

ಹಾಸನ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತು ಅವರ ಕುಟುಂಬದ ಕೊಡುಗೆ ಏನು ಎಂಬುದನ್ನು ತಿಳಿಯಲು ಸಂಸದರು ಜಿಲ್ಲೆಯ ಪ್ರವಾಸ ಮಾಡಿ ತಿಳಿದುಕೊಳ್ಳಲಿ ಎಂದು ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಟಾಂಗ್ ನೀಡಿದರು.
ನಮಗೆ ಸಂಸದ ಶ್ರೇಯಸ್ ಪಟೇಲ್ ಬಗ್ಗೆ ಬಹಳ ಗೌರವವಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮತ್ತು ಅವರ ಕುಟುಂಬದವರು ಜಿಲ್ಲೆಗೆ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಹೇಳಲು ಒಂದು ದಿನ ಬೇಕಾಗುತ್ತದೆ. ಶ್ರೇಯಸ್ ಪಟೇಲ್ ಅವರು ನಮ್ಮ ಜಿಲ್ಲೆಯ ಸಂಚಾರ ಮಾಡಲಿ. ಎಲ್ಲೆಲ್ಲಿ ಏನೇನು ಕೆಲಸ ಆಗಿದೆ ಎಂಬುದನ್ನು ಪಟ್ಟಿ ಮಾಡಲಿ. ತಾತ ಶ್ರೀಕಂಠಯ್ಯ ಅವರ ಸಾಧನೆಯನ್ನು ಜಿಲ್ಲೆಯ ಜನ ಕಂಡಿದ್ದಾರೆ. ಹಳೇಬೀಡಿಗೆ ಯಗಚಿ ನೀರು ಹರಿಸುವುದಾಗಿ ಪುಟ್ಟಸ್ವಾಮಿಗೌಡರು ಭರವಸೆ ನೀಡಿದರು ಆದರೆ ಮುಂದೆ ಏನಾಯಿತು ಎಂದು ಎಲ್ಲರಿಗೂ ತಿಳಿದಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.
ಎಚ್.ಡಿ. ಕುಮಾರಸ್ವಾಮಿ ಅವರ ಅವಧಿಯಲ್ಲಿ 130 ಕೋಟಿ ರೂ. ರಣಘಟ ್ಟ ಯೋಜನೆಗೆ ಚಾಲನೆ ನೀಡಲಾಯಿತು. ಯಡಿಯೂರಪ್ಪ ಅವರು ಸಹ ಹಣ ಬಿಡುಗಡೆ ಮಾಡಿದರು. ಆರು ತಿಂಗಳ ಕುಮಾರಸ್ವಾಮಿಯವರ ಅಭಿವೃದ್ಧಿಯ ಬಗೆ ್ಗ ಮಾತನಾಡುವ ಶ್ರೇಯಸ್ ಪಟೇಲ್ ಅವರು ಇದುವರೆಗೂ ಏನು ಮಾಡಿದ್ದಾರೆ ಎಂಬುದನ್ನು ಗಮನಿಸಲಿ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಹೆಚ್ಚಿನ ಅನುದಾನ ತಂದು ಜಿಲ್ಲೆಯ ಅಭಿವೃದ್ಧಿ ಮಾಡಲಿ. ಆಗ ಜನರು ಬೇಷ್ ಎನ್ನುತ್ತಾರೆ ಎಂದು ಸಲಹೆ ನೀಡಿದರು.
ಕೆಲ ದಿನಗಳ ಹಿಂದೆ ನಡೆದ ಕಾಂಗ್ರೆಸ್ ಸಮಾವೇಶದ ಬಗ್ಗೆ ಜನರು ಈಗಲೇ ಪ್ರಶ್ನೆ ಮಾಡುತ್ತಿದ್ದಾರೆ. ಇವರು ಸಮಾವೇಶ ಮಾಡಿಲ್ಲ. ಬದಲಿಗೆ ದೇವೇಗೌಡರ ಕುಟುಂಬವನ್ನು ಬಯ್ಯುವುದಕ್ಕೆ ಮಾಡಿಕೊಂಡ ವೇದಿಕೆ ಅಂತ ಜನರು ಹೇಳುತ್ತಿದ್ದಾರೆ. ಇಷ್ಟು ದೊಡ್ಡ ಸಮಾವೇಶ ಮಾಡಿ ಕನಿಷ್ಠ ನೂರು ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದರೇ ಬಹಳ ಸಂತೋಷವಾಗುತಿತ್ತು. ಒಂದು ಕಡೆ ಗ್ಯಾರಂಟಿ ತಂದು ಅರ್ಧಂಬರ್ಧವಾಗಿ ಎಲ್ಲ ಅಭಿವೃದ್ಧಿ ಶೂನ್ಯವಾಗಿ ಜನರು ಬಯ್ಯುವ ಕಾಲದಲ್ಲಿ ಅನುದಾನ ತಂದು ಅದನ್ನಾದರೂ ಜನರಿಗೆ ತೋರಿಸಬಹುದಿತ್ತು ಕುಹುಕವಾಡಿದರು.
ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರ ಸಾಧನೆ ಶೂನ್ಯ ಎಂದು ಹೇಳುತ್ತಿದ್ದೀರಾ. ಕಳೆದ ಆರು ತಿಂಗಳಲ್ಲಿ ದೇಶದಾಧ್ಯಂತ ತಿರುಗಿದ್ದಾರೆ. ಮುಚ್ಚಿ ಹೋಗುತ್ತಿದ್ದಂತಹ ಖಾಸಗಿಯವರು ಕಬಳಿಸುತ್ತಿದ್ದ ಆಂಧ್ರದ ವಿಶಾಖಪಟ್ಟಣ, ಭದ್ರಾವತಿಯ ಕಬ್ಬಿಣದ ಕಾರ್ಖಾನೆ, ಎಚ್‌ಎಂಟಿ ಕಾರ್ಖಾನೆ ಪುನರುಜ್ಜೀವನಗೊಳಿಸಲು 1.35 ಲಕ್ಷ ಕೋಟಿ ರೂ. ವೆಚ್ಚದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡಿದ್ದಾರೆ. ದೇವೇಗೌಡರು ಪ್ರಧಾನಿ ಹಾಗೂ ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆದಂತಹ ವೇಳೆ ರೇವಣನವರ ಶಕ್ತಿಯಿಂದ ಕೆಎಂಎಫ್ ಅಭಿವೃದ್ಧಿಯಾಗಿದ್ದರಿಂದ ಬಡವರು ಬದುಕುವ ಕೆಲಸ ಮಾಡಿದ್ದಾರೆ. ಇಂತಹ ಒಂದು ಕೆಲಸ ಮಾಡಿ ತೋರಿಸಿ ಪಟೇಲ್ರೆ ಎಂದು ಸವಾಲು ಹಾಕಿದರು.
ಸಂಸದರಾಗಿ ಶ್ರೇಯಸ್ ಪಟೇಲ್ ಪ್ರಮುಖವಾಗಿ ಜಿಲ್ಲೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಮಾಡಲು ಶ್ರಮ ವಹಿಸಬೇಕು. ಸಾಕ್ಷಿಗುಡ್ಡೆಗಳನ್ನು ಕಣ್ಣ ಮುಂದೆ ಇಟ್ಟುಕೊಂಡು ಜೆಡಿಎಸ್ ಕೊಡುಗೆ ಏನು ಎಂಬುದನ್ನು ಪ್ರಶ್ನೆ ಮಾಡುವ ಶ್ರೇಯಸ್ ಪಟೇಲ್ ಅಧಿವೇಶನದಲ್ಲಿ ಯಾವ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಕೇಂದ್ರ ಸಚಿವರು ಹಾಸನಕ್ಕೆ ಬಂದಾಗ ಅವರಿಗೆ ಮನವಿ ಮಾಡುವ ಬದಲಾಗಿ ಅವರ ವಿರುದ್ಧವೇ ಮಾತನಾಡುವ ಮೂಲಕ ಆಗುವ ಕೆಲಸಕ್ಕೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ. ಸಿಡಿ ಬಗ್ಗೆ ಮಾತನಾಡುವ ಸಂಸದರು ಸಿಡಿ ಬಿಡುಗಡೆ ಮಾಡಿ ಜಿಲ್ಲೆಯ ಗೌರವವನ್ನು ಬೀದಿ ಪಾಲು ಮಾಡಿದವರ ಜತೆಗೆ ಊಟ ಮಾಡುವ ಕೆಲಸ ಮಾಡುತ್ತಾರೆ. ಹಾಗಾದರೆ ಕುತಂತ್ರ ಯಾರದ್ದು? ಎಂಬುದರ ಬಗ್ಗೆ ಜನ ಯೋಚಿಸಬೇಕಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ, ಪಕ್ಷದ ಮಾಧ್ಯಮ ವಕ್ತಾರ ಹೊಂಗೆರೆ ರಘು, ಎಚ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ ಇತರರು ಉಪಸ್ಥಿತರಿದ್ದರು.