ಜಿಲ್ಲೆಯ ಜನರ ಚಿತ್ತ ಕೇಂದ್ರ ಬಜೆಟ್​ನತ್ತ

Train_2
Published on

ಗದಗ: ಕೇಂದ್ರ ಬಜೆಟ್ ಮೇಲೆ ಗದಗ ಜಿಲ್ಲೆಯ ಜನರ ದೃಷ್ಟಿ ನೆಟ್ಟಿದೆ. ಈ ವರ್ಷವಾದರೂ ಕೇಂದ್ರ ಸರ್ಕಾರ ಜಿಲ್ಲೆಯ ಬೇಡಿಕೆಗಳಿಗೆ ಸ್ಪಂದಿಸುವುದೇ ಎನ್ನುವ ನಿರೀಕ್ಷೆಯಲ್ಲಿ ಜನರಿದ್ದಾರೆ.

ಗದಗ ರೈಲ್ವೆ ನಿಲ್ದಾಣದಲ್ಲಿ ಸುಸಜ್ಜಿತ ಗೂಡ್ಸ್​ಶೆಡ್ ನಿರ್ಮಾಣ ಮಾಡಬೇಕೆಂದು ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ, ರೈಲ್ವೆ ಸಚಿವ ಪಿಯೂಷ್ ಗೋಯಲ್, ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಲ್ಹಾದ ಜೋಶಿ ಹಾಗೂ ಸಂಸದ ಶಿವಕುಮಾರ ಉದಾಸಿ ಅವರಿಗೆ ಮನವಿ ಮಾಡಲಾಗಿದೆ.

ಗದಗ-ವಾಡಿ, ಗದಗ-ಯಲವಗಿ, ಮುನಿರಾಬಾದ್-ಮೆಹಬೂಬನಗರ, ಬಾಗಲಕೋಟೆ-ಕುಡಚಿ, ಗಿಣಿಗೇರಾ-ರಾಯಚೂರ ರೈಲ್ವೆ ಮಾರ್ಗಗಳ ಕಾಮಗಾರಿ ಆರಂಭಿಸಬೇಕು. ಈ ಎಲ್ಲ ಕಾರ್ಯಗಳಿಗೂ ಹಣಕಾಸಿನ ನೆರವು ನೀಡಬೇಕು. ರೈಲ್ವೆ (ಡೆಮೋ ಹಾಗೂ ಮೆಮೋ) ವರ್ಕ್ಸ್ ಶಾಪ್ ಅನ್ನು ಗದಗ ರೈಲ್ವೆ ನಿಲ್ದಾಣದಲ್ಲಿ ಸ್ಥಾಪನೆ ಮಾಡಬೇಕು. ಕಲಬುರಗಿ ಮತ್ತು ಮಂಗಳೂರು ಹೊಸ ವಿಭಾಗಗಳನ್ನು ಸ್ಥಾಪನೆ ಮಾಡುವುದು. ಅಣ್ಣಿಗೇರಿಯಿಂದ ಸವದತ್ತಿ ಯಲ್ಲಮನಗುಡ್ಡಕ್ಕೆ ಹೊಸ ರೈಲು ಮಾರ್ಗ ರಚಿಸಿ, ಸರ್ವೆಗೆ ಮಂಜೂರಾತಿ ನೀಡುವುದು. ಹೊಸ ರೈಲುಗಳನ್ನು ಮಂಜೂರು ಮಾಡಿ ವಿಜಯಪುರ ತಿರುಪತಿ ವಾಯಾ ಗದಗ ಮೂಲಕ ಓಡಿಸುವುದು. ರಾತ್ರಿ ವೇಳೆಯಲ್ಲಿ ಹುಬ್ಬಳ್ಳಿ -ಸೊಲ್ಲಾಪೂರ, ಹುಬ್ಬಳ್ಳಿ-ಪಂಡರಾಪೂರ, ಹುಬ್ಬಳ್ಳಿ-ಮಧುರೈ ಹಾಗೂ ಗದಗದಿಂದ ಬೆಂಗಳೂರಿಗೆ ಇಂಟರ್​ಸಿಟಿ ಹೊಸ ರೈಲು ಸಂಚಾರ ಆರಂಭಿಸಬೇಕು ಎಂದು ಜಿಲ್ಲೆಯ ಜನರು ಬೇಡಿಕೆ ಇಟ್ಟಿದ್ದಾರೆ.

