ಜಿಲ್ಲೆಯ ಜನರು ನನ್ನನ್ನು ನೆನಪಿಟ್ಟುಕೊಳ್ಳುವ ರೀತಿ ಕೆಲಸ ಮಾಡುತ್ತೇನೆ; ಡಿಸಿ ಕೆ.ಎಸ್. ಲತಾ ಕುಮಾರಿ

25_HSN_02
Published on

ಹಾಸನ: ಮೊದಲ ಬಾರಿಗೆ ಜಿಲ್ಲಾಧಿಕಾರಿಯಾಗಿ ಹಾಸನಕ್ಕೆ ಬಂದಿದ್ದೇನೆ. ಇಲ್ಲಿನ ಸಮಸ್ಯೆಗಳನ್ನು ಅರಿಯಲು ಜನರೊಂದಿಗೆ ಬೆರೆತು ಅವರ ಕಷ್ಟ-ಸುಖಗಳನ್ನು ಆಲಿಸಿ ಕೆಲಸ ಮಾಡುವ ಮೂಲಕ ಇಲ್ಲಿಯ ಜನರ ಪ್ರೀತಿಯನ್ನು ಗಳಿಸಿಕೊಂಡು ನಿರ್ಗಮಿಸುತ್ತೇನೆ ಎಂದು ನೂತನ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಹೇಳಿದರು.

ನೂತನ ಜಿಲ್ಲಾಧಿಕಾರಿ ಲತಾ ಕುಮಾರಿ ಅವರನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬುಧವಾರ ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಲಾಯಿತು. ನಂತರ ಸಂವಾದದಲ್ಲಿ ಮಾತನಾಡಿದ ಅವರು, ಚಿಕ್ಕಂದಿನಿಂದಲೂ ಕೂಡ ಬೇಲೂರು - ಹಳೆಬೀಡು ಎಂದರೆ ನನ್ನ ಅಚ್ಚುಮೆಚ್ಚಿನ ಪ್ರವಾಸಿ ಸ್ಥಳ. ಅಂತಹ ಜಿಲ್ಲೆಯಲ್ಲೇ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಇಲ್ಲಿನ ಜನಸಾಮಾನ್ಯರೊಂದಿಗೆ ಇದ್ದು ಅವರ ಸಮಸ್ಯೆಯನ್ನು ಬಗೆಹರಿಸುವ ಮೂಲಕ ಜಿಲ್ಲೆಯ ಜನರು ನನ್ನ ಹೆಸರು ಮತ್ತು ಕೆಲಸವನ್ನು ನೆನಪಿಟ್ಟುಕೊಳ್ಳುವ ರೀತಿ ಕೆಲಸ ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಅದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ಸರ್ಕಾರದ ಸೌಲಭ್ಯಗಳನ್ನು ಜನರಿಗೆ ಮುಟ್ಟಿಸುವುದೇ ಸರ್ಕಾರಿ ಕೆಲಸ. ಇದನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಜಿಲ್ಲೆಗೆ ಬಂದು ಒಂದು ವಾರವಾಗಿದ್ದು, ಈಗಾಗಲೇ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಜಿಲ್ಲೆಯಲ್ಲಿರುವಂತಹ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಹಂತ ಹಂತವಾಗಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಹಾಸನ ಜಿಲ್ಲೆ ಮಲೆನಾಡು, ಅರೆ ಮಲೆನಾಡು ಹಾಗೂ ಬಯಲು ಸೀಮೆಯಿಂದ ಕೂಡಿದ್ದು, ಇಲ್ಲಿ ಆಯಾ ಪ್ರದೇಶದಲ್ಲಿ ಆಯಾ ಸಮಸ್ಯೆಗಳಿವೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ನಾನು ಕೆಲ ಶಾಲೆಗಳಿಗೆ ಭೇಟಿ ನೀಡಿರುವುದರಿಂದ ಇದು ನನ್ನ ಅನುಭವಕ್ಕೆ ಬಂದಿದೆ. ಇನ್ನುಳಿದಂತೆ ಸರ್ಕಾರಿ ಶಾಲೆಗಳಲ್ಲಿ ಕಟ್ಟಡ ದುರಸ್ತಿ ಕಾರ್ಯ ನಡೆಯಬೇಕಿದ್ದು, ಹಂತ ಹಂತವಾಗಿ ಸರ್ಕಾರದ ಅನುದಾನ ಹಾಗೂ ಜನಪ್ರತಿನಿಧಿಗಳ ಅನುದಾನ ಸೇರಿದಂತೆ ಖಾಸಗಿ ವಲಯದಿಂದಲೂ ಕೂಡ ಸಹಕಾರ ಪಡೆದುಕೊಂಡು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಶ್ರಮ ವಹಿಸುತ್ತೇನೆ ಎಂದು ಹೇಳಿದರು.

