಪ್ಯಾರಾ ಮೆಡಿಕಲ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ.
ಸೋಂಕಿತ ವಿದ್ಯಾರ್ಥಿಗಳಿದ್ದರೆ ಪ್ರತ್ಯೇಕ ಪರೀಕ್ಷಾ ಕೇಂದ್ರ ಮೀಸಲಿರಲಿದೆ. ಪ್ರತಿ ಪರೀಕ್ಷಾ ಕೊಠಡಿಯಲ್ಲಿ 12 ಮಕ್ಕಳಿಗೆ ಮಾತ್ರ ಆಸನ ವ್ಯವಸ್ಥೆ ಮಾಡಿ, ಜಿಗ್​ಜಾಗ್ ಮಾದರಿಯಲ್ಲಿ ಕೂಡಿಸಲಾಗುತ್ತದೆ. ಕೇಂದ್ರ ಮುಖ್ಯಅಧೀಕ್ಷಕ, ಕಸ್ಟೋಡಿಯನ್, ಮೊಬೈಲ್ ಸ್ವಾಧೀನಾಧಿಕಾರಿ, ಪ್ಯಾರಾ ಮೆಡಿಕಲ್ ಸಿಬ್ಬಂದಿ, ಕೊಠಡಿ ಮೇಲ್ವಿಚಾರಕರು, ವಾರ್ಗಾಧಿಕಾರಿ, ಸ್ಥಾನಿಕ ಜಾಗೃತ ದಳ, ಸಹಾಯಕರು, ಕಚೇರಿ ಸಿಬ್ಬಂದಿ ಸೇರಿ 3,650ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಎಲ್ಲರಿಗೂ ಕೋವಿಡ್ ಲಸಿಕೆಯನ್ನು ಕಡ್ಡಾಯಗೊಳಿಸಲಾಗಿದೆ.
ಪ್ರಶ್ನೆಪತ್ರಿಕೆ ಮಾದರಿ ವಿಭಿನ್ನ: ಪ್ರತಿವರ್ಷ ಕನ್ನಡ ಭಾಷೆಗೆ 125 ಹಾಗೂ ಉಳಿದ ವಿಷಯಗಳಿಗೆ 100 ಅಂಕ ಸಹಿತ 625 ಅಂಕಗಳಿಗೆ ಪರೀಕ್ಷೆ ನಡೆಯುತ್ತಿದ್ದವು. ಆದರೆ, ಈ ಬಾರಿಯ ಪ್ರಶ್ನೆಪತ್ರಿಕೆ ಸಂಪೂರ್ಣ ಭಿನ್ನವಾಗಿರಲಿದೆ. ಕೇವಲ 2 ದಿನ ಪರೀಕ್ಷೆ ನಡೆಯಲಿದ್ದು, ಕೋರ್ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜವಿಜ್ಞಾನ ಒಳಗೊಂಡ ಪತ್ರಿಕೆ 1 ಹಾಗೂ ಪ್ರಥಮ, ದ್ವಿತೀಯ, ತೃತೀಯ ಭಾಷೆಗಳನ್ನೊಳಗೊಂಡ ಪತ್ರಿಕೆ 2 ಇರಲಿದೆ. ವಿಷಯವೊಂದಕ್ಕೆ 40 ಅಂಕಗಳಿದ್ದು, 1 ಗಂಟೆಯ ಕಾಲಾವಕಾಶ ಇರಲಿದೆ. 40 ಅಂಕಗಳನ್ನು 80ಕ್ಕೆ ಪರಿವರ್ತಿಸಿ ಆಂತರಿಕ ಮೌಲ್ಯಮಾಪನದ 20 ಅಂಕಗಳನ್ನು ಸೇರಿಸಿ ಒಟ್ಟು 625 ಅಂಕಗಳಿಗೆ ಮೌಲ್ಯಮಾಪನ ನಡೆಸಲಾಗುತ್ತದೆ. ಪ್ರತಿ ಪತ್ರಿಕೆಯು 120 ಅಂಕಗಳನ್ನೊಳಗೊಂಡಿದ್ದು, ವಿದ್ಯಾರ್ಥಿಗಳು ಸಂಪೂರ್ಣ ಬಹು ಆಯ್ಕೆಯ ಪ್ರಶ್ನೆಗಳನ್ನು ಎದುರಿಸಲಿದ್ದಾರೆ.
ಎ, ಬಿ, ಸಿ ಶ್ರೇಣಿ: ಈ ಬಾರಿ 10ನೇ ತರಗತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಎ+, ಎ, ಬಿ, ಸಿ ಶ್ರೇಣಿ ಮಾದರಿಯಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ. 90- 100 ಅಂಕ ಪಡೆದವರಿಗೆ ಎ+ ಶ್ರೇಣಿ, 80- 89 ಎ ಶ್ರೇಣಿ, 60- 79 ಬಿ ಶ್ರೇಣಿ ಮತ್ತು 35- 59 ಅಂಕ ಪಡೆದವರಿಗೆ ಸಿ ಶ್ರೇಣಿ ನೀಡಲಾಗುತ್ತದೆ.
