

ಹಾಸನ: ಜಿಲ್ಲೆಯಲ್ಲಿ ನಡೆದ ಮೂರು ಮನೆಕಳ್ಳತನ ಪ್ರಕರಣದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಸೇರಿದಂತೆ ನಗದು ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ನಗರದ ಅರಸೀಕೆರೆ ರಸ್ತೆಯಲ್ಲಿರುವ ಎಸ್‌ಎಂ. ಕೃಷ್ಣ ನಗರದ ನಿವಾಸಿಯಾದ ವೇಣುಗೋಪಾಲ್ ಅವರು ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಕಳ್ಳರು ಮನೆಯ ಬೀಗ ಮುರಿದು, ಸುಮಾರು 4.32 ಲಕ್ಷದ ಮೌಲ್ಯದ 114 ಗ್ರಾಂ.ಚಿನ್ನಾಭರಣವನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ.
ಬೀರುವಿನಲ್ಲಿದ್ದಂತಹ ಒಡವೆಗಳು ಹಾಗೂ 50ಸಾವಿರ ನಗದ ಕಳುವಾಗಿದ್ದು, ಈ ಸಂಬಂಧ ಗುರುವಾರ ಬಡಾವಣೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ನಕಲಿ ಕೀ ಸಹಾಯದಿಂದ ಮನೆಯ ಬಾಗಿಲನ್ನು ತೆಗೆದು ಬೀರುವಿನ ಮೇಲೆ ಇಟ್ಟಿದಂತಹ ಕೀಗಳನ್ನು ಬಳಸಿ ಬಿರುವಿನಲ್ಲಿದ್ದಂತಹ 1.35 ಲಕ್ಷದ ಮೌಲ್ಯದ 30 ಗ್ರಾಂ. ಚಿನ್ನಾಭರಣವನ್ನು ಕಳವು ಮಾಡಿರುವ ಘಟನೆ ನಗರದ ವಿಜಯನಗರ ಬಡಾವಣೆಯಲ್ಲಿ ನಡೆದಿದೆ.
ವಿಜಯನಗರದ ಎರಡನೇ ಹಂತದ ನಿವಾಸಿ ಶೋಭಾ ಎಂಬುವರು ಬೀಗ ಹಾಕಿಕೊಂಡು ಮನೆಯವರೆಲ್ಲರೂ ಜುಲೈ 1ರಂದು ಉದ್ದೂರಿಗೆ ತೆರಳಿದ್ದರು. ಗುರುವಾರ ಬೆಳಗ್ಗೆ ಮನೆಗೆ ಬಂದು ನೋಡಿದಾಗ ಬೀರುವಿನಲ್ಲಿದ್ದಂತಹ ಚಿನ್ನದ ಒಡವೆಗಳು ಕಳವು ಮಾಡಿದ್ದು,ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಹೊಳೆನರಸೀಪುರ ನಗರದ ವಿಶ್ವೇಶ್ವರಯ್ಯ ಎಂಬುವರು ಮನೆಗೆ ಬೇಗ ಹಾಕಿಕೊಂಡು ತಮ್ಮ ಸ್ವಂತ ಊರುರಾದ ಹಳೆಕೋಟೆ ಹೋಬಳಿ, ಉಣ್ಣೇನಹಳ್ಳಿ ಗ್ರಾಮಕ್ಕೆ ಜಮೀನಿನ ವಿಚಾರವಾಗಿ ತೆರಳಿದ್ದರು.
ಈ ಸಂದರ್ಭದಲ್ಲಿ ಕಳ್ಳರು ಮನೆಗೆ ನುಗ್ಗಿ 20ಸಾವಿರ ನಗದು, 30ಸಾವಿರ ಬೆಲೆ ಬಾಳುವ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನ ಕದ್ದು ಪರಾರಿಯಾಗಿದ್ದಾರೆ.ಈ ಸಂಬಂಧ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿಸಿದ್ದಾರೆ.