

ಹಾಸನ: ಜಿಲ್ಲೆಯ ವಿವಿಧೆಡೆ ನಡೆದಿರುವ ನಾಲ್ಕು ಮನೆ ಕಳವು ಪ್ರಕರಣಗಳಲ್ಲಿ ಬೀಗ ಮುರಿದು 92 ಸಾವಿರ ನಗದು ಹಾಗೂ 7.73 ಲಕ್ಷ ರೂ. ಮೌಲ್ಯದ 1.47 ಗ್ರಾಮದ ಚಿನ್ನ ಹಾಗೂ ಬೆಳ್ಳಿಯ ಆಭರಣ ಕಳವು ಮಾಡಲಾಗಿದೆ.
ಪ್ರಕರಣ-1: ಮನೆಯ ಬಾಗಿಲಿನ ಬೀಗ ಮುರಿದು ಬೀರುವಿನಲ್ಲಿಟ್ಟಿದ್ದ 32 ಸಾವಿರ ನಗದು ಹಾಗೂ ಸುಮಾರು 116 ಗ್ರಾಂ ತೂಕದ ಚಿನ್ನಾಭರಣ ಮತ್ತು ಬೆಳ್ಳಿಯ ಆಭರಣ ಕಳವು ಮಾಡಿರುವ ಘಟನೆ ನಗರದ ಬಿ.ಟಿ.ಕೊಪ್ಪಲಿನ ಕೆಎಸ್‌ಆರ್‌ಟಿಸಿ ಬಡಾವಣೆಯಲ್ಲಿ ನಡೆದಿದೆ.ಬಡಾವಣೆಯ ತಿಮ್ಮಯ್ಯ ಎಂಬುವರು ಆ.24 ರ ಸಂಜೆ ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಆಲೂರು ತಾಲೂಕು ಕೆ.ಕಾಟೀಹಳ್ಳಿ ಗ್ರಾಮಕ್ಕೆ ಹಬ್ಬಕ್ಕೆ ಹೋಗಿದ್ದರು. ಹಬ್ಬ ಮುಗಿಸಿಕೊಂಡು ಮರುದಿನ ರಾತ್ರಿ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಮನೆಯ ಬೀಗ ಒಡೆದು ಒಳ ನುಗ್ಗಿ ಬೀರುವಿನಲ್ಲಿಟ್ಟಿದ್ದ ಸುಮಾರು 116 ಗ್ರಾಂ ತೂಕವುಳ್ಳ ಅಂದಾಜು 5,30,643 ರೂ. ಬೆಲೆಬಾಳುವ ಆಭರಣಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಪತ್ತೆ ಮಾಡಿಕೊಡಬೇಕೆಂದು ಬಡಾವಣೆ ಪೊಲೀಸರಿಗೆ ದೂರು ನೀಡಲಾಗಿದೆ.
ಪ್ರಕರಣ-2: ಬೇಲೂರು ತಾಲೂಕು ಹಳೇಬೀಡು ಹೋಬಳಿಯ ಜೋಡಿ ತಿಪ್ಪನಹಳ್ಳಿಯ ಪ್ರೇಮಾ ಎಂಬುವರು ಆ.25 ರಂದು ಮನೆಗೆ ಬೀಗ ಹಾಕಿಕೊಂಡು ಪತಿಯೊಂದಿಗೆ ಮಗಳ ಊರಾದ ಕೊಮ್ಮರಾನಹಳ್ಳಿಗೆ ಹೋಗಿದ್ದರು. ಮದು ದಿನ ಬಂದು ನೋಡಿದಾಗ ಮನೆಯ ಬೀರುವಿನಲ್ಲಿಟ್ಟಿದ್ದ 30 ಸಾವಿರ ಹಣ, 40 ಸಾವಿರ ಬೆಲೆಬಾಳುವ 7 ಗ್ರಾಂ ತೂಕದ ಒಂದು ಜೊತೆ ಚಿನ್ನದ ಕಿವಿಯ ಓಲೆ ಕಳುವಾಗಿರುವುದು ಗೊತ್ತಾಗಿದೆ.
ಪ್ರಕರಣ-3: ಹಳೇಬೀಡಿನ ಹೊಯ್ಸಳ ಬಡಾವಣೆಯ ಚಲುವರಾಜು ಎಂಬುವರು ಆ.16 ರಂದು ತಮ್ಮ ಪತ್ನಿಯೊಂದಿಗೆ ಮಗಳ ಊರಾದ ಬೆಂಗಳೂರಿಗೆ ಹೋಗಿದ್ದರು. ಈ ಅವಧಿಯಲ್ಲಿ ಬೀರುವಿನಲ್ಲಿಟ್ಟಿದ್ದ ಅಂದಾಜು 70 ಸಾವಿರ ಬೆಲೆಬಾಳುವ ಆಭರಣ ಮತ್ತು 15 ಸಾವಿರ ಬೆಲೆಬಾಳುವ ಬೆಳ್ಳಿಯ ವಸ್ತುಗಳು ಮತ್ತು 20 ಸಾವಿರ ಹಣವನ್ನು ಕಳವುಮಾಡಿಕೊಂಡು ಹೋಗಿದ್ದಾರೆ.
ಪ್ರಕರಣ-4: ಹಳೇಬೀಡಿನ ಜನತಾ ಕಾಲೋನಿಯ ಸತೀಶ ಆ.25 ರಂದು ಸಂಜೆ ಮನೆಗೆ ಬೀಗ ಹಾಕಿಕೊಂಡು ಪತ್ನಿಯೊಂದಿಗೆ ಸಂಬಂಧಿಕರ ಮನೆಗೆ ಹೋಗಿ ಮರು ದಿನ ಬಂದು ನೋಡಿದಾಗ ಬೀಗ ಒಡೆದು ಬೀರುವಿನಲ್ಲಿಟ್ಟಿದ್ದ 10 ಸಾವಿರ ನಗದು, ಅಂದಾಜು 98 ಸಾವಿರ ಬೆಲೆಬಾಳುವ ಚಿನ್ನಾಭರಣ ಕಳವು ಮಾಡಲಾಗಿದೆ. ಈ ಸಂಬಂಧ ಹಳೇಬೀಡು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.