ಬೆಳಗಾವಿ: ಜಿಲ್ಲೆಯಲ್ಲಿ 118 ಜನರ ಮೇಲೆ ನಿಗಾ

20 BGV Jaggu 3-Web
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗಲು ಬರುವ ಸಿಬ್ಬಂದಿಯನ್ನು ಶುಕ್ರವಾರ ಆರೋಗ್ಯ ಇಲಾಖೆಯಿಂದ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಒಳ ಬಿಡಲಾಯಿತು.
Published on

ಬೆಳಗಾವಿ: ಜಿಲ್ಲೆಗೆ ವಿದೇಶದಿಂದ ಇದುವರೆಗೆ 134 ಜನರು ಆಗಮಿಸಿದ್ದು, ಅವರಲ್ಲಿ ಮೂವರು 28 ದಿನಗಳ ಗೃಹ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ಯಾವುದೇ ಪ್ರಕರಣದಲ್ಲೂ ಸೋಂಕು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 118 ಜನರನ್ನು ಅವರವರ ಮನೆಯಲ್ಲಿಯೇ ನಿಗಾದಲ್ಲಿಡ ಲಾಗಿದೆ. ಅಲ್ಲದೆ, 17 ಜನರು 14 ದಿನಗಳ ಗೃಹ ನಿಗಾ ಅವಧಿಯನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ. ಇದುವರೆಗೆ ಇಬ್ಬರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲ ಪ್ರಯಾಣಿಕರಿಗೆ ಹಾಗೂ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯ ಗಡಿಯಲ್ಲಿ ಗೋವಾ ಮತ್ತು ಮಹಾರಾಷ್ಟ್ರದಿಂದ ಬಸ್ ಮೂಲಕ ಆಗಮಿಸುವ ಪ್ರಯಾಣಿಕರನ್ನು ಕೂಡ ಆರೋಗ್ಯ ಇಲಾಖೆ ತಂಡಗಳು ತಪಾಸಣೆ ನಡೆಸುತ್ತಿವೆ. ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರು ಹಾಗೂ ಸಿಬ್ಬಂದಿಯ ಸ್ಕ್ರೀನಿಂಗ್ ಕೂಡ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ದೇವಸ್ಥಾನ ಬಂದ್: ಕರೊನಾ ವೈರಸ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ಬೆಳಗಾವಿಯ ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನದ ಬಾಗಿಲು ಮುಚ್ಚಲಾಗಿದೆ. ಭಕ್ತರು ದೇವಸ್ಥಾನಕ್ಕೆ ಬರದಂತೆ ದೇಗುಲದ ಟ್ರಸ್ಟಿಗಳು ಮನವಿ ಮಾಡಿದ್ದಾರೆ. ಗೊಡಚಿ ವೀರಭದ್ರೇಶ್ವರ, ಸವದತ್ತಿ ಯಲ್ಲಮ್ಮ ದೇಗುಲ, ಚಿಕ್ಕೋಡಿಯ ವೀರಭದ್ರ ಮಂದಿರಗಳಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸಿ ಲಕ ಅಳವಡಿಸಲಾಗಿದೆ.

445 ಬಸ್‌ಗಳ ಸಂಚಾರ ಸ್ಥಗಿತ

ಮಾ. 20ರಿಂದ ಗೋವಾ ಮತ್ತು ಮಹಾರಾಷ್ಟ್ರಕ್ಕೆ ಸಂಚರಿಸುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಸಂಚಾರ ರದ್ದು ಪಡಿಸಲಾಗಿದೆ. ನಿತ್ಯ ಮಹಾರಾಷ್ಟ್ರದ ಮುಂಬೈ, ಔರಂಗಾಬಾದ್, ನಾಸಿಕ್, ಪಿಂಪ್ರಿ, ಸೊಲ್ಲಾಪುರ, ಪುಣೆ, ಮಿರಜ್, ಕೊಲ್ಲಾಪುರ ಸೇರಿದಂತೆ ವಿವಿಧ ನಗರ ಪ್ರದೇಶಗಳಿಗೆ ಚಿಕ್ಕೋಡಿ ವಿಭಾಗದಿಂದ ನಿತ್ಯ 195 ಬಸ್ ಹಾಗೂ ಬೆಳಗಾವಿ ವಿಭಾಗದಿಂದ 250 ಬಸ್‌ಗಳ ಸಂಚಾರವನ್ನು ಬೆಳಗಾವಿ ಜಿಲ್ಲಾಡಳಿತ ಸ್ಥಗಿತಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net