ಜಿಲ್ಲೆಯ ವಿವಿಧಡೆ ಕಾಂಗ್ರೆಸ್ ವಿಜಯೋತ್ಸವ

04 YERRISWAMY 04
Published on

ಬಳ್ಳಾರಿ ; ಹದಿನೆಂಟನೇ ಲೋಕಸಭಾ ಚುನಾವಣೆಯ ಬಳ್ಳಾರಿ ಲೋಕಸಭಾ ಕ್ಷೇತ್ರದ ಮತ ಎಣಿಕೆಯು ನಗರದ ಆರ್‌ವೈಎಂಸಿ ಕಾಲೇಜಿನಲ್ಲಿ ಸುಗಮವಾಗಿ ನಡೆಯಿತು. ಬೆಳಗ್ಗೆ ಎಂಟ ಗಂಟೆಗೆ ಆರಂಭವಾದ ಮತ ಎಣಿಕೆ ಮಧ್ಯಾಹ್ನ ಎರಡು ಗಂಟೆಯೊಳಗೆ ಪೂರ್ಣಗೊಂಡಿತು.
ಆರಂಭದಲ್ಲಿ ಅಂಚೆ ಮತ ಎಣಿಕೆಯಲ್ಲಿ ಬಿಜೆಪಿ ಕೊಂಚ ಮುನ್ನಡೆ ಕಂಡಿತು. ಬಳಿಕ ಕ್ಷೇತ್ರವಾರು ನಡೆದ 19 ಸುತ್ತಿನ ಮತ ಎಣಿಕೆಯಲ್ಲಿ ಒಂದು ಸುತ್ತಿನಲ್ಲಿಯೂ ಬಿಜೆಪಿ ಮುನ್ನಡೆ ಸಾಧಿಸದೆ ಇರುವುದನ್ನು ಕಂಡು ಬಿಜೆಪಿ ಕೆಲ ನಾಯಕರು ಎಣಿಕೆ ಕೇಂದ್ರದಿಂದ ಹೊರ ನೆಡೆದರು. ಕಾಂಗ್ರೆಸ್ ಪಕ್ಷ ಪ್ರತಿ ಸುತ್ತಿನಲ್ಲಿಯೂ ಮುನ್ನಡೆ ಕಂಡು ಕಾಂಗ್ರೆಸ್ ಶಾಸಕರು, ಅಭ್ಯರ್ಥಿ ಮತ ಎಣಿಕೆ ಕೇಂದ್ರದ ಕಡೆ ಆಗಮಿಸಿದರು. ಶಾಸಕ ಈ. ತುಕರಾಮ್ ಗೆಲುವಿನ ನಗೆ ಬೀರುತ್ತಿದ್ದಂತೆ ಕಾರ್ಯಕರ್ತರ ಜತೆ ಕುಣಿದರು.
ಕಾಂಗ್ರೆಸ್ ಕಾರ್ಯಕರ್ತರು ಹತ್ತು ಸುತ್ತಿನ ಮತ ಎಣಿಕೆ ಮುಗಿಯುತ್ತಿದ್ದಂತೆ ಪಾಲಿಕೆ ಸದಸ್ಯರು ಎಣಿಕೆ ಕೇಂದ್ರದ ಹೊರಗಡೆ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದು, ಪಟಾಕಿ ಸಿಡಿಸಿ ಹಾಗೂ ಒಬ್ಬರಿಗೆ ಒಬ್ಬರು ಪರಸ್ಪರ ಬಣ್ಣ ಎರಚಿಕೊಂಡು ಸಂಭ್ರಮಿಸಿದರು.
ಇಲ್ಲಿನ ಎಸ್ಪಿ ವೃತ್ತದ ಜಿಲ್ಲಾ ಬಿಜೆಪಿ ಕಚೇರಿ ಹಳೆಯ ಕಟ್ಟಡದ ಮುಂಭಾಗದಲ್ಲಿ ಸೋಮವಾರ ಸಂಜೆ ಬಿಜೆಪಿ ವಿಜಯೋತ್ಸವಕ್ಕೆ ವೇದಿಕೆ ಸಿದ್ಧಪಡಿಸಿದ್ದರು. ಮತ ಎಣಿಕೆ ಆರಂಭವಾದ ಸುತ್ತಿನಿಂದ ಕೊನೆಯ ಸುತ್ತಿನವರೆಗೂ ಒಂದು ಸುತ್ತಿನಲ್ಲಿಯೂ ಲೀಡ್ ಕಾಣಲಿಲ್ಲ. ಆದ್ದರಿಂದ, ಬಿಜೆಪಿ ಕಾರ್ಯಕರ್ತರು ವೇದಿಕೆ ಹತ್ತ ಸುಳಿಯಲಿಲ್ಲ. ವಿಜಯನಗರ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ ಬಿಟ್ಟರೆ, ಉಳಿದ ಎಲ್ಲ ಕ್ಷೇತ್ರಗಳಲ್ಲಿ ಹಿನ್ನಡೆಯಾಯಿತು.
ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಳ್ಳಾರಿ ನಗರ 94,628, ಬಳ್ಳಾರಿ ಗ್ರಾಮೀಣ 1,01,434, ವಿಜಯನಗರ 89,955, ಹಗರಿಬೊಮ್ಮನಹಳ್ಳಿ 97,103, ಸಂಡೂರು 95,936, ಕೂಡ್ಲಿಗಿ 82,992, ಕಂಪ್ಲಿ 91,047, ಹೂವಿನಹಡಗಲಿ 76,486 ಹಾಗೂ ಅಂಚೆ ಮತದಾನ 1,264 ಸೇರಿದಂತೆ ಒಟ್ಟು 7,30,845 ಮತಗಳನ್ನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈ. ತುಕರಾಮ್ ಪಡೆದಿದ್ದಾರೆ.
ಅಭ್ಯರ್ಥಿಗಳ ಮತ ವಿವರ : ಬಿಜೆಪಿ ಬಿ. ಶ್ರೀರಾಮುಲು 6,31,853, ಬಿಎಸ್ಪಿ ಪಕ್ಷದ ವಾಲ್ಮೀಕಿ ಕೃಷ್ಣಪ್ಪ 5,911, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಿ. ಚೆನ್ನವೀರ 3,797, ಸೋಷಿಯಲಿಸ್ಟ್ ಯುನಿಟ್ ಸೆಂಟರ್ ಪಕ್ಷದ ಎ.ದೇವದಾಸ 1,741, ಪ್ರಹಾರ ಜನಶಕ್ತಿ ಪಾರ್ಟಿ ಮಂಜುನಾಥ ಗೋಸಾಲೆ 1,322, ನವಭಾರತ ಸೇನಾ ಪಕ್ಷದ ಜಿ.ಸ್ವಾಮಿ 944, ಪಕ್ಷೇತರ ಅಭ್ಯರ್ಥಿಗಳಾದ ಅರುಣಾ ಎಸ್. ಹಿರೇಹಾಳ್ 1,282,ಪಂಪಾಪತಿ 2,460, ವಿರೇಶ 1,870 ಮತ ಗಳಿಸಿದ್ದಾರೆ. ನೋಟಾಕ್ಕೆ 7889 ಹಾಗೂ ತಿರಸ್ಕಾರದ 81 ಮತಗಳು ಚಲಾವಣೆಯಾಗಿವೆ.
ಬಾಕ್ಸ್ : ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದರಿಂದ ಸಂಡೂರು ಕ್ಷೇತ್ರದಲ್ಲಿ ವಿಧಾನಸಭಾ ಉಪ ಚುನಾವಣೆ ನಡೆಯಲಿದೆ. ಈಗಾಗಲೇ ಈ. ತುಕರಾಮ್ ಪುತ್ರಿ ಸೌಪರ್ಣಿಕ ತುಕರಾಮ್(ಚೈತನ್ಯ ) ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುವುದರ ಬಗ್ಗೆ ಈಗಾಗಲೇ ಪಕ್ಷದ ವಲಯದಲ್ಲಿ ಚರ್ಚೆ ನಡೆದಿದೆ. ಬಿಜೆಪಿ ಯಿಂದ ಯಾರು ಸ್ಪರ್ಧೆ ಮಾಡಲಿದ್ದಾರೆ ಎಂಬುದು ಕಾದು ನೋಡಬೇಕಿದೆ. ಈ ಕ್ಷೇತ್ರದಲ್ಲಿ ಈ. ತುಕರಾಮ್ ನಾಲ್ಕು ಬಾರಿ ಶಾಸಕರಾಗಿದ್ದಾರೆ.

