

ಹಾಸನ: ಕಳದ ಒಂದು ತಿಂಗಳಿನಲ್ಲಿ ಮಳೆ ಇಲ್ಲದೇ ರೈತರು ಸಂಕಷ್ಟ ಅನುಭವಿಸುತ್ತಿದ್ದರು.ಆದರೆ ಶನಿವಾರ ಜಿಲ್ಲೆಯ ಬಹುತೇಕ ಕಡೆ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನದ ವೇಳೆ ನಗರ ಸೇರಿದಂತೆ ಜಿಲ್ಲೆಯ ಹಲವು ಕಡೆಗಳಲ್ಲಿ ಜೋರು ಮಳೆ ಸುರಿಯಿತು.
ಇದರಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತ ಆಗಿತ್ತು. ವಾಹನ ಸವಾರರು ಪರದಾಡಬೇಕಾಯಿತು. ಶಾಲಾ ಮಕ್ಕಳಿಗೆ ದಸರೆ ರಜೆ ನೀಡಿರುವುದರಿಂದ ಮಳೆ ತೊಂದರೆಯಿಂದ ಅವರು ತಪ್ಪಿಸಿಕೊಂಡರು.
ಹಾಸನ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿತ್ತು. ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತೆ ಇರುವ ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿತ್ತು.
ಈ ಹಿಂದೆ ಸುರಿದ ಅತಿಯಾದ ಮಳೆಯಿಂದ ಮಲೆನಾಡು ಭಾಗದ ಜನರು ತತ್ತರಿಸಿ ಹೋಗಿದ್ದಾರೆ. ಮುಖ್ಯವಾಗಿ ಕಾಫಿ ಬೆಳೆ ಅತಿಯಾದ ತೇವಾಂಶದಿಂದ ಶೇ.ಅರ್ಧಕ್ಕಿಂತಲೂ ಹೆಚ್ಚು ನೆಲ ಕಚ್ಚಿದೆ. ಉಳಿದಂತೆ ರಸ್ತೆ, ಸೇತುವೆ, ಶಾಲೆ, ಅಂಗನವಾಡಿ, ವಿದ್ಯುತ್ ಕಂಬ ಹೀಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಆದರೆ ಬಯಲು ಸೀಮೆ ತಾಲೂಕುಗಳಾದ ಚನ್ನರಾಯಪಟ್ಟಣ, ಅರಸೀಕೆರೆ, ಹೊಳೆನರಸೀಪುರ ಕೆಲ ಭಾಗಗಳಲ್ಲಿ ಮಳೆಯಿಲ್ಲದೆ ಬೆಳೆದಿದ್ದ ಬೆಳೆಯೂ ಒಣಗುತ್ತಿದೆ. ಪ್ರಮುಖವಾಗಿ ಆಹಾರ ಬೆಳೆ ರಾಗಿ, ಮೆಕ್ಕೆಜೋಳ, ದ್ವಿದಳ ಧಾನ್ಯಗಳು ಭೂಮಿಯಲ್ಲೇ ಬಾಡುತ್ತಿವೆ.
ಮಳೆ ಹೀಗೆ ಮುನಿಸಿಕೊಂಡರೆ ತೆಂಗು ಬೆಳೆಗೂ ಸಂಕಷ್ಟ ಎದುರಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಒಟ್ಟಿನಲ್ಲಿ ಒಂದು ಕಡೆ ಅತಿವೃಷ್ಟಿ ಮತ್ತೊಂದು ಕಡೆ ಅನಾವೃಷ್ಟಿಯಿಂದ ರೈತರು, ಕಾಫಿ ಬೆಳೆಗಾರರು ತ್ರಿಶಂಕು ಸ್ಥಿತಿಗೆ ಸಿಲುಕಿ ತೊಂದರೆ ಅನುಭವಿಸುವಂತಾಗಿದೆ.