

ಹಾಸನ: ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ಎಲ್ಲ ವರ್ಗದವರನ್ನು ಪ್ರೀತಿ ವಿಶ್ವಾಸದಿಂದ ಕೊಂಡೊಯ್ಯಲಾಗುವುದು ಎಂದು ನೂತನ ಶಾಸಕ ಹೆಚ್.ಪಿ.ಸ್ವರೂಪ್ ತಿಳಿಸಿದರು.
ಚುನಾವಣೆ ಮುಕ್ತಾಯವಾಗಿ ಫಲಿತಾಂಶ ಹೊರ ಬಂದಿದೆ. ನಮ್ಮ ಕಾರ‌್ಯಕರ್ತರು ಯಾವುದೇ ಗೊಂದಲ, ಗಲಾಟೆಗೆ ಆಸ್ಪದ ನೀಡದೆ ಶಾಂತಿ ಕಾಪಾಡಬೇಕು. ಚುನಾವಣೆ ಸಂದರ್ಭದಲ್ಲಿ ಚುನಾವಣೆ ಮಾಡೋಣ, ಅದನ್ನು ಬಿಟ್ಟು ಮಾಜಿ ಶಾಸಕರು ಹೆದರಿಸುವುದು, ಬೆದರಿಸುವುದು ಮಾಡೋದು ಸರಿಯಲ್ಲ, ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಫಲಿತಾಂಶ ಬಂದ ನಂತರ ಮಾಜಿ ಶಾಸಕರು ಕಸ ವಿಲೇವಾರಿಯ ಆಟೋಗಳನ್ನು ಸ್ಥಗಿತ ಮಾಡಿಸಿದ್ದಾರೆ. ಅಲ್ಲದೆ ನೆನ್ನೆ ಅವರು ಮುಂದಿನ ಚುನಾವಣೆಗೆ ರಣಕಹಳ ಊದಿದ್ದೇವೆ ಎಂದು ಹೇಳಿದ್ದಾರೆ. ಇದರಿಂದ ಕೆಲ ಅವರ ಹಿಂಬಾಲಕರು ಪ್ರಚೋದನಾಕಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ದೂರಿದರು.
ನಮ್ಮ ತಂದೆ ನಾಲ್ಕು ಬಾರಿ ಶಾಸಕರಾಗಿದ್ದವರು.ಎಂದೂ ಕೂಡ ದ್ವೇಷದ ರಾಜಕಾರಣ ಮಾಡಿದವರಲ್ಲ. ನಾನು ಕೂಡ ಅಂತಹ ಕೆಲಸಗಳಿಗೆ ಆಸ್ಪದ ನೀಡುವುದಿಲ್ಲ. ಅಲ್ಲದೆ ಕ್ಷೇತ್ರದಲ್ಲಿ ಕೆಲ ವದಂತಿಗಳು ಹರಿದಾಡುತ್ತಿವೆ. ಯಾರೂ ಕೂಡ ಆ ವದಂತಿಗಳಿಗೆ ಕಿವಿಕೊಡಬೇಡಿ. ನಾನು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆಯೇ ಹೊರತು ರಸ್ತೆಬದಿ ವ್ಯಾಪಾರಿಗಳು ಮತ್ತು ಜನರಿಗೆ ತೊಂದರೆ ಉಂಟು ಮಾಡುವ ವ್ಯಕ್ತಿ ನಾನಲ್ಲ ಎಂದರು.
ನನ್ನ ತಂದೆಯವರ ಅವಧಿಯಲ್ಲಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳು, ಏತನೀರಾವರಿಗಳು, ಕೆರೆಗೆ ನೀರು ತುಂಬಿಸುವ ಯೋಜನೆ ಸೇರಿದಂತೆ ಹಲವು ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇನೆ. ಯಾವುದೇ ಸರ್ಕಾರವಿರಲಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಮಾಜಿ ಶಾಸಕರು ಸೋತ ಮೇಲೆ ಒಂದು ಸಮುದಾಯದವರ ವಿರುದ್ಧ ಸೂರ‌್ಯ ಚಂದ್ರ ಇರುವವರೆಗೂ ನಾನೇನು ಎಂದು ತೋರಿಸುತ್ತೇನೆ ಎಂದು ಹೇಳಿದ್ದಾರೆ. ಆದರೆ ಆ ಸಮುದಾಯದವರು ಯಾರೂ ಕೂಡ ಹೆದರುವ ಅಗತ್ಯವಿಲ್ಲ. ನಿಮ್ಮೊಂದಿಗೆ ಸದಾ ಕಾಲ ಇರುತ್ತೇನೆ ಎಂದು ಅಭಯ ನೀಡಿದರು.
ನೆನ್ನೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಹಾಗೂ ಮುಂದಿನ ಕೆಲಸ ಕಾರ‌್ಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದರು.
ನನ್ನ ಗೆಲುವಿಗೆ ಸಹಕರಿಸಿದ ನಮ್ಮ ವರಿಷ್ಠರಾದ ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಸೇರಿದಂತೆ ಪಕ್ಷದ ಎಲ್ಲಾ ಮುಖಂಡರು, ಕಾರ‌್ಯಕರ್ತರು, ಎಲ್ಲಾ ವರ್ಗದ ಮತದಾರರು ಹಾಗೂ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ನನ್ನನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಕೂಡ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಸ್ವಾಮಿಗೌಡ, ಇರ್ಷಾದ್ ಪಾಷ, ನಗರಸಭೆ ಸದಸ್ಯರಾದ ವಾಸುದೇವ್, ಮಹೇಶ್, ಮಾಧ್ಯಮ ವಕ್ತಾರ ಹೊಂಗೆರೆ ರಘು ಹಾಜರಿದ್ದರು.