

ಭಾಲ್ಕಿ: ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಯಡಿ ಅನುದಾನ ಮಂಜೂರಾತಿ ಮಾಡಿಸಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.
ತಾಲೂಕಿನ ವಿವಿಧೆಡೆ ಬುಧವಾರ ವಿವಿಧ ಯೋಜನೆಯಡಿ ಸುಮಾರು ೧೫.೬೫ ಕೋಟಿ ರೂ ಅನುದಾನದ ರಸ್ತೆ, ಚರಂಡಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲೇ ಬೀದರ್ ಮಾದರಿ ಜಿಲ್ಲೆಯನ್ನಾಗಿಸುವ ಗುರಿ ಹೊಂದಿದ್ದೇನೆ. ನಾನು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಜಿಲ್ಲೆಯ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿವೆ. ತಾಲೂಕಿನ ಗ್ರಾಮೀಣ ಭಾಗದ ವಿವಿಧೆಡೆ ರಸ್ತೆ, ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇನೆ. ಗುಣಮಟ್ಟದ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರಿಗೆ ಸೂಚನೆ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕರಾವ ಕಣಜಿಕರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಡಿವಾಳಪ್ಪ ಮಂಗಲಗಿ, ತಾಪಂ ಮಾಜಿ ಸದಸ್ಯರಾದ ಲಿಂಗರಾಜ ಖಂಡಾಳೆ, ಶಿವರಾಜ ಬಾಜೋಳಗಾ ಇತರರಿದ್ದರು.