ಜಿಲ್ಲೆಯ ನಾಯಕರು ತಮ್ಮ ವೈಮನಸುಗಳನ್ನು ಬಿಟ್ಟು ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು:ಜಿ.ಸಿ. ಚಂದ್ರಶೇಖರ್ ಕರೆ

ಜಿಲ್ಲೆಯ ನಾಯಕರು ತಮ್ಮ ವೈಮನಸುಗಳನ್ನು ಬಿಟ್ಟು ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು:ಜಿ.ಸಿ. ಚಂದ್ರಶೇಖರ್ ಕರೆ
Published on

ಹಾಸನ: ಲೋಕಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಶ್ರೇಯಸ್ ಪಟೇಲ್ ಗೆಲ್ಲುವ ಎಲ್ಲಾ ಅವಕಾಶಗಳಿವೆ. ಆದರೆ ಜಿಲ್ಲೆಯ ನಾಯಕರು ಮತ್ತು ಮುಖಂಡರು ತಮ್ಮ ವೈಮನಸುಗಳನ್ನು ಬಿಟ್ಟು ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ರಾಜ್ಯಸಭಾ ಸದಸ್ಯ ಹಾಗೂ ಲೋಕಸಭಾ ಚುನಾವಣೆಯ ಜಿಲ್ಲಾ ಉಸ್ತುವಾರಿ ಜಿ.ಸಿ. ಚಂದ್ರಶೇಖರ್ ಕರೆ ನೀಡಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ ಎಂಬ ಮಾತುಗಳಿವೆ. ಈಗ ಅವೆಲ್ಲವನ್ನೂ ಬದಿಗಿಟ್ಟು, ವೈಯಕ್ತಿಕ ಪ್ರತಿಷ್ಠೆ, ಭಿನ್ನಾಭಿಪ್ರಾಯ ಎಲ್ಲವನ್ನು ಮರೆತು ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ರಾಜ್ಯ ನಾಯಕರಿಗೆ ಸಂದೇಶವನ್ನು ನೀಡಬೇಕು ಎಂದು ಹೇಳಿದರು.
ನಾನು ಚಿತ್ರಗುಪ್ತನ ತರ ಇಲ್ಲಿ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತವೆ ಮತ್ತು ಯಾವೆಲ್ಲ ಸಮಸ್ಯೆಗಳಿವೆ ಎಂಬುದನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಮುಂದೆ ಇದಕ್ಕೆಲ್ಲಾ ಹೊಣೆಗಾರರು ಆಯಾ ನಾಯಕರು ಆಗಿರುತ್ತಾರೆ. ಅದಕ್ಕೆ ಅವಕಾಶ ಮಾಡಿಕೊಡದೆ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ನೀವೆಲ್ಲರೂ ಸ್ವಾರ್ಥವನ್ನು ಬದಿಗಿಟ್ಟು ಕೆಲಸ ಮಾಡಿ. ನಾನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಉಸ್ತುವಾರಿ ತೆಗೆದುಕೊಂಡು ಅಲ್ಲಿ ಇದ್ದಂತಹ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಏಳು ಸ್ಥಾನಗಳಲ್ಲಿ ಆರು ಸ್ಥಾನವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ಮಂಡ್ಯ ಜಿಲ್ಲೆಗಿಂತ ನನ್ನ ಜಿಲ್ಲೆ ನನಗೇನು ಹೊಸದಲ್ಲ. ಇಲ್ಲಿರುವಂತಹ ಸಮಸ್ಯೆಗಳನ್ನು ಬಗೆಹರಿಸುವುದು ನನಗೆ ಗೊತ್ತಿದೆ ಎಂದರು.
ಈ ಬಾರಿ ಚುನಾವಣೆಯಲ್ಲಿ ಪ್ರತಿ ಬೂತ್ ಮಟ್ಟದ ಮುಖಂಡರ ಪಟ್ಟಿಯನ್ನು ಹಿಡಿದುಕೊಂಡು ಯಾರ್ಯಾರು ಎಷ್ಟೆಷ್ಟು ಮತಗಳನ್ನು ನಮ್ಮ ಪಕ್ಷಕ್ಕೆ ಹಾಕಿಸಿದ್ದಾರೆ ಎಂಬುದನ್ನ ನಾನು ಪಟ್ಟಿ ತಯಾರಿಸುತ್ತೇನೆ. ಕಡಿಮೆ ಮತ ಹಾಕಿಸಿದ ನಾಯಕರು ಮುಂದೆ ನಮ್ಮಿಂದ ಯಾವ ಕೆಲಸವನ್ನು ಕೂಡ ಮಾಡಿಸಿಕೊಳ್ಳಲು ಆಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ನಾನು ಬಂದ ದಿನದಿಂದ ಜಿಲ್ಲೆಯಲ್ಲಿ ಗಲಾಟೆ, ಗೊಂದಲ, ಆರೋಪ ಪ್ರತ್ಯಾರೋಪಗಳ ನೋಡುತ್ತಿದ್ದೇನೆ. ಆದರೆ ಇವೆಲ್ಲವನ್ನು ಸಹಿಸಿಕೊಂಡು ತಾಳ್ಮೆಯಿಂದ ಇದ್ದೇನೆ. ನನ್ನ ತಾಳ್ಮೆಯನ್ನು ಕೆಣಕಬೇಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ನೀವೆಲ್ಲರೂ ಶ್ರಮ ವಹಿಸಿ ಕೆಲಸ ಮಾಡಿ ಎಂದು ಹೇಳಿದರು.
ಜಿ.ಪುಟ್ಟಸ್ವಾಮಿಗೌಡ ಹಾಗೂ ಶ್ರೀಕಂಠಯ್ಯ ಅವರ ಕುಡಿ ಈಗ ಚುನಾವಣೆ ಅಖಾಡದಲ್ಲಿದೆ. ಅವರಿಗೆ ನಿಮ್ಮೆಲ್ಲರ ಪ್ರೀತಿ ವಿಶ್ವಾಸ ಮತ್ತು ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕೆಲಸ ಮಾಡಿ. ತಮ್ಮ ವೈಮನಸುಗಳನ್ನು ಬದಿಗಿಟ್ಟು ಅವರ ಗೆಲುವಿಗೆ ಶ್ರಮಿಸಬೇಕು. ನಮಗೆ ಈಗ ಬಂದಿರುವ ಅವಕಾಶವನ್ನು ಕೈ ಚೆಲ್ಲಿದರೆ ಮುಂದೆ ಎಂದೂ ಕೂಡ ಇಂತಹ ಅವಕಾಶ ಬರುವುದಿಲ್ಲ ಎಂದು ಹೇಳಿದರು.
ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಮನೆ ಎಂದ ಮೇಲೆ ಜಗಳ ಸಾಮಾನ್ಯ. ಪಕ್ಷ ಎಂದ ಮೇಲೆ ಭಿನ್ನಾಭಿಪ್ರಾಯಗಳು ಇರುತ್ತವೆ. ಅವೆಲ್ಲವನ್ನು ಬಿಟ್ಟು ಎಲ್ಲರೂ ಕೆಲಸ ಮಾಡಿ, ನಮಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಮತ್ತು ಜಿ.ಸಿ. ಚಂದ್ರಶೇಖರ್ ಇಬ್ಬರೂ ಫೈರ್ ಬ್ರಾಂಡ್‌ಗಳಾಗಿದ್ದಾರೆ. ರಾಜಣ್ಣ ಒಳ್ಳೆಯ ಫೈರ್ ಬ್ರಾಂಡ್ ಆದರೆ ಜಿಲ್ಲೆಗೆ ಬಂದ ಮೇಲೆ ಯಾಕೋ ಸ್ವಲ್ಪ ತಣ್ಣಗಾಗಿದ್ದಾರೆ. ಇಬ್ಬರು ನಾಯಕರು ಗುಪ್ತ ಸಭೆಗಳನ್ನು ಮಾಡಬೇಕು. ಹಾಸನ, ಚನ್ನರಾಯಪಟ್ಟಣ, ಅರಕಲಗೂಡು, ಬೇಲೂರು,ಸಕಲೇಶಪುರದಲ್ಲಿ ಗುಪ್ತ ಸಭೆಗಳನ್ನು ಮಾಡಿ ನಾಯಕರ ನಡುವೆ ಇರುವಂತಹ ಭಿನ್ನಾಭಿಪ್ರಾಯ ಬಗೆಹರಿಸಬೇಕು ಎಂದು ಹೇಳಿದರು ಈ ಸಂದರ್ಭದಲ್ಲಿ ಕೆಲ ಮುಖಂಡರು ಮತ್ತು ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾಗ ಶಿವಲಿಂಗೇಗೌಡರು ಕೆಂಡಮಂಡಲರಾದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಈ.ಎಚ್. ಲಕ್ಷ್ಮಣ್, ಮಾಜಿ ರಾಜ್ಯಸಭಾ ಸದಸ್ಯ ಎಚ್.ಕೆ. ಜವರೇಗೌಡ, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಎಂ.ಎ. ಗೋಪಾಲಸ್ವಾಮಿ, ಮುಖಂಡರಾದ ಬನವಾಸಿ ರಂಗಸ್ವಾಮಿ, ಎಚ್.ಕೆ. ಮಹೇಶ್, ಮುನಿಸ್ವಾಮಿ, ಬಾಗೂರು ಮಂಜೇಗೌಡ, ಪಾಟೀಲ್ ಶಿವಪ್ಪ, ಜಾವಗಲ್ ಮಂಜುನಾಥ್, ಸಣ್ಣಸ್ವಾಮಿ, ಕೃಷ್ಣೆಗೌಡ ಇನ್ನಿತರರು ಇದ್ದರು.

