

ಹಾಸನ: ಜಿಲ್ಲೆಯ ವಿವಿಧೆಡೆ ನಡೆದಿರುವ ಮೂರು ಕಳವು ಪ್ರಕರಣಗಳಲ್ಲಿ ನಾಲ್ಕೂವರೆ ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಳಾಗಿದೆ.
ಬಟ್ಟೆ ತೊಳೆಯುತ್ತಾ ಕುಳಿತಿದ್ದ ಮಹಿಳೆ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಅಪರಿಚಿತ ಪರಾರಿಯಾಗಿರುವ ಘಟನೆ ಅರಸೀಕೆರೆ ತಾಲೂಕಿನ ಹೆಬ್ಬರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಾಂತಮ್ಮ ಎಂಬುವರು ಬುಧವಾರ ಸಂಜೆ ಮನೆಯ ಮುಂದೆ ಕಾಂಪೌಂಡ್ ಒಳಗೆ ಬಟ್ಟೆ ತೊಳೆಯುತ್ತಾ ಕುಳಿತಿದ್ದರು.
4.15 ರ ಸುಮಾರಿಗೆ 25-30 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ಬೈಕಿನಲ್ಲಿ ಬಂದು ನಂಜೇಗೌಡ ಅವರ ಮನೆ ಯಾವುದು ಎಂದು ಕೇಳಿದ್ದಾನೆ. ಮುಂದೆ ಊರಿನ ಒಳಗೆ ಹೋಗಿ ಕೇಳಿ ಎಂದು ಹೇಳಿದಾಗ ಸ್ವಲ್ಪ ದೂರ ಹೋಗಿ ವಾಪಸ್ ಬಂದವನೇ ಮೊಬೈಲ್‌ನಲ್ಲಿ ಫೋಟೋ ತೋರಿಸಿ, ಇವರ ಮನೆ ಎಲ್ಲಿ ಬರುತ್ತದೆಂದು ಕೇಳುವ ನಾಟಕವಾಡಿ ಏಕಾಏಕಿ ಮಹಿಳೆ ಕೊರಳಿನಲ್ಲಿದ್ದ 2 ಎಳೆಯ ಚಿನ್ನದ ಮಾಂಗಲ್ಯ ಸರ ಕಿತ್ತು ಬಂದ ಬೈಕಿನಲ್ಲಿ ಪರಾರಿಯಾಗಿದ್ದಾನೆ.ಮಾಂಗಲ್ಯ ಸುಮಾರು 60 ಗ್ರಾಂ ತೂಕವುಳ್ಳದ್ದಾಗಿದ್ದು, ಅಂದಾಜು 3 ಲಕ್ಷ ಬೆಲೆಬಾಳಲಿದೆ ಎನ್ನಲಾಗಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೀ ಸಹಾಯದಿಂದ ಮನೆಯ ಬಾಗಿಲಿನ ಬೀಗ ತೆಗೆದು ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಕಳವು ಮಾಡಿರುವ ಘಟನೆ ಸಾಲಗಾಮೆ ಹೋಬಳಿ ನಾಗೇನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಶೋಭಾ ಎಂಬುವರು ಸೆ.3 ರಂದು ಬೆಳಗ್ಗೆ ಮನೆಗೆ ಬೀಗ ಹಾಕಿ ಕೀಯನ್ನು ಮನೆಯ ಮುಂಭಾಗದ ಶೀಟ್ ಸಂಧಿಯಲ್ಲಿಟ್ಟು ಹೊರಗಡೆ ಹೋಗಿದ್ದರು. ವಾಪಸ್ ಸಂಜೆ ಬಂದು ನೋಡಿದಾಗ ಬೀರುವಿನಲ್ಲಿಟ್ಟಿದ್ದ ಸುಮಾರು 32.500 ಮಿಲಿ ಗ್ರಾಂ ತೂಕವುಳ್ಳ ಅಂದಾಜು 1,46,250 ರೂ. ಮೌಲ್ಯದ ಚಿನ್ನಾಭರಣ ಕಳವುವಾಗಿರುವುದು ಗೊತ್ತಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಬ್ಯಾಗ್‌ನಲ್ಲಿಟ್ಟಿಕೊಂಡು ಚಿನ್ನದ ಕೈ ಚೈನ್ ಕಳವು ಮಾಡಲಾಗಿದೆ. ಬುಧವಾರ ಬೆಳಗ್ಗೆ ಬೇಲೂರಿನ ನೂರ್‌ಅಹಮದ್ ಎಂಬುವರು ಹಾಸನಕ್ಕೆ ಹೋಗಲೆಂದು ಪಟ್ಟಣದ ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಅವರ ಬ್ಯಾಗ್‌ನಲ್ಲಿಟ್ಟುಕೊಂಡಿದ್ದ ಸುಮಾರು 8 ಗ್ರಾಂ ತೂಕದ ಚಿನ್ನದ ಕೈ ಚೈನನ್ನು ಕಳವು ಮಾಡಲಾಗಿದೆ.