

ಹಾಸನ: ಜಿಲ್ಲೆ ರಾಜಕೀಯವಾಗಿ, ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಹೊಯ್ಸಳರ ನಾಡಿನಲ್ಲಿ, ಶಾಂತಲೆಯ ಬೀಡಿನಲ್ಲಿ ಪ್ರಾಮಾಣಿಕವಾಗಿ ಜನರ ಸಮಸ್ಯೆಯನ್ನು ಅರಿತು ಕೆಲಸ ಮಾಡುವುದಾಗಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸಂಪ್ರದಾಯದಂತೆ ಜಿಲ್ಲೆಗೆ ಬಂದಂತಹ ಜಿಲ್ಲಾಧಿಕಾರಿಗಳನ್ನು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಗುರುವಾರ ಸನ್ಮಾನಿಸಿ ಗೌರವಿಸಿದ ನಂತರ ಮಾತನಾಡಿದ ಅವರು, ಇಡೀ ಜಿಲ್ಲೆ ರಾಜ್ಯದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ನನ್ನ ಅವಧಿಯಲ್ಲಿ ದೀನ, ದಲಿತರು ಸೇರಿದಂತೆ ಎಲ್ಲ ವರ್ಗದವರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಈಗಾಗಲೇ ಇಲಾಖೆವಾರು ಸಭೆಗಳನ್ನು ನಡೆಸಿ ಮಾಹಿತಿ ಪಡೆದುಕೊಂಡಿದ್ದೇನೆ. ಆರೋಗ್ಯ ಇಲಾಖೆ ಲಸಿಕೆ ವಿಷಯದಲ್ಲಿ ಸಾಕಷ್ಟು ಹಿಂದೆ ಉಳಿದಿದ್ದು ಅದರ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು. ಇದಲ್ಲದೆ ಈಗಾಗಲೇ ಮಳೆಗಾಲ ಆರಂಭವಾಗಿರುವುದರಿಂದ ಜನರಿಗೆ ತೊಂದರೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ. ಅಧಿಕಾರಿಗಳ ಜೊತೆ ನಿರಂತರವಾಗಿ ಸಭೆ ನಡೆಸಲಾಗುತ್ತಿದೆ ಎಂದರು.
ಮಳೆ ಅವಘಡಯಿಂದ ಮಂಗಳವಾರ ಅರಸೀಕೆರೆಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಪರಿಹಾರ ಧನವನ್ನು ಕೂಡ ವಿತರಿಸಲಾಗಿದೆ. ಮುಂದೆ ಈ ರೀತಿ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ಮುಂಬರುವ ಹಾಸನಾಂಬ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಲಾಗಿದೆ ಎಂದರು.
ಇದಕ್ಕೂ ಮೊದಲು ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ಬಿ ಮದನ್ ಗೌಡ, ಜಿಲ್ಲೆಗೆ ಆಗಮಿಸುವಂತಹ ಜಿಲ್ಲಾಧಿಕಾರಿಗಳನ್ನು ಕರೆದು ಗೌರವಿಸುವಂತಹ ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದ್ದೇವೆ. ಇಲ್ಲಿ ಬಂದಿರುವಂತಹ ಹಲವು ಅಧಿಕಾರಿಗಳು ಇಂದು ರಾಜ್ಯ ಸರ್ಕಾರದ ಉನ್ನತ ಹುದ್ದೆಯಲ್ಲಿದ್ದಾರೆ. ನೀವು ಕೂಡ ಮುಂದೆ ಉನ್ನತ ಸ್ಥಾನಕ್ಕೆ ಹೋಗಲಿ ಹಾಗೂ ಜಿಲ್ಲೆಯಲ್ಲಿ ನಿಮ್ಮ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಲಿ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳು ಗೋಪಾಲ್, ಪ್ರಧಾನ ಕಾರ್ಯದರ್ಶಿ ಮಂಜು ಬನವಾಸೆ, ವಾರ್ತಾಧಿಕಾರಿ ವಿನೋದ್ ಚಂದ್ರ ಸೇರಿದಂತೆ ಇನ್ನಿತರರು ಹಾಜರಿದ್ದರು.