ದೇವೇಗೌಡರ ಬೆದರಿಕೆಗೆ ಜಗ್ಗಲ್ಲ:ಕೆಎಂಶಿ
ನಾನು ರಾಜಕಾರಣದಲ್ಲಿ ಎಲ್ಲವನ್ನ ನೋಡಿದ್ದೇನೆ ಬೆದರಿಕೆ ಆಗುವುದು. ಗುಟುರು ಹಾಕಿದರೆ ಜಗ್ಗುವ ಮನುಷ್ಯ ನಾನಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹೇಳಿಕೆಗೆ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ ತಿರಿಗೇಟು ನೀಡಿದರು
ಎಚ್ಚರಿಕೆ ಬೆದರಿಕೆಗೆ ಬಗ್ಗುವುದಿಲ್ಲ ಈ ಎಲ್ಲವನ್ನ ಎದುರಿಸಲು ನಾನು ಸಿದ್ಧವಾಗಿದ್ದೇನೆ. ಸತ್ಯ ಮಾತನಾಡಲು ನನಗೆ ಭಯವಿಲ್ಲ ದೇವೇಗೌಡರು ನನ್ನ ಬಗ್ಗೆ ಮತ್ತು ಮಾಜಿ ರಾಜ್ಯಸಭಾ ಸದಸ್ಯರಾದ ಎಚ್.ಕೆ. ಜವರೇಗೌಡ ಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net