

ಹಾಸನ: ಚುನಾವಣೆ ಆಗುವವರೆಗೂ ರಾಜಕಾರಣ, ಜನಪ್ರತಿನಿಧಿಯಾಗಿ ಆಯ್ಕೆಯಾದ ಬಳಿಕ ಎಲ್ಲರನ್ನೂ ಒಂದೇ ಸಮನಾಗಿ ಕಂಡು, ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧುಗಿರಿ ಸಾಮಾನ್ಯ ಕ್ಷೇತ್ರ, ನಾನು ಎಸ್ಟಿ ಅಭ್ಯರ್ಥಿಯಾದರೂ ಕ್ಷೇತ್ರದ ಜನರು 36 ಸಾವಿರ ಮತದಿಂದ ಗೆಲ್ಲಿದ್ದಾರೆ. ಅಲ್ಲಿ ನಮ್ಮ ಜಾತಿ ಇಲ್ಲ, ದುಡ್ಡು ವ್ಯಯ ಮಾಡಿಲ್ಲ. ಜನಪರವಾಗಿ ಕೆಲಸ ಮಾಡಿರುವ ಹಿನ್ನೆಲೆಯಲ್ಲಿ ಪ್ರೀತಿ, ವಿಶ್ವಾಸದಿಂದ ನನಗೆ ಅವಕಾಶ ಕೊಟ್ಟಿದ್ದಾರೆ. ನಾನು ಅಧಿಕಾರಕ್ಕೆ ಬಂದ ಮೇಲೆ ಆ ಕ್ಷೇತ್ರದಲ್ಲಿರುವ ಎಲ್ಲಾ ಜನರು ನಮ್ಮ ಕುಟುಂಬದ ಸದಸ್ಯರೆಂದು ತಿಳಿದು ಅವರೆಲ್ಲರ ಕಷ್ಟ-ಸುಖಕ್ಕೆ ಸ್ಪಂದಿಸಿ ಕೆಲಸ ಮಾಡುವ ಮನಸ್ಥಿತಿ ಬೆಳೆಸಿಕೊಂಡಿದ್ದೇನೆ. ಅದೇ ರೀತಿ ಈ ಜಿಲ್ಲೆಯಲ್ಲೂ ಕೆಲಸ ಮಾಡುತ್ತೇನೆ ಎಂದರು.
ಜಿಲ್ಲೆಯಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಜನಾಭಿಪ್ರಾಯ ಏನಿದೆ ಅದಕ್ಕೆ ನಾವೆಲ್ಲ ತಲೆಬಾಗಬೇಕು. ಒಂದು ಸೀಟ್ ಇರೋದು ನಾಳೆ ಏಳು ಸೀಟ್ ಆಗಬಹುದು. ಏಳು ಸೀಟ್ ಇರುವುದು ಸೊನ್ನೆ ಆಗಬಹುದು ಅದು ಬೇರೆ ವಿಚಾರ. ಆದರೂ ಕಾಂಗ್ರೆಸ್ ಪಕ್ಷವನ್ನು ಅತ್ಯಂತ ಬಲಶಾಲಿಯಾಗಿ ಮಾಡುವ ಪ್ರಯತ್ನ ನಿರಂತರವಾಗಿ ಇರುತ್ತದೆ ಎಂದು ಹೇಳಿದರು.
ಶಕ್ತಿ ಯೋಜನೆ ಕಾರ್ಯಕ್ರಮಕ್ಕೆ ಶಾಸಕ ಹೆಚ್.ಪಿ.ಸ್ವರೂಪ್ ಗೈರು ವಿಚಾರ ಪ್ರಸ್ತಾಪಿಸಿ, ನಾನು ಏಕೆ ಬರಬಾರದು ಅಂತ ಕೇಳಿದ್ದೇನೆ ಅಷ್ಟೇ. ಅವರು ಬರಲಿಲ್ಲ ಅಂದರೆ ವಿರೋಧ ಆರೋಪ ಮಾಡಿಲ್ಲ, ನಾನು ಬೇರೆ ಬೇರೆ ಶಾಸಕರು ಅವರವರ ಕ್ಷೇತ್ರದಲ್ಲಿ ಕಾರ್ಯಕ್ರಮ ಚಾಲನೆ ಮಾಡಲು ಹೋಗಿದ್ದಾರೆ ಎಂದು ಭಾವಿಸಿದ್ದೇನೆ. ಸಿ.ಎನ್.ಬಾಲಕೃಷ್ಣ, ಕೆ.ಎಂ.ಶಿವಲಿಂಗೇಗೌಡ ಸಿಕ್ಕಿದ್ದರು, ಬಿಜೆಪಿ ಶಾಸಕರೂ ಭೇಟಿ ಮಾಡಿ ನಾವು ನಮ್ಮ ಕ್ಷೇತ್ರದಲ್ಲಿ ಕಾರ್ಯಕ್ರಮ ಚಾಲನೆ ನೀಡಬೇಕು ಎಂದು ಹೋದರು, ಅದೇ ರೀತಿ ಹಾಸನ ಕ್ಷೇತ್ರದ ಶಾಸಕರು ಬರುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆ, ಅವರು ಭಾಗವಹಿಸಲಿಲ್ಲ ಎಂದರೆ, ಅವರಿಗೆ ಈ ರೀತಿಯ ಜನಪರ ಕಾರ್ಯಕ್ರಮಗಳಿಗೆ ವಿರೋಧ ಇದೆಯೇ ಎಂದು ಜನ ಭಾವಿಸಿದರೆ ಅದಕ್ಕೆ ನಾನು ಉತ್ತರ ಹೇಳಲು ಆಗುವುದಿಲ್ಲ ಎಂದರು.
ಸರ್ಕಾರಿ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ವಿಚಾರ ಪ್ರತಿಕ್ರಿಯಿಸಿ, ಶಿಷ್ಟಾಚಾರ ಉಲ್ಲಂಘನೆ ಬಗ್ಗೆ ತಿಳಿದಿಲ್ಲ. ಲೋಪ ಆಗಿದ್ದರೆ ಸಲಹೆ ಕೊಡಿ, ಅದರಂತೆ ಮುನ್ನಡೆಯುತ್ತೇವೆ. ನನಗೆ ಯಾರ ಹೆಸರುಗಳು ಗೊತ್ತಿಲ್ಲ, ಯಾರೂ ಪರಿಚಯವೂ ಇಲ್ಲ, ಯಾರ ಹೆಸರನ್ನು ಪ್ರಸ್ತಾಪನೂ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.