

ರಾಯಚೂರು: ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿಂದ ಮಳೆಯಾಗದ ಕಾರಣ ಬಿತ್ತನೆ ಮಾಡಿರುವ ಬೆಳೆಗಳು ಒಣಗಿ ಹೋಗುತ್ತಿದ್ದು, ಕೂಡಲೇ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಿಸಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಿದೆ.
ಸಂಘದ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಶುಕ್ರವಾರ ಮನವಿ ಸಲ್ಲಿಸಿ, ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು ಅಗತ್ಯ ಕ್ರಮಕೈಗೊಳ್ಳಬೇಕು. ಕಾಲುವೆಗೆ ಸಮರ್ಪಕ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಮಳೆ ನಂಬಿಕೊಂಡು ರೈತರು ಬಿತ್ತನೆ ಮಾಡಿದ್ದು, ಮುಂಗಾರು ವಿಲವಾಗಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆ ಮತ್ತು ರಾಜೋಳ್ಳಿಬಂಡಾ ಆರ್‌ಡಿಸಿ ಕಾಲುವೆಗೆ ನೀರು ಬಾರದಿರುವುದು ಭತ್ತ ನಾಟಿ ಮಾಡಿದ ರೈತರು ಕಂಗಾಲಾಗಿದ್ದಾರೆ.
ಕೂಡಲೆ ರಾಜೋಳ್ಳಿಬಂಡಾ ಆಣೆಕಟ್ಟೆಯಿಂದ ಕಾಲುವೆಗೆ ನೀರು ಹರಿಸಬೇಕು. ರೈತರಿಗೆ ದಿನದ 12 ಗಂಟೆ ವಿದ್ಯುತ್ ನೀಡಬೇಕು. ತುಂಗಭದ್ರಾ ಎಡದಂಡೆ ಕಾಲುವೆಯ ಮಟಮಾರಿ ಮತ್ತು ಯರಗೇರಾ ಭಾಗದ ಭೂಮಿಗಳಿಗೆ ನೀರು ಹರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಪದಾಕಾರಿಗಳಾದ ನರಸಿಂಹರಾವ್ ಕುಲಕರ್ಣಿ, ಮಜೀದ್ ಸಾಬ್, ಈರೇಶ, ಜಿ.ಹುಲಿಗಪ್ಪ, ಜಿ.ರಮೇಶ, ನರಸರೆಡ್ಡಿ, ತಿಮ್ಮಪ್ಪ, ದೇವಪ್ಪ, ಅಕ್ಕಮ್ಮ, ನರಸಪ್ಪ ಯಾದವ ಇದ್ದರು.