ಗದಗ-ಮುಂಬೈ ರೈಲಿಗೆ ಟಿಕೆಟ್ ಕಾಯ್ದಿರಿಸುವ ಅವಕಾಶ ಸದ್ಯಕ್ಕೆ ಶೇ. 10ರಷ್ಟು ಮಾತ್ರ ಇದೆ. ಅದನ್ನು ಶೇ. 30ಕ್ಕೆ ಹೆಚ್ಚಿಸಬೇಕು ಎಂದು ಸ್ಥಳೀಯ ವರ್ತಕರು ಮತ್ತು ವ್ಯಾಪಾರಸ್ಥರ ಒತ್ತಾಯವಾಗಿದೆ.

ರೈಲ್ವೆ ಮುಂಗಡ ಪತ್ರ 2021-2022ರಲ್ಲಿ ಗದಗ ರೈಲ್ವೆ ನಿಲ್ದಾಣದಲ್ಲಿ ಸುಸಜ್ಜಿತ ಗೂಡ್ಸ್​ಶೆಡ್ ನಿರ್ವಣಕ್ಕೆ ಮಂಜೂರಾತಿ ನೀಡಬೇಕು. ಹೆಚ್ಚು ರೈಲುಗಳು ಗದಗ ಮೂಲಕ ಸಂಚರಿಸಲು ಕ್ರಮಕೈಗೊಳ್ಳಬೇಕು. ಈ ಭಾಗದ ಜನರ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಪರಿಗಣಿಸಬೇಕು. | ಆನಂದ ಪೋತ್ನಿಸ್ ಅಧ್ಯಕ್ಷ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಗದಗ, ಜೆ.ಕೆ.ಆದಪ್ಪಗೌಡ್ರ, ಚೇರ್ಮನ್, ರೈಲ್ವೆ ಉಪ ಸಮಿತಿ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ

ಕೈಗಾರಿಕೆಗಳಿಂದ ಜಿಲ್ಲೆ ವಂಚಿತ: ಜಿಲ್ಲೆಯಲ್ಲಿ ಅನೇಕ ಸಂಪನ್ಮೂಲಗಳಿದ್ದರೂ ಇಲ್ಲಿಯವರೆಗೆ ಒಂದೇ ಒಂದು ಕೈಗಾರಿಕೆ ಸ್ಥಾಪಿಸಲು ಸಾಧ್ಯವಾಗಿಲ್ಲ. ಪ್ರತಿ ವರ್ಷದ ಬಜೆಟ್ ಸಂದರ್ಭದಲ್ಲಿ ಈ ಕುರಿತು ಚರ್ಚೆಗಳು ನಡೆಯುತ್ತಿದೆಯಾದರೂ ಗಟ್ಟಿಯಾಗಿ ಯಾರೂ ಧ್ವನಿ ಎತ್ತದಿರುವುದರಿಂದ ಜಿಲ್ಲೆಯು ಕೈಗಾರಿಕೆಗಳಿಂದ ವಂಚಿತವಾಗಿದೆ. ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಗದಗ ಜಿಲ್ಲೆಯಲ್ಲಿ ಕೃಷಿ ಆಧಾರಿತ ಕೈಗಾರಿಕೆ ಸ್ಥಾಪಿಸಿದರೆ ರೈತರಿಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಕಡಲೆ, ಹೆಸರು, ಗೋವಿನಜೋಳ, ಉಳ್ಳಾಗಡ್ಡಿ, ಮೆಣಸಿನಕಾಯಿ ಅಪಾರ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುವುದಿಲ್ಲ. ಇದರಿಂದ ರೈತರು ತೊಂದರೆ ಅನುಭವಿಸುತ್ತಾರೆ. ಇಲ್ಲಿ ಬೆಳೆದ ಉತ್ಪನ್ನವನ್ನು ವರ್ತಕರು ಖರೀದಿಸಿ ಬೇರೆ ರಾಜ್ಯದ ದೊಡ್ಡ ಮಾರಾಟಗಾರರಿಗೆ ಮಾರುತ್ತಾರೆ. ಅವರು ನಮ್ಮ ಉತ್ಪನ್ನವನ್ನು ಸಂಸ್ಕರಿಸಿ ಭಾರಿ ಮೊತ್ತಕ್ಕೆ ಮಾರಾಟ ಮಾಡಿ ಲಾಭ ಗಳಿಸುತ್ತಾರೆ. ಹೀಗಾಗಿ ಸಂಸ್ಕರಣಾ ಘಟಕ ಸ್ಥಾಪಿಸಿದರೆ ರೈತರು, ವ್ಯಾಪಾರಸ್ಥರಿಗೆ ಅನುಕೂಲವಾಗಲಿದೆ ಎಂದು ವರ್ತಕರು ಒತ್ತಾಯಿಸುತ್ತಿದ್ದಾರೆ.

