ಜಿಲ್ಲೆಯಲ್ಲಿ 21 ರಿಂದ ಕೇಂದ್ರ ತಂಡದ ಪ್ರವಾಸ

CTD CEO-----04
Published on

ಚಿತ್ರದುರ್ಗ: ಕೇಂದ್ರ ತಂಡ ಆ.21 ರಿಂದ 23 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದು, ಜಲಸಂರಕ್ಷಣೆಗಾಗಿ ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ವೀಕ್ಷಣೆ ನಡೆಸಲಿದೆ ಎಂದು ಜಿಪಂ ಸಿಇಒ ಎಸ್.ಜೆ.ಸೋಮಶೇಖರ್ ಹೇಳಿದರು.
ಜಿಪಂದಲ್ಲಿ ಶನಿವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ ಅವರು, ನಾರಿ ಶಕ್ತಿಯಿಂದ ಜಲ ಶಕ್ತಿ ಎನ್ನುವ ಘೋಷವಾಕ್ಯದೊಂದಿಗೆ ಮಳೆ ನೀರು ಹಿಡಿದಿಟ್ಟುಕೊಳ್ಳುವ ಸಲುವಾಗಿ ಜಲಶಕ್ತಿ ಅಭಿಯಾನಕ್ಕೆ ರಾಜ್ಯದಲ್ಲಿ ಚಾಲನೆ ನೀಡಲಾಗಿದೆ. ಸರ್ಕಾರದಿಂದ ಕೈಗೊಂಡಿರುವ ಕಾಮಗಾರಿಗಳಲ್ಲಿ ಮಳೆ ನೀರು ಕೊಯ್ಲು ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಕಾಮಗಾರಿಗಳ ವಿವರ, ಮಾಹಿತಿಯನ್ನು ತಾಪಂ ಹಾಗೂ ಅ ನುಷ್ಠಾನ ಇಲಾಖೆಗಳು ಜಲಶಕ್ತಿ ಅಭಿಯಾನ ಪೋರ್ಟಲ್‌ನಲ್ಲಿ ತಪ್ಪದೇ ಅಪ್‌ಲೋಡ್ ಮಾಡಬೇಕೆಂದರು.
ಜಲ ಸಂರಕ್ಷಣೆಗೆ ಅಂತರ್‌ಇಲಾಖೆ ಸಮನ್ವಯ ಅಗತ್ಯವಿದೆ. ನಗರಾಭಿವೃದ್ಧಿ ಹಾಗೂ ಇತರೆ ಸ್ಥಳೀಯ ಆಡಳಿತ ಸಂಸ್ಥೆಗಳು ತಮ್ಮ ವ್ಯಾ ಪ್ತಿಯ ಚರಂಡಿ ಸ್ವಚ್ಛಗೊಳಿಸಬೇಕು. ಪುರಾತನ ಜಲ ಮೂಲಗಳ ಮರುಪೂರಣ, ಜಲಸಂರಕ್ಷಣೆಗೆ ವೈಜ್ಞಾನಿಕ ಪದ್ಧತಿಗಳನ್ನು ಕೈಗೊಳ್ಳಬೇ ಕು. ಭೂ ದಾಖಲೆಗಳ ಇಲಾಖೆ ಜಲ ಮೂಲಗಳ ಒತ್ತುವರಿಯಾಗದಂತೆ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.
ಕೃಷಿ ಇಲಾಖೆ ರೈತರಲ್ಲಿ ಜಲ ಸಂರಕ್ಷಣೆ ಮಹತ್ವದೆಡೆ ಅರಿವು ಮೂಡಿಸಬೇಕು. ಶಿಕ್ಷಣ ಇಲಾಖೆ ಪ್ರತಿ ಶಾಲೆಗಳಲ್ಲಿ ಜಲದೂತ ಅಭಿಯಾನ ಆರಂಭಿಸಿ ಮಕ್ಕಳಲ್ಲಿ ಜಲ ಸಂರಕ್ಷಣೆಯಡೆ ಜಾಗೃತಿ ಮೂಡಿಸಬೇಕು. ಗ್ರಾಪಂಗಳು ನರೇಗಾದಡಿ ಜಲಸಂರಕ್ಷಣೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು. ಕ್ರೀಡಾ ಇಲಾಖೆ ಮೇರಾ ಯುವ ಭಾರತ್ ಎನ್ನುವ ಸ್ವಯಂ ಸೇವಕ ಗುಂಪು ರಚಿಸಿ ಜಾಗೃತಿ ಮೂಡಿಸಬೇಕೆಂದರು.
ಕೇಂದ್ರ ತಂಡಕ್ಕೆ ಮಾಹಿತಿ ನೀಡಲು, ಭೇಟಿ ಸ್ಥಳ ಗುರುತಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಯಿತು. ಉಪಕಾರ‌್ಯದರ್ಶಿ ಕೆ.ತಿಮ್ಮಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ಬಸವನಗೌಡ ಪಾಟೀಲ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net