

ಯಾದಗಿರಿ: ಜಿಲ್ಲೆಯ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಿಸಲು ಇಲಾಖೆ ಅಧಿಕಾರಿಗಳು ಹೆಚ್ಚಿನ ಶ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-೨ಗೆ ಸಂಬಂಧಿಸಿದಂತೆ ಸೋಮವಾರ ಕರೆದಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಏ.೨೪ರಿಂದ ಮೇ ೮ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ -೨ನ್ನು ನಕಲುಮುಕ್ತ ಹಾಗೂ ವ್ಯವಸ್ಥಿತವಾಗಿ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಅಲ್ಲದೆ ನಕಲು ಸೇರಿ ಅಕ್ರಮ ಚಟುವಟಿಕೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಪರೀಕ್ಷೆಗಳು ವ್ಯವಸ್ಥಿತವಾಗಿ ನಡೆಸಲು ಸಂಬಂಧಿಸಿದ ಅಧಿಕಾರಿಗಳು ಎಲ್ಲ ಕ್ರಮಗಳನ್ನು ಅಚ್ಚುಕಟ್ಟಾಗಿ ಕೈಗೊಳ್ಳುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಈ ಪರೀಕ್ಷೆಗಾಗಿ ಒಟ್ಟು ೯ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ಪರೀಕ್ಷಾ ಕೇಂದ್ರಗಳಿಗೆ ಒಟ್ಟು ೯೯ ಪದವಿಪೂರ್ವ ಕಾಲೇಜುಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಜೋಡಿಸಲಾಗಿದೆ. ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಆಸನ, ಇತ್ಯಾದಿ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿಕೊಳ್ಳಬೇಕು. ಅಭ್ಯರ್ಥಿಗಳಿಗೆ ಆಸನ ವ್ಯವಸ್ಥೆಯನ್ನು ಕೊಠಡಿಯಿಂದ ಹೊರಗೆ ಅಥವಾ ಕಾರಿಡಾರ್‌ನಲ್ಲಿ ಅಥವಾ ನೆಲದ ಮೇಲೆ ಕುಳಿತು ಪರೀಕ್ಷೆಗಳನ್ನು ಬರೆಸಬಾರದು ಎಂದು ಸೂಚಿಸಿದರು.
ಪರೀಕ್ಷಾ ಕೇಂದ್ರದ ಸುತ್ತಲೂ ಸೂಕ್ತ ಪೋಲಿಸ್ ಬಂದೋಬಸ್ತ್ ಮಾಡಬೇಕು. ಕೊಠಡಿ ಮೇಲ್ವಿಚಾರಣೆ ನೋಡಿಕೊಳ್ಳಬೇಕು. ಕೇಂದ್ರದ ಎಲ್ಲ ಕೊಠಡಿಗಳಲ್ಲಿ ಸಿಸಿಟಿವಿ ವ್ಯವಸ್ಥೆ, ವ್ಯತ್ಯಯವಿಲ್ಲದ ನಿರಂತರ ವಿದ್ಯುತ್ ವ್ಯವಸ್ಥೆ ಹಾಗೂ ವೆಬ್ ಕಾಸ್ಟಿಂಗ್ ಅಳವಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ (ಪದವಿಪೂರ್ವ) ಚೆನ್ನಬಸಪ್ಪ ಕುಳಿಗೇರಿ ಸ್ವಾಗತಿಸಿ, ಪರೀಕ್ಷೆ ಕುರಿತು ವಿವರಿಸಿದರು. ಶಿಕ್ಷಣ ಇಲಾಖೆ ಅಧಿಕಾರಿಗಳು, ಪ್ರಾಂಶುಪಾಲರು ಉಪಸ್ಥಿತರಿದ್ದರು.
ವಿವಿಧ ವಸ್ತುಗಳು ನಿಷೇಧ: ಈ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ ವಸ್ತುಗಳು ಮೊಬೈಲ್, ಪೆನ್ ಡ್ರೈವ್‌ಗಳು, ಇಯರ್ ಫೋನಗಳು, ಮೈಕ್ರೋಫೋನ್‘, ಬ್ಲೂಟೂಥ್ ಸಾಧನಗಳು, ಕೈಗಡಿಯಾರ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಾಗಲಿ, ಸಿಬ್ಬಂದಿಗಳಾಗಲಿ ಮೊಬೈಲ್ ಫೋನುಗಳನ್ನು ಬಳಸುವಂತಿಲ್ಲ. ಪರೀಕ್ಷಾ ಕೊಠಡಿಗಳ ಹೊರಗೆ ಅಲ್ಪ ದೂರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇರಬೇಕು. ಗೌಪ್ಯ ಸಾಮಗ್ರಿಗಳನ್ನು ನಿಯಮಾವಳಿಗಳಂತೆ ನಿರ್ವಹಣೆ ಮಾಡಬೇಕು. ಪರೀಕ್ಷೆ ವೇಳಾಪಟ್ಟಿಯಂತೆ ಗೌಪ್ಯ ಸಾಮಗ್ರಿ ಪರೀಕ್ಷಾ ಕೇಂದ್ರಗಳಲ್ಲಿ ತಲುಪಿಸಲು ವಿಶೇಷ ಪ್ರಶ್ನೆ ಪತ್ರಿಕೆ ಮಾರ್ಗಾಧಿಕಾರಿಗಳ ತಂಡವನ್ನು ರಚಿಸಲಾಗಿದೆ.
ಪಿಯು ಫಲಿತಾಂಶ ತೃಪ್ತಿ ತಂದಿಲ್ಲ: ಪರೀಕ್ಷಾ ಫಲಿತಾಂಶ ಸುಧಾರಣೆಗೆ ವಿಶೇಷ ಗಮನ ನೀಡಿ, ಈ ಸಲದ ಪಿಯುಸಿ ವಾರ್ಷಿಕ ಪರೀಕ್ಷೆ -೧ರ ಫಲಿತಾಂಶ ತೃಪ್ತಿ ತಂದಿಲ್ಲ. ಆದ್ದರಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳನ್ನು ವಿಶೇಷ ರೀತಿಯಲ್ಲಿ ತರಬೇತುಗೊಳಿಸಿ, ನಿರಂತರ ಪರಿಶೀಲನೆ, ಕಡ್ಡಾಯ ಹಾಜರಾತಿ ಹಾಗೂ ಮೂಲಸೌಕರ್ಯಗಳ ಸದ್ಬಳಕೆಯೊಂದಿಗೆ ವಿದ್ಯಾರ್ಥಿಗಳಲ್ಲಿನ ಓದುವ ಹವ್ಯಾಸ ಬೆಳೆಸಿ. ಪ್ರತಿ ತಿಂಗಳು ಯೋಜನಾಬದ್ಧವಾಗಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಒತ್ತು ಕೊಡಿ. ಬೋಧನಾ ವ್ಯವಸ್ಥೆ ಸುಧಾರಿಸಿಕೊಂಡು, ಪಾಠ ಸರಿಯಾಗಿ ಮಾಡಿಸುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.