ಕಾಮಗಾರಿ ಬೇಗ ಪೂರ್ಣಗೊಳಿಸಿ: ಹೊಂಬಳ-ಬಿಂಕದಕಟ್ಟಿ ನಡುವೆ ನಿರ್ವಣವಾಗುತ್ತಿರುವ ರೈಲ್ವೆ ಬೈಪಾಸ್ ಲೈನ್ ಕಾಮಗಾರಿ, ಗದಗ ನಗರದ ಹೊಂಬಳ ನಾಕಾದಲ್ಲಿ ನಿರ್ವಣವಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ಬೇಗ ಪೂರ್ಣಗೊಳಿಸಬೇಕು. ಬೆಟಗೇರಿ ಭಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಟಿಕೆಟ್ ಕೌಂಟರ್ ಆರಂಭಿಸಬೇಕು. ಗದಗ ನಗರದ ರೈಲು ನಿಲ್ದಾಣದಲ್ಲಿರುವ ಪ್ಲಾಟ್​ಫಾರಂಗಳನ್ನು ಹೊರತುಪಡಿಸಿ ಇನ್ನೂ ಮೂರು ಪ್ಲಾಟ್​ಫಾರಂಗಳನ್ನು ನಿರ್ವಿುಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಅಯವ್ಯಯದ ಬಗ್ಗೆ ತುಂಬಾ ಆಶಾಭಾವನೆ ಇಟ್ಟುಕೊಂಡಿದ್ದೇವೆ. ಮುಖ್ಯವಾಗಿ ಸಣ್ಣ ಕೈಗಾರಿಕೆಗಳಿಗೆ ಘೊಷಿಸಿರುವ ಸೌಲಭ್ಯವನ್ನು ಕಾರ್ಯರೂಪಕ್ಕೆ ತರಬೇಕು. ಕೋವಿಡ್​ನಿಂದ ಬಿದ್ದಿರುವ ಹೊಡೆತದಿಂದ ಮೇಲೆ ಬರಲು ಉದ್ಯಮಗಳಿಗೆ ಅನುಕೂಲ ಕಲ್ಪಿಸಬೇಕು. | ವಿಜಯಕುಮಾರ ಗಡ್ಡಿ ಉದ್ಯಮಿ, ಗದಗ

ಈ ಭಾಗದ ಬಹುದಿನದ ಬೇಡಿಕೆಯಾದ ಮುಂಡರಗಿ ಮಾರ್ಗವಾಗಿ ಗದಗ- ಹರಪನಹಳ್ಳಿ ರೈಲು ಕಾರ್ಯ ಕೈಗೊಳ್ಳುವುದು. ಉದ್ಯಮ ಕ್ಷೇತ್ರಕ್ಕೆ ಉತ್ತೇಜನ ನೀಡುವಂತದ್ದು ಹಾಗೂ ಶಿಕ್ಷಣ, ರೈತರ, ಕಾರ್ವಿುಕರ ಪರವಾದ ಬಜೆಟ್ ಮಾಡುವಂತ ನಿರೀಕ್ಷೆಯನ್ನು ಹೊಂದಿದ್ದೇವೆ. ಪವನ ಚೋಪ್ರಾ ಮುಂಡರಗಿ ಎಪಿಎಂಸಿ ವರ್ತಕ

ರೈತರ, ಕಾರ್ವಿುಕರ, ಬಡವರ ಹಾಗೂ ಮಧ್ಯಮ ವರ್ಗದವರಿಗೆ ಪ್ರಮುಖವಾಗಿ ಅನುಕೂಲವಾಗುವಂತ ಬಜೆಟ್ ಮಂಡಿಸುವ ವಿಶ್ವಾಸವಿದೆ. ಹಾಗೆಯೆ, ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಜಾರಿ ತರುವ ವಿಶ್ವಾಸವಿದೆ. | ಹೇಮಗಿರೀಶ ಹಾವಿನಾಳ ಬಿಜೆಪಿ ಮುಂಡರಗಿ ಮಂಡಳ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net