ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬದ್ಧ

CTD 22 SANMANA (2)--05
Published on


ಥೀಮ್ ಪಾರ್ಕ್ ನಿರ್ಮಾಣ ದುರ್ಗೋತ್ಸವ, ಮದಕರಿ ನಾಯಕ ಉತ್ಸವ ಆಚರಣೆಗೆ ಚಿಂತನೆ ಸಚಿವ ಡಿ.ಸುಧಾಕರ್ ಭರವಸೆ
ಚಿತ್ರದುರ್ಗ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಭರವಸೆ ನೀಡಿದರು.

ಜಿಲ್ಲಾ ನಾಯಕ ಸಮಾಜ ರೆಡ್ಡಿ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಿಲ್ಲಾ ಕೇಂದ್ರದಲ್ಲಿ ಆರಂಭವಾಗಲಿರುವ ವೈದ್ಯಕೀಯ ಕಾಲೇಜಿಗೆ ಮದಕರಿನಾಯಕ ಹೆಸರು, ಥೀಮ್ ಪಾರ್ಕ್ ನಿರ್ಮಾಣ ಮತ್ತು ಉತ್ಸವ, ದುರ್ಗೋತ್ಸವ, ರಾಷ್ಟ್ರೀಯ ಹೆದ್ದಾರಿಯಿಂದ ಕೋಟೆ ದ್ವಾರದವರೆಗೂ ಗುಣಮಟ್ಟದ ನೇರ ರಸ್ತೆ ನಿರ್ಮಿಸಲು ನಾಯಕ ಸಮಾಜ ಬೇಡಿಕೆ ಇಟ್ಟಿದ್ದು, ಅದಕ್ಕೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಹೇಳಿದರು.


ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಸಮಾಜದ ಎಲ್ಲ ಬೇಡಿಕೆಗೂ ನನ್ನ ಸಹಮತವಿದೆ. ಈ ಕುರಿತು ನಿಯೋಗ ರಚಿಸಿಕೊಂಡು ಸಿಎಂ ಜತೆಗೆ ಚರ್ಚಿಸಿ, ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವಂತೆ ಒತ್ತಾಯಿಸೋಣ. ಕೋಟೆಯ ಗತವೈಭವ ಮರುಸ್ಥಾಪಿಸಿ ದೇಶದ ಗಮನ ಸೆಳೆಯೋಣ ಎಂದರು.


ನಾಯಕ ಸಮಾಜದ ತಾಲೂಕು ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ಬಿಜೆಪಿ ನಾಯಕರು ಕೊಟ್ಟ ಭರವಸೆ ಈಡೇರಿಸಿಲ್ಲ. ಆದರೆ, ಕಾಂಗ್ರೆಸ್ ನಾಯಕರ ಮೇಲೆ ವಿಶ್ವಾಸವಿದೆ. ಅದಕ್ಕೆ ಎಚ್.ಆಂಜನೇಯ ಅವರು ಸಚಿವರಾಗಿದ್ದ ವೇಳೆ ಮದಕರಿನಾಯಕ ವೃತ್ತದ ಮುಂಭಾಗ ನಿರ್ಮಾಣವಾಗಿರುವ ವಾಲ್ಮೀಕಿ ಸಮುದಾಯ ಭವನವೇ ನಿದರ್ಶನ ಎಂದು ಹೇಳಿದರು.


ಭವನ ಉದ್ಘಾಟನೆ ವೇಳೆ ಬಿಜೆಪಿಯವರು ಸಮಾಜ ನಿರ್ಲಕ್ಷಿಸಿದ್ದರು. ಜತೆಗೆ ಅದು ಜನರ ಉಪಯೋಗಕ್ಕೆ ನೀಡಿಲ್ಲ. ಅಲ್ಲದೆ, ನಿರ್ಮಾಣದಲ್ಲೂ ಪರ್ಸೆಂಟೇಜ್ ವ್ಯವಹಾರ ನಡೆದಿದೆ. ಈಗ ರಾಜ್ಯದಲ್ಲಿ ಭವನ ನಿರ್ಮಾಣಕ್ಕೆ ಕಾರಣವಾದ ಕಾಂಗ್ರೆಸ್ ಸರ್ಕಾರವೇ ಇದ್ದು, ಸಿಎಂ ಅವರೇ ಉದ್ಘಾಟಿಸಬೇಕು ಎಂದು ಮನವಿ ಮಾಡಿದರು.


ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಸಮಾಜದ ಮುಖಂಡ ಅಂಜಿನಪ್ಪ ಅವರಿಗೆ ಕೂಡಾ ಅಧ್ಯಕ್ಷ ಸ್ಥಾನ ನೀಡಬೇಕೆಂಬುದು ಕೂಡ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ. ಈ ಕುರಿತು ಹಿರಿಯ ನಾಯಕರೊಂದಿಗೆ ಚರ್ಚಿಸುವೆ ಎಂದು ಆಶ್ವಾಸನೆ ನೀಡಿದರು.

ಶಾಸಕರಾದ ಟಿ.ರಘುಮೂರ್ತಿ, ಕೆ.ಸಿ.ವೀರೇಂದ್ರ ಪಪ್ಪಿ, ನಾಯಕ ಸಮಾಜದ ಜಿಲ್ಲಾಧ್ಯಕ್ಷ ಎಚ್.ಜೆ.ಕೃಷ್ಣಮೂರ್ತಿ, ಮುಖಂಡರಾದ ರಮೇಶ್ ಹೊದಿಗೆರೆ, ಕಾಟಿಹಳ್ಳಿ ಕರಿಯಪ್ಪ, ಎಚ್.ಅಂಜಿನಪ್ಪ, ತಿಪ್ಪೇಸ್ವಾಮಿ, ಎಸ್.ಸಂದೀಪ್, ರಘುನಂದನ್, ರತ್ನಮ್ಮ, ಗುಂಡಮ್ಮ, ಆನಂದ್, ನಾಗರಾಜ್, ಗೋಪಾಲಸ್ವಾಮಿ ನಾಯಕ ಇತರರಿದ್ದರು.

ಆರ್ಥಿಕ ಬಲಕ್ಕೆ ಭದ್ರಾಗೆ ಒತ್ತು
ಜನರಿಗೆ ಏನೇ ಸೌಲಭ್ಯ ಕೊಟ್ಟರು ಆರ್ಥಿಕ ಸಬಲತೆ ನೀಡಲು ಸಾಧ್ಯವಿಲ್ಲ. ಆದ್ದರಿಂದ ಜಿಲ್ಲೆಯ ಮಹತ್ವಕಾಂಕ್ಷೆಯ ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಅನುಷ್ಠಾನಗೊಳಿಸಿ ಜಿಲ್ಲೆಯ ವಿವಿಧ ಭಾಗಗಳಿಗೆ ನೀರು ಹರಿಸುವ ಮೂಲಕ ಸಾಧ್ಯವಾಗಿಸಬಹುದು ಎಂದು ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು. ಇದಕ್ಕಾಗಿ ಹೋರಾಟ ಮಾಡಿಯಾದರೂ ಜಿಲ್ಲೆಯ ಐವರು ಕಾಂಗ್ರೆಸ್ ಶಾಸಕರು ಸರ್ಕಾರದ ಗಮನಸೆಳೆದು ಜಾರಿಗೊಳಿಸೋಣ. ಆಗ ಮಾತ್ರ ಜನ ನಮ್ಮನ್ನು ಆಯ್ಕೆ ಮಾಡಿದ್ದಕ್ಕೂ ಸಾರ್ಥಕ ಎಂದು ಅಭಿಪ್ರಾಯಪಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net