ಸಕಲೇಶಪುರ ಭಾಗದಲ್ಲಿ ರಸ್ತೆಯ ಸಮಸ್ಯೆ, ಭೂಕುಸಿತ, ಹಲವು ವರ್ಷಗಳಿಂದ ಮಲೆನಾಡು ಭಾಗದಲ್ಲಿ ಕಾಡಾನೆಗಳ ಸಂಘರ್ಷ ಹೆಚ್ಚಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದು, ಅದನ್ನು ಈಡೇರಿಸಲು ಶತಪ್ರಯತ್ನ ಮಾಡುವುದಾಗಿ ತಿಳಿಸಿದರು.

ಕೇವಲ ನನ್ನೊಬ್ಬಳಿಂದ ಎಲ್ಲವನ್ನೂ ಮಾಡಿ ಮುಗಿಸುತ್ತೇನೆ ಎಂಬುದು ಸರಿಯಲ್ಲ. ನನ್ನ ಅಧೀನ ಅಧಿಕಾರಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು, ಪತ್ರಕರ್ತರು ಹಾಗೂ ಎಲ್ಲ ಜನಪ್ರತಿನಿಧಿಗಳ ಸಹಕಾರ ನನಗೆ ಅತ್ಯಗತ್ಯವಾಗಿದೆ. ಈಗಾಗಲೇ ರಾಜ್ಯದಲ್ಲಿ ಕಂದಾಯ ಇಲಾಖೆಯ ಕೆಲಸದಲ್ಲಿ ನಮ್ಮ ಹಾಸನ ಜಿಲ್ಲೆ ಮುಂಚೂಣಿಯಲ್ಲಿದೆ. ಅದೇ ರೀತಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ 7ನೇ ಸ್ಥಾನದಲ್ಲಿದೆ. ಮುಂದಿನ ದಿನಗಳಲ್ಲಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಪ್ರಯತ್ನ ನಡೆಸುತ್ತೇನೆ ಎಂದು ಹೇಳಿದರು.

