

ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ಸುರಿದ ಗುಡುಗು ಸಹಿತ ಧಾರಾಕಾರ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಸತತ ಮಳೆಯಿಂದಾಗಿ ಬಹುತೇಕ ಕೆರೆಗೆ ಕೋಡಿ ಬಿದ್ದು ರಸ್ತೆಯ ಮೇಲೆ ನೀರು ನಿಂತ ಪರಿಣಾಮ ನೀರಿನಲ್ಲಿ ಸಂಚರಿಸಲು ಮುಂದಾದ ಬೈಕ್ ಸವಾರರು ಬಿದ್ದು ಗಾಯ ಮಾಡಿಕೊಂಡಿದ್ದಾರೆ.
ಹಾಸನ ನಗರದ ಹಲವು ಬಡಾವಣೆಗಳು ಜಲಾವೃತವಾಗಿ ನಿವಾಸಿಗಳು ತೀವ್ರ ತೊಂದರೆ ಅನುಭವಿಸಿದರು. ಮಳೆಯ ಅವಾಂತರದಿಂದ ತೇಜೂರು ಮತ್ತು ಉದ್ದೂರು ಕೆರೆಯ ನೀರು ದೊಡ್ಡ ಪ್ರಮಾಣದಲ್ಲಿ ರಸ್ತೆಯ ಮೇಲೆ ಹರಿದಿದ್ದರಿಂದ ನಗರದಿಂದ ಬೇಲೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಿಂಗ್ ರಸ್ತೆ ಸಂಚಾರವನ್ನು ಮಂಗಳವಾರ ಕೆಲ ಸಮಯ ಬಂದ್ ಮಾಡಲಾಗಿತ್ತು. ನಗರದ ತಮ್ಲಾಪುರ, ಉದ್ದೂರು ರಸ್ತೆಗೆ ಹಾದು ಹೋಗುವ ರಿಂಗ್ ರಸ್ತೆಯಲ್ಲಿ ಸಂಪೂರ್ಣ ನೀರಿನಿಂದ ತುಂಬಿಹೋಗಿತ್ತು.
ಇದೇ ರೀತಿ ಸೀಗೆ, ಚಿಕ್ಕಕೊಂಡಗುಳ ಕೆರೆಗಳು ಭರ್ತಿಯಾಗಿ ನೀರು ಹೊರ ಬರುತ್ತಿದೆ. ತಗ್ಗು ಪ್ರದೇಶ ನೀರಿನಿಂದ ತುಂಬಿ ಹೋಗಿದೆ. ತಮ್ಲಾಪುರ-80 ಅಡಿ ರಸ್ತೆಗೆ ಹಾದು ಹೋಗುವ ರಿಂಗ್ ರಸ್ತೆ ಮೇಲೆ ಬೃಹತ್ ಕೆರೆಯಂತೆ ನೀರು ಹರಿಯುತ್ತಿದೆ. ಇದರಿಂದ ರಸ್ತೆಗೆ ಹಾಕಿದ್ದ ಡಾಂಬರ್ ಕೊಚ್ಚಿ ಹೋಗಿದೆ. ಇನ್ನು ನಗರದ ಸುತ್ತಮುತ್ತ ಆಗಿರುವ ಕೆಲವು ಹೊಸ ಲೇಔಟ್ ಸಂಪೂರ್ಣ ಜಲಾವೃತವಾಗಿ, ನಿವಾಸಿಗಳು ಪರದಾಡುವಂತಾಗಿದೆ. ಅಂಗಡಿ, ಮನೆಗಳು ಕೂಡ ಜಲಾವೃತವಾಗಿವೆ.
ರಿಂಗ್ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸಬೇಕು. ಬೆಳೆ ನಷ್ಟವಾದ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು, ಕಳಪೆ ಕಾಮಗಾರಿ ಮಾಡಿರುವ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಸ್ಥಳೀಯರು ಒತ್ತಾಯಿಸಿದರು.
ಎರಡು ಬಡಾವಣೆ ಜಲಾವೃತ:
ಮತ್ತೊಂದೆಡೆ ಕೆರೆ ಕೋಡಿ ಒಡೆದು ನೀರು ಎಲ್ಲೆಂದರಲ್ಲಿ ನುಗ್ಗಿದ್ದರಿಂದ ನಗರದ ಸಾಲಗಾಮೆ ರಸ್ತೆಯ ತವರದೇವರು ಕೊಪ್ಪಲು ಬಳಿಯ ಹಾಸನಾಂಬ ಬಡಾವಣೆ ಸಂಪೂರ್ಣ ಜಲಾವೃತವಾಗಿತ್ತು. ಹಾಗೆಯೇ ಇದರ ಸಮೀಪ ಇರುವ ಮಹಾಲಕ್ಷ್ಮಿ ಲೇಔಟ್ ಸಹ ಜಲಾವೃತವಾಗಿದೆ. ಬಡಾವಣೆಯಲ್ಲಿ ರಾಜಕಾಲುವೆ ಮುಚ್ಚಿರುವುದರಿಂದ ಬಡಾವಣೆ ತುಂಬೆಲ್ಲಾ ನೀರು ನಿಂತಿತ್ತು.
ಬಹುತೇಕ ನಿವಾಸಿಗಳು ಹಾಲು, ನೀರು, ತರಕಾರಿ ಮೊದಲಾದ ಅಗತ್ಯ ಸಾಮಗ್ರಿ ಸಿಗದೆ ಪರದಾಡಿದರು. ಮಕ್ಕಳು ಶಾಲೆಗೆ ತೆರಳಲಾಗದೆ ಮನೆಯಲ್ಲೇ ಉಳಿಯಬೇಕಾಯಿತು. ಎರಡೂ ಬಡಾವಣೆಗಳಲ್ಲಿ ಬಹುತೇಕ ಸರ್ಕಾರಿ ನೌಕರರೇ ಇದ್ದು, ಕೆಲಸಕ್ಕೂ ಹಾಜರಾಗದೆ ತೊಂದರೆ ಅನುಭವಿಸಿದರು.
