

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ಹಾಗೂ ಅರಸೀಕೆರೆ ತಾಲೂಕಿನಲ್ಲಿ ಭಾನುವಾರ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮೂವರು ಬೈಕ್ ಸವಾರರು ಮೃತಪಟ್ಟಿದ್ದಾರೆ.
ಕಾರು ಡಿಕ್ಕಿಯಾಗಿ ಚನ್ನರಾಯಪಟ್ಟಣ ತಾಲೂಕು ದಿಡಗ ಗ್ರಾಮದ ಡಿ.ಎಂ.ಆದರ್ಶ (21) ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ಬೈಕ್‌ನಲ್ಲಿ ಮೂಕಿಕೆರೆ-ಕನುವಘಟ್ಟ ಗ್ರಾಮದ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ಕಬ್ಬಳಿ ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ರಸ್ತೆ ಮೇಲೆ ಬಿದ್ದ ಬೈಕ್ ಸವಾರನಿಗೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚನ್ನರಾಯಪಟ್ಟಣ ತಾಲೂಕಿನ ಬೀರೂರು ಗ್ರಾಮದಲ್ಲಿ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವಿಗೀಡಾಗಿ, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ. ಅರಸೀಕೆರೆ ತಾಲೂಕಿನ ಎಂ.ವಿ.ಹಟ್ಟಿ ಗ್ರಾಮದ ಪಾಲಾಕ್ಷ (28) ಮೃತರು. ಶುಂಠಿ ಕೆಲಸದ ನಿಮಿತ್ತ ಸಂಬಂಧಿ ನವೀನ್ ಎಂಬುವರ ಜತೆ ಕೆ.ಆರ್.ಪೇಟೆ ತಾಲೂಕಿನ ಗದ್ದಿಗೆ ಗ್ರಾಮಕ್ಕೆ ತೆರಳಿದ್ದ ಇಬ್ಬರೂ ವಾಪಸ್ ಬರುವಾವಾಗ ಅಪಘಾತ ನಡೆದಿದೆ. ಅರಸೀಕೆರೆ ಕಡೆಯಿಂದ ಬಂದ ಅಪರಿಚಿತ ಕಾರು ವೇಗವಾಗಿ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಮೇಲಿದ್ದ ಇಬ್ಬರಿಗೂ ಗಂಭೀರ ಏಟಾಗಿದ್ದರಿಂದ ಕೂಡಲೇ ಚನ್ನರಾಯಪಟ್ಟಣ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಪಾಲಾಕ್ಷ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದು ಬೈಕ್‌ಗೆ ಬೆಂಕಿ ಹೊತ್ತಿ ಸವಾರ ಮೃತಪಟ್ಟಿರುವ ಘಟನೆ ಅರಸೀಕೆರೆಯಲ್ಲಿ ನಡೆದಿದೆ. ಬಾಣಾವರ ಹೋಬಳಿ ಕೆ.ಜಿ.ಅಗ್ರಹಾರ ಗ್ರಾಮದ ನವೀನ್ ಕುಮಾರ್ ಮೃತರು. ನಗರದ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ನವೀನ್‌ಕುಮಾರ್ ಅವರು ಭಾನುವಾರ ರಾತ್ರಿ 11.30ರ ಸಮಯದಲ್ಲಿ ಕೆಲಸ ಮುಗಿಸಿಕೊಂಡು ಮನೆ ಕಡೆಗೆ ಹೊರಟಿದ್ದಾಗ ಎದುರು ಗಡೆಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಸವಾರನಿಗೆ ಗಂಭೀರ ಗಾಯಗಳಾಗಿವೆ. ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಸವಾರ ಮೃತಪಟ್ಟಿದ್ದಾರೆ. ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.