ನಾನು ಜಿಲ್ಲೆಗೆ ವರ್ಗಾವಣೆಯಾದ ತಕ್ಷಣವೇ ನನ್ನ ಸಹಪಾಠಿಗಳು ತಿಳಿಸಿದ್ದು ಮೊದಲಿಗೆ ಹಾಸನಾಂಬ ಜಾತ್ರಾ ಉತ್ಸವದ ಬಗ್ಗೆ. ಈ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಯಾವುದೇ ಲೋಪವಾಗದಂತೆ ನಡೆಸಲಾಗುವುದು. ಇದು ಕೇವಲ ಜಿಲ್ಲಾಡಳಿತದ ಉತ್ಸವವಾಗದೆ ಎಲ್ಲರ ಉತ್ಸವವಾಗಬೇಕು, ಆ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು. ಈಗಾಗಲೇ ಸಭೆಯನ್ನು ನಡೆಸಿ ಮಾಹಿತಿಯನ್ನು ಪಡೆದುಕೊಂಡಿದ್ದೇನೆ. ಈ ಹಿಂದೆ ಆಗಿರುವ ಸಣ್ಣಪುಟ್ಟ ದೋಷಗಳ ಬಗ್ಗೆ ಎಚ್ಚರ ವಹಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಿರುವುದರಿಂದ ಗಂಟೆಗಟ್ಟಲೇ ಕಾದು ದರ್ಶನ ಪಡೆಯುವುದಕ್ಕಿಂತ ಸುಲಭವಾಗಿ ದರ್ಶನ ಪಡೆಯುವುದರ ಬಗ್ಗೆ ಮಾರ್ಗಸೂಚಿಯನ್ನು ರೂಪಿಸಲಾಗುತ್ತಿದೆ ಮತ್ತು ಯಾವುದೇ ತಪ್ಪುಗಳು ಆಗದಂತೆ ಯಶಸ್ವಿಯಾಗಿ ಈ ಜಾತ್ರಾ ಮಹೋತ್ಸವವನ್ನು ನಡೆಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತಿಯೊಬ್ಬ ಐಎಎಸ್ ಅಧಿಕಾರಿಗಳಿಗೆ ಒಂದು ಜಿಲ್ಲೆಗೆ ಜಿಲ್ಲಾಧಿಕಾರಿಯಾಗಬೇಕೆಂಬ ಆಸೆ ಇರುತ್ತದೆ. ನನಗೂ ಕೂಡ ಆಸೆ ಇತ್ತು. ನನ್ನ ಅದೃಷ್ಟವೋ ಏನೋ ಹಾಸನದಂತಹ ಜಿಲ್ಲೆ ನನಗೆ ಸಿಕ್ಕಿರುವುದು ಹೆಮ್ಮೆಯ ವಿಚಾರ. ಅದೇ ಖುಷಿಯಿಂದ ನಾನು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ನನ್ನ ತಂದೆ ನನಗೆ ಸಹಿ ಮಾಡಲು ದೂರದ ಊರಿನಿಂದ ಬಂದು ಗ್ರೀನ್ ಇಂಕ್ ಪೆನ್ ನೀಡಿ ನನಗೆ ಹರಸಿದ್ದಾರೆ ಎಂದು ಮನದಾಳದ ಮಾತನ್ನು ಹಂಚಿಕೊಂಡರು.

ಪತಿಯ ಸಹಕಾರದಿಂದ ಡಿಸಿ

ಬಳ್ಳಾರಿ ಮೂಲದ ರೈತಾಪಿ ಕುಟುಂಬ ನಮ್ಮದು. ನಮ್ಮ ತಂದೆ ಪಿಯುಸಿ ಫೇಲಾಗಿ ಸರ್ಕಾರಿ ನೌಕರಿಗೆ ಸೇರಿದರು. ನಮ್ಮ ಕುಟುಂಬದಲ್ಲಿ ಸರ್ಕಾರಿ ನೌಕರಿ ಪಡೆದವರಲ್ಲಿ ನಮ್ಮ ತಂದೆಯೇ ಮೊದಲಿಗರು. ನಾನು ಕೂಡ ಎಸ್‌ಎಸ್‌ಎಲ್‌ಸಿ ಉತ್ತೀರ್ಣವಾದ ನಂತರ ಹಠ ಮಾಡಿಕೊಂಡು ವಿಜ್ಞಾನವನ್ನೇ ತೆಗೆದುಕೊಂಡೆ. ನಾನು ಡಿಗ್ರಿ ಓದುತ್ತಿರುವಾಗಲೇ ಮನೆಯವರ ಒತ್ತಾಯಕ್ಕೆ ಮಣಿದು ಒಲ್ಲದ ಮನಸ್ಸಿನಲ್ಲಿ ಮದುವೆಯಾಗಬೇಕಾಯಿತು. ಆದರೆ ನನಗೆ ಬೆಸ್ಟ್ ಜೋಡಿ ಸಿಕ್ಕಿದರು. ಅವರು ಕೂಡ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದರು. ನಾನು ಮದುವೆಯಾದ ನಂತರ ಓದಲು ಅವಕಾಶ ಮಾಡಿಕೊಟ್ಟರು. ನಂತರ ಎಂಎಸ್ಸಿ ಮುಗಿಸಿ ವಿಜ್ಞಾನಿಯಾಗಬೇಕು ಎಂದುಕೊಂಡಿದ್ದೆ. ಆದರೆ ನಮ್ಮ ಮನೆಯವರಿಗೆ ನಾನು ಕೆಲಸ ಮಾಡುವುದು ಇಷ್ಟವಿರಲಿಲ್ಲ. ಆದ್ದರಿಂದ ಅವರು ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳುವಂತೆ ಪ್ರೇರೇಪಿಸಿದರು ಎಂದರು.