ಒಡೆದ ಕೆರೆ ಕೋಡಿ:
ತಾಲೂಕಿನ ದುದ್ದ ಹೋಬಳಿಯ ಹಿರಿ ಕಡಲೂರು ಕೆರೆ ಕೋಡಿ ಒಡೆದು ಅಪಾರ ಪ್ರಮಾಣದ ನೀರು ಜಮೀನಿಗೆ ನುಗ್ಗಿದ ಪರಿಣಾಮ ಬೆಳೆ ನಷ್ಟವಾಗಿದೆ. ಕೆರೆ ತುಂಬಿದ್ದರಿಂದ ರಭಸವಾಗಿ ಅಚ್ಚುಕಟ್ಟು ಪ್ರದೇಶದ ಮೇಲೆ ಹರಿದು, ನೂರಾರು ಎಕರೆ ಪ್ರದೇಶದ ವಿವಿಧ ಬೆಳೆ ಕೊಚ್ಚಿಹೋಗಿದೆ. ಮೆಕ್ಕೆಜೋಳ, ಅಡಕೆ, ಶುಂಠಿ, ಎಲೆ ಕೋಸು ಮೊದಲಾದ ಬೆಳೆ ಮಣ್ಣು ಪಾಲಾಗಿವೆ.
ಸವಾರನ ಕಾಲು ಮುರಿತ
ಸಿಡಿಲು ಸಹಿತ ಸುರಿದ ಧಾರಾಕಾರ ಮಳೆಯಿಂದ ಅನೇಕ ಕಡೆಗಳಲ್ಲಿ ಒಂದಲ್ಲ ಒಂದು ರೀತಿಯ ತೊಂದರೆ ಆಗಿದೆ. ನಗರದ ಹೊರ ವಲಯದ ಕೆಂಚಟ್ಟಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕಾಲುವೆ ರೀತಿಯಲ್ಲಿ ನೀರು ಹರಿಯಿತು. ಈ ಹರಿಯುವ ನೀರಿನಲ್ಲೇ ಚಲಿಸಲು ಹೋಗಿ ಬೈಕ್ ಸವಾರ ಕೆಳಕ್ಕೆ ಬಿದ್ದು ಕೊಚ್ಚಿ ಹೋಗಲು ಆರಂಭಿಸಿದ. ಇದನ್ನು ಕಂಡು ಕಾರ್ಯ ಪ್ರವೃತ್ತರಾದ ಸ್ಥಳೀಯರು ಕೂಡಲೇ ಬೈಕಿನೊಂದಿಗೆ ತೇಲಿ ಹೋಗುತ್ತಿದ್ದ ಸವಾರರನ್ನು ರಕ್ಷಣೆ ಮಾಡಿದರು. ಈ ವೇಳೆ ಬೈಕ್ ಸವಾರನ ಕಾಲು ಮುರಿದಿದ್ದು, ಕೂಡಲೇ ಅವರನ್ನು ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕೆಲ ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಐತಿಹಾಸಿಕ ದ್ವಾರ ಸಮುದ್ರ ಕೆರೆಯ ಪ್ರವಾಹ
ಹಳೇಬೀಡಿನ ಐತಿಹಾಸಿಕ ದ್ವಾರಸಮುದ್ರ ಕೆರೆಯ ಹೊರಹರಿವು ದಿಢೀರ್ ಹೆಚ್ಚಳವಾಗಿದ್ದು, ಕೋಡಿ ಉಕ್ಕಿ ಹರಿಯುತ್ತಿದೆ. ಜುಲೈ ತಿಂಗಳ ಮುಂಗಾರು ಮಳೆಯ ಆರ್ಭಟದ ಪರಿಣಾಮ ಮೂರು ತಿಂಗಳಿಂದ ತುಂಬಿ ಹರಿಯುತ್ತಿರುವ ಕೆರೆಯ ಹೊರ ಹರಿವು ಸೋಮವಾರ ಸುರಿದ ಭಾರಿ ಮಳೆಯ ಕಾರಣ ಮಂಗಳವಾರ ಮುಂಜಾನೆಯಿಂದ ದಿಢೀರ್ ಏರಿಕೆಯಾಗಿದೆ. ದ್ವಾರಸಮುದ್ರ ಕೆರೆಗೆ ನೀರು ಹರಿದು ಬರುವ ಸೀಗೆ ಗುಡ್ಡ ಹಾಗೂ ಕಾಗೆದಳ್ಳದ ವ್ಯಾಪ್ತಿಯಲ್ಲಿ ಭಾರಿ ಮಳೆಯಾದ ಕಾರಣ ಕೆರೆಗೆ ಅಪಾರ ಪ್ರಮಾಣದಲ್ಲಿ ಕೆಂಪು ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರು ಹೊರಗೆ ಹೋಗುತ್ತಿದೆ. ಬೆಳವಾಡಿ ಗ್ರಾಮ ಸೇರಿದಂತೆ ಪಾತ್ರದ ಮುಂದಿನ ಕೆರೆಗಳೆಲ್ಲ ಈಗಾಗಲೇ ಭರ್ತಿಯಾಗಿರುವುದರಿಂದ ಹೆಚ್ಚುವರಿ ನೀರು ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಸಾಗರ ಸೇರುತ್ತಿದೆ.