

ಹಾವೇರಿ: ಸರ್ಕಾರಿ ವೈದ್ಯ, ನೇತ್ರಾಧಿಕಾರಿ, ಆರೋಗ್ಯ ಹಾಗೂ ಶಿಕ್ಷಣ ಇಲಾಖೆ ಉದ್ಯೋಗಿಗಳು ಸೇರಿ ಜಿಲ್ಲೆಯಲ್ಲಿ ಗುರುವಾರ 155 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ. 101 ಮಂದಿ ಗುಣವಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ 4,792 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಅದರಲ್ಲಿ 3,262 ಜನರು ಗುಣವಾಗಿದ್ದು, 119 ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. 1,411 ಸಕ್ರಿಯ ಪ್ರಕರಣಗಳಿದ್ದು, ಆ ಪೈಕಿ 1,047 ಸೋಂಕಿತರು ಹೋಂ ಐಸೋಲೇಷನ್ನಲ್ಲಿ, 364 ಸೋಂಕಿತರು ಕೋವಿಡ್ ಕೇರ್ ಆಸ್ಪತ್ರೆ, ಕೋವಿಡ್ ಕೇರ್ ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್ಗಳಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ತಾಲೂಕುವಾರು ವಿವರ: ರಾಣೆಬೆನ್ನೂರ ತಾಲೂಕಿನಲ್ಲಿ 44, ಹಾನಗಲ್ಲ ಹಾಗೂ ಶಿಗ್ಗಾಂವಿ ತಾಲೂಕಿನಲ್ಲಿ ತಲಾ 24, ಹಾವೇರಿ 21, ಹಿರೇಕೆರೂರ 19, ಬ್ಯಾಡಗಿ 12, ಸವಣೂರ ತಾಲೂಕಿನಲ್ಲಿ 9 ಹಾಗೂ ಶಿವಮೊಗ್ಗ ಹಾಗೂ ಬಳ್ಳಾರಿ ಜಿಲ್ಲೆಯ ಇಬ್ಬರಿಗೆ ಗುರುವಾರ ಸೋಂಕು ದೃಢಪಟ್ಟಿದೆ.
ಸೋಂಕಿನಿಂದ ಗುಣವಾಗಿ ಶಿಗ್ಗಾಂವಿ ತಾಲೂಕಿನ 32, ರಾಣೆಬೆನ್ನೂರ 18, ಬ್ಯಾಡಗಿ 17, ಹಾವೇರಿ 15, ಸವಣೂರ 9, ಹಾನಗಲ್ಲ 8, ಹಿರೇಕೆರೂರ ತಾಲೂಕಿನ ಇಬ್ಬರು ಆಸ್ಪತ್ರೆಯಿಂದ ಗುರುವಾರ ಬಿಡುಗಡೆಯಾಗಿದ್ದಾರೆ.
ಸೋಂಕಿತರ ನಿವಾಸದ ಪ್ರದೇಶವನ್ನು ನಿಯಮಾನುಸಾರ ಕಂಟೇನ್ಮೆಂಟ್ ಜೋನ್ ಹಾಗೂ ಬಫರ್ ಜೋನ್ ಆಗಿ ಘೊಷಿಸಲಾಗಿದೆ. ಆಯಾ ತಾಲೂಕು ದಂಡಾಧಿಕಾರಿಗಳನ್ನು ಇನ್ಸಿಡೆಂಟ್ ಕಮಾಂಡರ್ ಆಗಿ ನೇಮಿಸಲಾಗಿದೆ.
ನಾಲ್ವರ ಸಾವು: ರಾಣೆಬೆನ್ನೂರ ತಾಲೂಕಿನ ಹೊನ್ನತ್ತಿ ಗ್ರಾಮದ 70 ವರ್ಷದ ವೃದ್ಧೆ, ಹಿರೇಕೆರೂರ ತಾಲೂಕಿನ ದೊಡ್ಡಗುಬ್ಬಿ ಗ್ರಾಮದ 72 ವರ್ಷದ ವೃದ್ಧ, ಶಿಗ್ಗಾಂವಿ ತಾಲೂಕಿನ ಚಾಕಾಪುರದ 45 ವರ್ಷದ ಪುರುಷ, ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿಯ 70 ವರ್ಷದ ವೃದ್ಧ ಸೇರಿ ನಾಲ್ವರ ಮರಣವನ್ನು ಗುರುವಾರ ದೃಢೀಕರಿಸಲಾಗಿದೆ. ಕೋವಿಡ್ ನಿಯಮಾನುಸಾರ ಅವರ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.