

ಬೆಂಗಳೂರು ಗ್ರಾಮಾಂತರ: ಹವಾಮಾನ ವೈಪರೀತ್ಯದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಜಿಲ್ಲೆಯನ್ನು ಅಕ್ಷರಶಃ ನಡುಗಿಸಿದೆ. ಬರಪೀಡಿತ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆ 15 ದಿನಗಳಿಂದ ಮಲೆನಾಡಿನಂತಾಗಿದೆ.
ಒಂದೆಡೆ ಕೆರೆ-ಕಟ್ಟೆಗಳು ಭರ್ತಿಯಾಗುತ್ತಿದ್ದರೆ ಮತ್ತೊಂದೆಡೆ ಭಾರಿ ಅನಾಹುತ ಸೃಷ್ಟಿಯಾಗಿದೆ. ರಾಗಿ ಬಂಪರ್ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಅಕಾಲಿಕ ಮಳೆ ಗಾಯದ ಮೇಲೆ ಬರೆ ಎಳೆದಿದೆ. ಈ ಬಾರಿ ಮಳೆ ಜಿಲ್ಲೆಯಲ್ಲಿ ಇಬ್ಬರ ಪ್ರಾಣ ತೆಗೆದುಕೊಂಡಿದೆ. ಹೊಸಕೋಟೆ ತಾಲೂಕಿನಲ್ಲಿ 10 ದಿನಗಳ ಅವಧಿಯಲ್ಲಿ ಮಳೆ ಕಾರಣಕ್ಕೆ ಮನೆಗೋಡೆ ಕುಸಿದು ಇಬ್ಬರು ಪ್ರಾಣಬಿಟ್ಟಿದ್ದಾರೆ.
ಟಿಪ್ಪುಕೋಟೆ ಕುಸಿತ: 600 ವರ್ಷಗಳ ಇತಿಹಾಸವಿರುವ. ದೇವನಹಳ್ಳಿಯ ಟಿಪ್ಪು ಕೋಟೆ ಹೊರಭಾಗದ ಬಸರಿ ಗುಂಬಸ್ ಕುಸಿದಿದೆ. ಅಲ್ಲದೆ ಪಟ್ಟಣದ ಹಲವು ಮನೆ ಗೋಡೆಗಳು ನೆಲಕಚ್ಚಿವೆ.
ಮನೆ ಕುಸಿದು ವೃದ್ಧೆ ಸಾವು: ಹೊಸಕೋಟೆ ತಾಲೂಕು ಜಡಿಗೇನಹಳ್ಳಿ ಹೋಬಳಿಯ ಮುಗಬಾಳದಲ್ಲಿ ಗುರುವಾರ ರಾತ್ರಿ ಮನೆ ಕುಸಿದು ಲಕ್ಷ್ಮಮ್ಮ(73) ಎಂಬಾಕೆ ಮೃತಪಟ್ಟಿದ್ದಾರೆ. ಸಚಿವ ಎಂಟಿಬಿ ನಾಗರಾಜ್ ಶುಕ್ರವಾರ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು. ವೈಯಕ್ತಿಕವಾಗಿ 25 ಸಾವಿರ ರೂ.ಆರ್ಥಿಕ ನೆರವು ನೀಡಿದರು. ತಾಲೂಕಿನಲ್ಲಿ ಶಿಥಿಲಗೊಂಡ ಮನೆಗಳ ಸರ್ವೇ ಮಾಡಿ ಬೀಳುವ ಹಂತದಲ್ಲಿರುವ ಮನೆಗಳಲ್ಲಿ ವಾಸಿಸುತ್ತಿರುವವರನ್ನು ಕೂಡಲೇ ತೆರವುಗೊಳಿಸಿ ಮರು ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಶಿಥಿಲ ಕಟ್ಟಡಗಳಿಗೆ ಕಾಯಕಲ್ಪ: ಹೊಸಕೋಟೆ ತಾಲೂಕಿನಲ್ಲಿ ಹಲವು ಸರ್ಕಾರಿ ಕಟ್ಟಡಗಳು ಶಿಥಿಲಗೊಂಡಿವೆ. ಇವುಗಳ ನವೀಕರಣ ಅಥವಾ ಹೊಸ ಕಟ್ಟಡ ನಿರ್ಮಾಣದ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಶೀಘ್ರದಲ್ಲೇ ಕಾರ್ಯರೂಪಕ್ಕೆ ಬರಲಿದೆ ಎಂದು ಎಂಟಿಬಿ ಹೇಳಿದರು.
ಶಾಸಕರಿಂದ ಸಾಂತ್ವನ: ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಶರತ್ ಬಚ್ಚೇಗೌಡ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಪರಿಹಾರ ನೀಡುವ ಭರವಸೆ ನೀಡಿದರು. ವೈಯಕ್ತಿಕವಾಗಿ ಆರ್ಥಿಕ ಸಹಾಯ ಮಾಡಿದರು. ಕಂದಾಯ ಇಲಾಖೆಯ ಅಧಿಕಾರಿ ಚಂದ್ರಶೇಖರ್, ಪಿಡಿಒ ಶ್ರೀಧರ್, ಮುಖಂಡರಾದ ರಾಜಣ್ಣ ಅನ್ವರ್, ಶ್ರೀಧರ್, ತಿಮ್ಮಣ್ಣ ಹಾಜರಿದ್ದರು.