ಜಿಲ್ಲೆಯ ನಾಲ್ಕೂ ತಾಲೂಕು ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನಿಂಗ್ ಕೇಂದ್ರ, ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಮಾಹಿತಿ, ನೆಲಮಂಗಲ ಸಾರ್ವಜನಿಕರ ಆಸ್ಪತ್ರೆ ಪರಿಶೀಲನೆ

07 Nela Ph 01 DC Visit
Published on

ನೆಲಮಂಗಲ: ಕೋವಿಡ್ ಸೋಂಕು ಹರಡುವಿಕೆ ತಡೆಗಟ್ಟಲು ಜಿಲ್ಲೆಯ ಎಲ್ಲ ತಾಲೂಕು ಯೋಜನಾ ಪ್ರಾಧಿಕಾರಕ್ಕೆ ತಲಾ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಈ ಹಣದಲ್ಲಿ ನಾಲ್ಕೂ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನಿಂಗ್ ಸೆಂಟರ್ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದರು.

3 ಕೋಟಿ ರೂ. ಪೈಕಿ 1.50 ಕೋಟಿ ರೂ.ಗಳನ್ನು ಸಿಟಿ ಸ್ಕ್ಯಾನಿಂಗ್ ಸೆಂಟರ್‌ಗೆ ಬಳಸಲಾಗುವುದು. ಉಳಿದ ಹಣದಲ್ಲಿ ವೈದ್ಯಕೀಯ ಪರಿಕರ ಖರೀದಿಸಲು ತಹಸೀಲ್ದಾರ್‌ಗೆ ವೈದ್ಯಕೀಯ ಪರಿಕರಗಳ ಪಟ್ಟಿ ನೀಡುವಂತೆ ನಿರ್ದೇಶನ ನೀಡಲಾಗಿದೆ. ಜತೆಗೆ ನಗರದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಕೆಲ ಯಂತ್ರಗಳ ದುರಸ್ತಿ ಕಾರ್ಯಕ್ಕೆ 3 ಲಕ್ಷ ರೂ. ಬಳಸುವಂತೆ ಆಸ್ಪತ್ರೆ ಆಡಳಿತ ಮಂಡಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

3ನೇ ಅಲೆ ನಿಯಂತ್ರಿಸಲು ಸಿದ್ಧತೆ: ತಾಲೂಕಿನಲ್ಲಿ ಟಿ.ಬೇಗೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದ್ದು, 40 ವೆಂಟಿಲೇಟರ್ ಬೆಡ್ ವ್ಯವಸ್ಥೆ ಕಲ್ಪಿಸಲಾಗಿದೆ. ಸಂಸ್ಥೆ ಅಧ್ಯ ಜಿ.ಪರಮೇಶ್ವರ್ ಅವರೊಂದಿಗೆ ಚರ್ಚಿಸಿದ್ದು 1.50 ಕೋಟಿ ರೂ. ವೆಚ್ಚದಲ್ಲಿ ಆಕ್ಸಿಜನ್ ಜನರೇಟರ್ ವ್ಯವಸ್ಥೆ ಮಾಡಲಾಗುತ್ತಿದೆ. 150 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡುವಂತೆ ಆಡಳಿತ ಮಂಡಳಿ ತಿಳಿಸಿದ್ದಾರೆ. ಜತೆಗೆ 2ಕೆಎಲ್ ಆಕ್ಸಿಜನ್ ಪ್ಲಾಂಟ್ ವ್ಯವಸ್ಥೆ ಮಾಡಿದ್ದು, ಮುಂದಿನ ದಿನಗಳಲ್ಲಿ ಕೋವಿಡ್ 3ನೇ ಅಲೆಯ ನಿಯಂತ್ರಿಸಲು ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಾನವೀಯತೆ ಮೆರೆದ ಜಿಲ್ಲಾಧಿಕಾರಿ: ನೆಲಮಂಗಲದ ಸಾರ್ವಜನಿಕ ಆಸ್ಪತ್ರೆ ಶೌಚಗೃಹದ ಬಳಿ ಮಾನಸಿಕ ಅಸ್ವಸ್ಥ ವೃದ್ಧನೋರ್ವ ನರಳಾಡುತ್ತಿದ್ದುದನ್ನು ಕಂಡ ಜಿಲ್ಲಾಧಿಕಾರಿ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು. ಬಳಿಕ ನಿಮ್ಹಾನ್ಸ್‌ಗೆ ಕರೆ ಮಾಡಿ ತಕ್ಷಣ ಆ ರೋಗಿಯನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾದರು.

ಉಪವಿಭಾಗಾಧಿಕಾರಿ ಅರುಳ್‌ಕುಮಾರ್, ತಹಸೀಲ್ದಾರ್ ಕೆ.ಮಂಜುನಾಥ್, ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಕಾಂತರಾಜು, ರಾಜಸ್ವ ನಿರೀಕ್ಷಕ ಸುದೀಪ್, ವೈದ್ಯ ನಾಗೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net