ಮದುವೆ ಹೊಸದರಲ್ಲಿ ಗಂಡನ ಮನೆಗೆ ಹೋದಾಗ ಅಲ್ಲಿ ಒಂದು ಕೋಣೆಗೆ ಬೀಗ ಹಾಕಿದ್ದರು. ಅದು ಏನೆಂದು ಕೇಳಿದಾಗ ಬೀಗ ತೆಗೆದು ತೋರಿಸಿದ್ದರು. ಅದರ ತುಂಬಾ ಕೇವಲ ಪುಸ್ತಕಗಳೇ ತುಂಬಿದ್ದವು. ಆಗ ನನಗೆ ಅರ್ಥವಾಯಿತು ನನ್ನ ಗಂಡ ಸಹ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ನಮ್ಮ ಅತ್ತೆ ಆ ಪುಸ್ತಕಗಳನ್ನೆಲ್ಲ ಮಂಡಕ್ಕಿ ಕಟ್ಟಲು ಎಲ್ಲರಿಗೂ ಕೊಡುತ್ತಿದ್ದರೆಂದು ರೂಮಿನಲ್ಲಿಟ್ಟು ಬೀಗ ಹಾಕಿದ್ದರಂತೆ. ನಂತರ ನಾನು ಅವುಗಳನ್ನು ತೆಗೆದುಕೊಂಡು ಓದಲು ಶುರುಮಾಡಿದೆ. 6 ತಿಂಗಳು ಕಾಲ ಮನೆಯಲ್ಲಿ ಇದ್ದುಕೊಂಡು ಯಾವುದೇ ತರಬೇತಿ ಪಡೆಯದೆ ಯುಪಿಎಸ್‌ಸಿ ಮೊದಲ ಅರ್ಹತಾ ಪರೀಕ್ಷೆಯನ್ನು ಮೊದಲ ಬಾರಿಗೆ ಪಾಸ್ ಮಾಡಿಕೊಂಡೆ. ನಂತರ 2006ರಲ್ಲಿ ನಾನು ಸರ್ಕಾರಿ ನೌಕರಿಗೆ ಸೇರಿಕೊಂಡು ಅಲ್ಲಿಂದ ಇಲ್ಲಿಯವರೆಗೆ ಹಲವು ಇಲಾಖೆಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಜಿಲ್ಲಾಧಿಕಾರಿಯಾಗಿ ಮೊದಲ ಬಾರಿಗೆ ಹಾಸನಕ್ಕೆ ಬಂದಿದ್ದೇನೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ಎಚ್.ವೇಣುಕುಮಾರ್, ಸಂಘದ ಮಾಜಿ ಅಧ್ಯಕ್ಷರಾದ ರವಿ ನಾಕಲಗೂಡು, ಆರ್.ಪಿ.ವೆಂಕಟೇಶಮೂರ್ತಿ, ಲೀಲಾವತಿ, ಪ್ರಧಾನ ಕಾರ್ಯದರ್ಶಿ ಬಿ.ಸಿ.ಶಶಿಧರ್ ಸೇರಿದಂತೆ ಪದಾಧಿಕಾರಿಗಳು ಮತ್ತು ಪತ್ರಕರ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net