ತಂತ್ರಜ್ಞಾನ ಬಳಕೆ: ಕೋವಿಡ್​ನಿಂದಾಗಿ ತರಗತಿಗಳು ಭೌತಿಕವಾಗಿ ನಡೆಯದಿದ್ದರೂ ಜಿಲ್ಲೆಯ ಪ್ರತಿಯೊಂದು ಶಾಲೆಗಳಲ್ಲಿ ಶಿಕ್ಷಕರು ಆನ್​ಲೈನ್ ಮೂಲಕ ಮಕ್ಕಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾರ್ಗದರ್ಶನ ನೀಡುತ್ತಿದ್ದಾರೆ. ಜಿಲ್ಲೆಯ ನೋಡಲ್ ಅಧಿಕಾರಿ ಪ್ರಸನ್ನಕುಮಾರ ಮಾರ್ಗದರ್ಶನದಲ್ಲಿ ಡಿಡಿಪಿಐ (ಆಡಳಿತ ಹಾಗೂ ಅಭಿವೃದ್ಧಿ), ಕ್ಷೇತ್ರ ಶಿಕ್ಷಣಾಧಿಕಾರಿಗಳು, ನೋಡಲ್ ಅಧಿಕಾರಿಗಳು, ಪ್ರೌಢಶಾಲಾ ಮುಖ್ಯಾಧ್ಯಾಪಕರು, ಶಿಕ್ಷಕರು ಸಿದ್ಧತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ವಿದ್ಯಾರ್ಥಿಗಳಿಗೆ ಆನ್​ಲೈನ್​ನಲ್ಲೇ ನೂತನ ಮಾದರಿಯ ಪ್ರಶ್ನೆಪತ್ರಿಕೆ ನೀಡಿ ಪರೀಕ್ಷೆಗೆ ತಯಾರು ಮಾಡುತ್ತಿದ್ದಾರೆ. ಲಾಕ್​ಡೌನ್ ಅವಧಿಯಲ್ಲಿ ಶಿಕ್ಷಕರಿಗೆ ತಂತ್ರಜ್ಞಾನದ ತರಬೇತಿ ಆಯೋಜಿಸಲಾಗಿತ್ತು. ಪ್ರತಿ ತಾಲೂಕಿನಲ್ಲಿ ವೆಬಿನಾರ್​ಗಳ ವೇಳಾಪಟ್ಟಿ ಹಾಕಿಕೊಂಡು ಟೀಚ್​ವಿುಂಟ್, ಸರ್ವೆ ಹಾರ್ಟ್, ಗೂಗಲ್ ಫಾಮ್ರ್, ಕಹೂಟ್, ಜೋಡೋ, ಇತರ ತಂತ್ರಾಂಶಗಳ ತರಬೇತಿ ನೀಡಲಾಗಿದೆ.
ಜಿಲ್ಲಾದ್ಯಂತ ‘ಕಲಿಕಾ ಸೇತು’ ಪೂರ್ವಸಿದ್ಧತಾ ಪರೀಕ್ಷೆ, ‘ಮನನ- ಮಂಥನ’ ಆನ್​ಲೈನ್ ಕ್ವಿಜ್ ನಡೆಸಲಾಗಿದೆ. ಇದರಲ್ಲಿ ಶೇ. 65ರಷ್ಟು ವಿದ್ಯಾರ್ಥಿಗಳು ಪಾಲ್ಗೊಂಡಿರುವುದು ವಿಶೇಷ.

ದೂರದ ಊರುಗಳ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅವರು ಬಯಸಿದಲ್ಲಿ ಹತ್ತಿರದ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಇರಲಿದೆ. ಪ್ರಶ್ನೆಪತ್ರಿಕೆ ಸುಲಭ ಹಾಗೂ ನೇರ ಪ್ರಶ್ನೆಗಳಿರುವುದರಿಂದ ವಿದ್ಯಾರ್ಥಿಗಳು ಗೈರಾಗದೆ ನಿರಾತಂಕವಾಗಿ ಪರೀಕ್ಷೆ ಎದುರಿಸಬಹುದು. ಆತಂಕವಿಲ್ಲದೆ, ಧೈರ್ಯದಿಂದ ಪರೀಕ್ಷೆ ಎದುರಿಸಲು ಮಾರ್ಗದರ್ಶನ ಮಾಡಲಾಗುತ್ತಿದೆ.| ಮೋಹನಕುಮಾರ ಹಂಚಾಟೆ ಡಿಡಿಪಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net