ಜಿಲ್ಲೆಯಲ್ಲಿ 2 ನೇ ಹಂತದ ಕರೊನಾ ಲಸಿಕೆ

8CBP2 (1)
Published on

ಚಿಕ್ಕಬಳ್ಳಾಪುರ :  ಜಿಲ್ಲೆಯಲ್ಲಿ 2 ನೇ ಹಂತದ ಕರೊನಾ ಲಸಿಕೆ ಹಾಕುವ ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಿದ್ದು ಹೆಸರು ನೋಂದಾಯಿಸಿಕೊಂಡಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಲಸಿಕೆ ಹಾಕಿಸಿಕೊಂಡರು.

ಎರಡನೇ ಹಂತದಲ್ಲಿ ಕಂದಾಯ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಪೊಲೀಸ್ ಇಲಾಖೆ ಮತ್ತು ನಗರಸಭೆ ಸಿಬ್ಬಂದಿ ಸೇರಿ 5158 ಮಂದಿಗೆ ಲಸಿಕೆ ಹಾಕಲು ಗುರುತಿಸಿದ್ದು ಚಿಕ್ಕಬಳ್ಳಾಪುರದ ಜಿಲ್ಲಾಸ್ಪತ್ರೆ, ಸಿಎಸ್‌ಐ ಆಸ್ಪತ್ರೆ, ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರ, ಬಾಗೇಪಲ್ಲಿಯ ಗೂಳೂರು ಸಮುದಾಯ ಆರೋಗ್ಯ ಕೇಂದ್ರ ಹಾಗೂ 6 ತಾಲೂಕು ಆಸ್ಪತ್ರೆಗಳ 17 ಯೂನಿಟ್‌ಗಳಲ್ಲಿ ನಿಯಮಾನುಸಾರ ಲಸಿಕೆ ಹಾಕಲಾಯಿತು.

ಈ ಮೊದಲೇ ನೋಂದಾಯಿತರಿಗೆ ಕೌನ್ಸೆಲಿಂಗ್ ನಡೆಸಿ ಯಾವುದೇ ಅತಂಕ, ಗೊಂದಲಕ್ಕೆ ಒಳಗಾಗದಿರಲು ಮೊದಲೇ ಸೂಕ್ತ ಮಾರ್ಗದರ್ಶನ ನೀಡಲಾಗಿತ್ತು. ಅದರಂತೆ ಸಿಬ್ಬಂದಿ ಲಸಿಕೆ ಹಾಕಿಸಿಕೊಂಡರು. ಈಗಾಗಲೇ ಮೊದಲ ಹಂತದಲ್ಲಿ ವೈದ್ಯರು, ಶುಶ್ರೂಷಕಿಯರನ್ನೊಳಗೊಂಡಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಸೇರಿ 8955 ಮಂದಿ ಹೆಸರು ನೋಂದಾಯಿಸಿಕೊಂಡು, ಎಲ್ಲರೂ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದೇ ಮಾದರಿಯಲ್ಲಿ ಎರಡನೇ ಹಂತದ ಅಭಿಯಾನ ಯಶಸ್ವಿಗೊಳಿಸಲು ಶ್ರಮಿಸಲಾಗುತ್ತಿದೆ. ಈಗಾಗಲೇ ಕರೊನಾ ಲಸಿಕಾ ಅಭಿಯಾನ ವಿಚಾರವಾಗಿ ಜಿಲ್ಲಾಧಿಕಾರಿ ಆರ್.ಲತಾ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಭೆಗಳನ್ನು ನಡೆಸಿ ಸಲಹೆ ಸೂಚನೆ ನೀಡಿದ್ದಾರೆ.

ಆಯಾ ತಾಲೂಕು ಮಟ್ಟದಲ್ಲಿ ಕೈಗೊಂಡಿರುವ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಜಿಲ್ಲೆಯಲ್ಲಿ ಕರೊನಾ ಸೋಂಕು ಹಂತ ಹಂತವಾಗಿ ನಿಯಂತ್ರಣಕ್ಕೆ ಬರುತ್ತಿದೆ. ಸೋಂಕಿತರು ಚಿಕಿತ್ಸೆಯನ್ನು ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ. ಇದರಿಂದ ಸಕ್ರಿಯ ಪ್ರಕರಣಗಳು ಸಂಖ್ಯೆಯು ಇಳಿಮುಖವಾಗುತ್ತಿದೆ. ಜಿಲ್ಲೆಯನ್ನು ಕರೊನಾ ಮುಕ್ತ ಚಿಕ್ಕಬಳ್ಳಾಪುರವನ್ನಾಗಿಸಲು ಜನರು ಮಾರ್ಗಸೂಚಿ ನಿಯಮಗಳನ್ನು ಪಾಲಿಸುವುದರ ಜತೆಗೆ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.

30 ಸಕ್ರಿಯ ಪ್ರಕರಣಗಳು: ಜಿಲ್ಲೆಯಲ್ಲಿ 13,648 ಸೋಂಕು ಪ್ರಕರಣಗಳು ದೃಢಪಟ್ಟಿದ್ದು ಈ ಪೈಕಿ 13,500 ಮಂದಿ ಸೋಂಕು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 118 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು 30 ಸಕ್ರಿಯ ಪ್ರಕರಣಗಳು ಉಳಿದಿವೆ. ಪ್ರಸ್ತುತ 4,20,149 ಜನರ ಗಂಟಲು ದ್ರವ ಮಾದರಿಯನ್ನು ಪರೀಕ್ಷಿಸಿದ್ದು ಇದರಲ್ಲಿ 406501 ಮಂದಿ ಮಾದರಿ ಪರೀಕ್ಷೆ ನೆಗೆಟಿವ್ ಆಗಿದೆ. ಸೋಮವಾರ ಜಿಲ್ಲೆಯ ಚಿಕ್ಕಬಳ್ಳಾಪುರ 3, ಗೌರಿಬಿದನೂರು 2 ಸೇರಿ 5 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಚಿಕ್ಕಬಳ್ಳಾಪುರ 4, ಬಾಗೇಪಲ್ಲಿ, ಚಿಂತಾಮಣಿ ಮತ್ತು ಶಿಡ್ಲಘಟ್ಟ ತಲಾ 1 ಒಬ್ಬರು ಸೇರಿ 7 ಮಂದಿ ಸೋಂಕು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net