

ಹಾಸನ: ರಾಜ್ಯ ಸರ್ಕಾರ 12ರಿಂದ 15 ಸಾವಿರ ಕ್ಯೂಸೆಕ್ಸ್ ನೀರನ್ನು ತಮಿಳುನಾಡಿಗೆ ಹರಿಸಿ ಜಿಲ್ಲೆಯ ಹೇಮಾವತಿ, ಯಗಚಿ, ವಾಟೆಹೊಳೆ ಜಲಾಶಯಗಳ ನೀರನ್ನು ಖಾಲಿ ಮಾಡಿ ಜಿಲ್ಲೆಯ ರೈತರಿಗೆ ದ್ರೋಹ ಮಾಡಿದೆ ಎಂದು ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶದ ಪ್ರಧಾನ ಕಾರ್ಯದರ್ಶಿ ಹಾಡ್ಯ ರಮೇಶ್ ರಾಜು ಅಸಮಾಧಾನ ವ್ಯಕ್ತಪಡಿಸಿದರು.
ತಮಿಳುನಾಡು ರಾಜ್ಯಕ್ಕೆ ನೀರನ್ನು ಬಿಡಲು ನಮ್ಮ ಅಭ್ಯಂತರವಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಆದಂತ ಮಳೆ ಈ ವರ್ಷ ಸುರಿದಿಲ್ಲ. ಈಗಾಗಲೇ ಮುಂಗಾರು ಮಳೆ ಬಾರದೆ ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಬಂದಿದೆ. ಅಲ್ಪ ಪ್ರಮಾಣದಲ್ಲಿ ಸುರಿದ ಮಳೆಯಿಂದ ಜಿಲ್ಲೆಯ ಜಲಾಶಯಗಳು ಸ್ವಲ್ಪ ಮಟ್ಟಿಗೆ ತುಂಬಿಕೊಂಡು ರೈತರಿಗೆ, ಜಾನುವಾರುಗಳಿಗೆ ಹಾಗೂ ಕುಡಿಯುವ ನೀರಿಗೆ ಬರ ಬಾರದಂತಿತ್ತು. ಆದರೆ ರಾಜ್ಯ ಸರಕಾರ ರಾಜ್ಯದ ರೈತರ ಬಗ್ಗೆ ಯೋಚಿಸದೆ ರಾಜಕೀಯ ದುರುದ್ದೇಶದಿಂದ ತಮಿಳುನಾಡಿಗೆ 12ರಿಂದ 15 ಸಾವಿರ ನೀರನ್ನು ಹರಿಸಿ ಕೆಆರ್‌ಎಸ್‌ನಲ್ಲಿ 113. 30 ಅಡಿ ಇದ್ದ ನೀರನ್ನು 102 ಅಡಿಗೆ ತಂದು ನಿಲ್ಲಿಸಿದೆ. ಇದರಿಂದ ಸುಮಾರು 20 ಟಿಎಂಸಿಗೂ ಅಧಿಕ ನೀರು ಕೆಆರ್‌ಎಸ್, ಹೇಮಾವತಿ, ಯಗಚಿ, ವಾಟೆಹೊಳೆ ಜಲಾಶಯಗಳ ನೀರು ಖಾಲಿಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ತಮಿಳುನಾಡಿಗೆ ನೀರು ಬಿಡುವ ಮೊದಲು ನ್ಯಾಯಾಲಯದ ಆದೇಶದವರೆಗೂ ಕಾಯ್ದು ನಾಲೆಗಳಿಗೆ ನಿರಂತರ ನೀರು ಹರಿಸಿ ಭತ್ತ ಬಿತ್ತನೆಗೆ ಅನುಕೂಲ ಮಾಡಿ, ನಂತರ ನ್ಯಾಯಾಲಯಕ್ಕೆ ಮನವರಿಕೆ ಮಾಡಿ ಬೆಳೆ ಉಳಿಸಬಹುದಿತ್ತು. ರಾಜಕೀಯ ಹಿತಾಸಕ್ತಿಗೋಸ್ಕರ ನಮ್ಮ ರೈತರನ್ನು ರಾಜ್ಯ ಸರ್ಕಾರ ಬಲಿಕೊಟ್ಟಿದೆ. ಕಾವೇರಿ ನೀರು ನಿಯಂತ್ರಣ ಸಮಿತಿ ಪ್ರತಿದಿನ 5000 ಕ್ಯೂಸೆಕ್ಸ್ ನೀರನ್ನು 15 ದಿನ ಹರಿಸಬೇಕೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸಿನಿಂದಾಗಿ ಹೇಮಾವತಿಯಲ್ಲಿರುವ 24 ಟಿಎಂಸಿ ಇರುವ ನೀರು 7 ಟಿಎಂಸಿ ಕಳೆದುಕೊಂಡು 17 ಟಿಎಂಸಿಗೆ ಇಳಿಯುತ್ತದೆ. ಈ 17 ಟಿಎಂಸಿಯಲ್ಲಿ 5 ಟಿಎಂಸಿ ನೀರು ಡೆಡ್ ಸ್ಟೋರೇಜ್. ಅಲ್ಲಿಗೆ ನಮ್ಮ ಉಪಯೋಗಕ್ಕೆ ನೀರು ಸಿಗುವುದು ಕೇವಲ 13 ಟಿಎಂಸಿ ಅಷ್ಟೇ. ಇಷ್ಟು ನೀರು ಮೂರು ಜಿಲ್ಲೆಗಳಿಗೆ ಕುಡಿಯುವುದಕ್ಕೆ ಸಾಲವುದಿಲ್ಲ. ವ್ಯವಸಾಯಕ್ಕೂ ಆಗುವುದಿಲ್ಲ. ಈ ಸ್ಥಿತಿಗೆ ಮುಂದಾಲೋಚನೆ ಇಲ್ಲದ ಸರ್ಕಾರದ ನಡೆಯೇ ಕಾರಣ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಕಾಳೇಗೌಡ, ಎಚ್.ಬಿ ಮಲ್ಲಪ್ಪ, ಎಚ್.ಎನ್ ಕುಮಾರಸ್ವಾಮಿ, ಪಿ ಮಧು, ಕೆ. ಕುಮಾರಸ್ವಾಮಿ ಸೇರಿದಂತೆ ಇತರರು ಹಾಜರಿದ್ದರು.