

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯ ಸಮಗ್ರ ಅಭಿವೃದ್ಧಿ ಕನಸು ಕಂಡಿದ್ದೇನೆ. ಇದಕ್ಕಾಗಿ ಬಹು ನಿರೀಕ್ಷಿತ ಪೂರ್ವ ಬೈಪಾಸ್ ನಿರ್ಮಾಣ ಹಾಗೂ ಧಾರವಾಡವನ್ನು ರಾಜ್ಯದ ಸಾಂಸ್ಕೃತಿಕ ಬ್ರಾೃಂಡ್ ಆಗಿ ಮಾಡುವ ಕನಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಹೇಳಿದರು.
ನಗರದ ರಂಗಾಯಣ ಆವರಣದಲ್ಲಿನ ಪತ್ರಿಕಾ ಭವನದಲ್ಲಿ ಧಾರವಾಡ ಜರ್ನಲಿಸ್ಟ್ ಗಿಲ್ಡ್ ವತಿಯಿಂದ ಸೋಮವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು.
ಸದ್ಯ ಅವಳಿನಗರದಲ್ಲಿ ಕುಡಿಯುವ ನೀರು ಪೂರೈಕೆಗೆ ಸಮಸ್ಯೆ ಇಲ್ಲ. ಆದರೆ ಮಳೆ ಅಭಾವದಿಂದ ಎದುರಾಗುವ ನೀರಿನ ಸಮಸ್ಯೆ ಪರಿಹರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲೆಯ 45ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಅಭಾವ ಎದುರಾಗಿದ್ದು, ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲದೇ ಸ್ಥಳೀಯ ಗ್ರಾಪಂಗಳಿಗೂ ನೀರಿಗೆ ತುರ್ತಾಗಿ ಕ್ರಮ ವಹಿಸಲು ಸೂಚಿಸಲಾಗಿದೆ ಎಂದರು.
ಪೂರ್ವ ಭಾಗದಲ್ಲೂ ಬೈಪಾಸ್ ನಿರ್ಮಿಸುವ ಕನಸಿದೆ. ಹುಬ್ಬಳ್ಳಿಯ ಗದಗ ರಸ್ತೆಯಿಂದ ಧಾರವಾಡ ಕೃಷಿ ವಿವಿವರೆಗೂ ಅಂದಾಜು 800 ಕೋಟಿ ರೂ. ವೆಚ್ಚದಲ್ಲಿ ಪೂರ್ವ ಬೈಪಾಸ್ ನಿರ್ಮಿಸಲು ಯೋಜಿಸಲಾಗಿದೆ. ಈ ಬಗ್ಗೆ ಸರ್ವೇ ಕಾರ್ಯ ನಡೆದಿತ್ತು. ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಶೈಕ್ಷಣಿಕ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸರ್ಕಾರಿ ಶಾಲೆ, ಪದವಿ ಕಾಲೇಜು ಹಾಗೂ ವಸತಿ ನಿಲಯಗಳ ಸ್ಥಾಪನೆ ಜತೆಗೆ ಬಡವರಿಗಾಗಿ ಹು-ಧಾದಲ್ಲಿ ತಲಾ 5 ಸಾವಿರ ಮನೆಗಳ ನಿರ್ಮಾಣಕ್ಕೆ ಚಿಂತಿಸಲಾಗಿದೆ. ಅದನ್ನು ಸಾಕಾರಗೊಳಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು ಎಂದರು.
ಜಿಲ್ಲೆ ಗ್ರಾಮಗಳಿಗೆ ಕುಡಿಯಲು ಹಾಗೂ ಕೃಷಿಗೆ ಕಾಳಿ ನದಿ ನೀರು ಪೂರೈಸುವ ಚಿಂತನೆ ಬಹಳ ವರ್ಷದ್ದು. ಅಳ್ನಾವರ ಪಟ್ಟಣವರೆಗೆ ಕಾಳಿ ನದಿ ನೀರು ಹರಿದಿದೆ. ಕೃಷಿಗೂ ಕಾಳಿ ನೀರು ಹರಿಸಬೇಕು ಎನ್ನುವ ಕೂಗಿದೆ. ಹೀಗಾಗಿ ಯೋಜನೆ ಸಾಧ್ಯತೆ ಮತ್ತು ಬಾಧ್ಯತೆ ಕುರಿತು ಸಮೀಕ್ಷೆ ಅಗತ್ಯವಿದ್ದು, ತಜ್ಞರೊಂದಿಗೆ ಚರ್ಚಿಸಿ ಸಮೀಕ್ಷೆ ನಡೆಸಿ ಯೋಜನೆ ರೂಪಿಸಲಾಗುವುದು ಎಂದರು.