ಕೋಟ್… ಪಕ್ಷದ ಗೆಲುವಿಗೆ ಪದಾಧಿಕಾರಿಗಳು, ಕಾರ್ಯಕರ್ತರು ಕಳೆದರೆಡು ತಿಂಗಳಿಂದ ಶ್ರಮಿಸಿದ್ದಾರೆ. ಪಕ್ಷವನ್ನು ಜನರು ತಿರಸ್ಕಾರ ಏಕೆ ಮಾಡಿದ್ದಾರೆ ಎಂಬುದು ಪಕ್ಷದಲ್ಲಿ ಅಧ್ಯಯನ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆ ಮುಂದುವರೆಯಲಿದೆ.

  • ಅನಿಲ್ ಕುಮಾರ ಮೋಕಾ, ಜಿಲ್ಲಾಧ್ಯಕ್ಷ, ಬಿಜೆಪಿ, ಬಳ್ಳಾರಿ

ಕೋಟ್… ಈ ಗೆಲುವಿಗೆ ಕ್ಷೇತ್ರದ ಎಲ್ಲ ಶಾಸಕರು ಶ್ರಮಿಸಿದ್ದಾರೆ. ಇಷ್ಟು ಅಂತರದ ಗೆಲುವು ನಿರೀಕ್ಷೆ ಮಾಡಲಾಗಿತ್ತು. ಆದರೆ, ಸ್ವಲ್ಪ ಕಡಿಮೆ ಬಂದಿದೆ. ಜನರ ನಿರೀಕ್ಷೆಯಂತೆ ಒಳ್ಳೆಯ ಸಂಸದನಾಗಿ ಕೆಲಸ ಮಾಡುವೆ. ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸುವೆ.

  • ಈ. ತುಕರಾಮ್, ಗೆದ್ದ ಅಭ್ಯರ್ಥಿ, ಕಾಂಗ್ರೆಸ್ ಪಕ್ಷ , ಬಳ್ಳಾರಿ.

ಕೋಟ್… ಕಾಂಗ್ರೆಸ್ ಅಭ್ಯರ್ಥಿ ಗೆಲುವನ್ನು ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ಉಡುಗೊರೆಯಾಗಿ ಕೊಡುತ್ತವೆ. ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಬಹುತೇಕ ಸರ್ಕಾರ ರಚನೆ ಮಾಡಲಾಗುವುದು. ಡಿಕೆ ಸುರೇಶ್ ಅವರ ಸೋಲು ಅರಗಿಸಿಕೊಳ್ಳಲು ಆಗುತ್ತಿಲ್ಲ. ರಾಜ್ಯದಲ್ಲಿ ಜೋಡೆತ್ತುಗಳಂತೆ ಕೆಲಸ ಮಾಡುತ್ತಿದ್ದರು. ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಲಾಗಿದೆ. ತಪ್ಪಿಸ್ಥರಿಗೆ ತಕ್ಕ ಶಿಕ್ಷಯಾಗುತ್ತದೆ. ನನ್ನ ರಾಜೀನಾಮೆ ಯಾರು ಕೇಳಿಲ್ಲ. ನಿಗಮದ ಒಂದು ರೂಪಾಯಿ ಹಣ ಪೋಲಾಗಲು ಬಿಡುವುದಿಲ್ಲ.

  • ಬಿ.ನಾಗೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ, ಬಳ್ಳಾರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net