ಜಿಲ್ಲೆಯ ಗಡಿ ಮುಟ್ಟಲಿದೆ ಮೆಟ್ರೋ, ಬಳ್ಳಾರಿ ರಸ್ತೆಯಲ್ಲಿ ಕಾಮಗಾರಿ ಆರಂಭ, ವಿಮಾನ ನಿಲ್ದಾಣಕ್ಕೆ ಸಂಪರ್ಕ

namma-metro
Published on

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿಗೆ ಹೈೈ ಸ್ಪರ್ಶ ನೀಡಿದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆ ಕಾರ್ಯರೂಪಕ್ಕೆ ಬರುತ್ತಿದ್ದು ಜಿಲ್ಲೆಯ ಹಿರಿಮೆಗೆ ಮತ್ತೊಂದು ಗರಿ ಬಂದಂತಾಗಿದೆ.

ಬೆಂಗಳೂರು ಮೆಟ್ರೋ ಕಾರ್ಪೊರೇಷನ್‌ನಿಂದ ಈ ಸಂಬಂಧ ಪ್ರಾಥಮಿಕ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ. 2024ರ ಹೊತ್ತಿಗೆ ಮೆಟ್ರೋ ರೈಲು ಜಿಲ್ಲೆಯನ್ನು ತಲುಪುವ ನಿರೀಕ್ಷೆ ಇದೆ.

ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ (ಬಳ್ಳಾರಿ ರಸ್ತೆ) ಹಲವು ಸ್ಥಳಗಳಲ್ಲಿ ಬ್ಯಾರಿಕೇಡ್ ನಿರ್ಮಿಸಿ, ಮಣ್ಣಿನ ಪರೀಕ್ಷೆ ಆರಂಭಿಸಲಾಗಿದೆ. ಕಾಮಗಾರಿ ಸಂಬಂಧ ಭಾರಿ ಯಂತ್ರಗಳು ಬಳ್ಳಾರಿ ರಸ್ತೆಯತ್ತ ಮುಖಮಾಡುತ್ತಿವೆ. ಈ ಭಾಗದಲ್ಲಿ ವಾಹನದಟ್ಟಣೆ ನಿಯಂತ್ರಿಸಲು ಏರ್‌ಪೋರ್ಟ್ ಸರ್ವಿಸ್ ರಸ್ತೆಗಳನ್ನು ಬಳಸಿಕೊಳ್ಳಲು ಚಿಂತನೆ ನಡೆದಿದೆ. ನಗರದಿಂದ ಏರ್‌ಪೋರ್ಟ್ ತಲುಪುವ ಮಾರ್ಗ ಮಧ್ಯೆ ಮೆಟ್ರೋ ನಿಲ್ದಾಣ ಸ್ಥಾಪಿಸಲು ಜಾಗ ಗುರುತು ಮಾಡಲಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

38 ಕಿ.ಮೀ ಗುರಿ: ನಗರದ ವಿವಿಧೆಡೆಯಿಂದ ಸಂಪರ್ಕ ಪಡೆಯುವ ಸರಾಸರಿ 38 ಕಿ.ಮೀ ವ್ಯಾಪ್ತಿಯನ್ನು ಯೋಜನೆ ಹೊಂದಿದ್ದು, ನಾಗವಾರ, ಹೆಬ್ಬಾಳ ಮಾರ್ಗವಾಗಿ ರೈಲು ಸಂಚರಿಸಲಿದೆ. ಇದಕ್ಕಾಗಿ 2.21 ಲಕ್ಷ ಚದರ ಮೀಟರ್ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಯೋಜನಾ ವೆಚ್ಚ 2,200 ಕೋಟಿ ರೂ. ಆಗಿದೆ.

ಹೊಸಕೋಟೆವರೆಗೆ ವಿಸ್ತರಣೆ ಸಾಧ್ಯತೆ: ದೇವನಹಳ್ಳಿ ತಾಲೂಕು ಪ್ರವೇಶಿಸುವ ಮೆಟ್ರೋ ರೈಲು ಸೇವೆಯನ್ನು ನಗರದಿಂದ ಹೊಸಕೋಟೆವರೆಗೆ ವಿಸ್ತರಿಸಬೇಕು ಎಂಬ ಕೂಗು ಬಲವಾಗತೊಡಗಿದೆ. ವಿಧಾನಸಭೆ ಮರುಚುನಾವಣೆ ಪ್ರಚಾರದಲ್ಲಿ ಎಂಟಿಬಿ ನಾಗರಾಜ್ ಒತ್ತಾಯದಿಂದ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಹೊಸಕೋಟೆಗೆ ಮೆಟ್ರೋ ಸೇವೆ ವಿಸ್ತರಿಸುವ ಭರವಸೆ ನೀಡಿದ್ದರು. ಇತ್ತೀಚೆಗೆ ನಾಯಂಡಹಳ್ಳಿಯಲ್ಲಿ ಮೆಟ್ರೋ ರೈಲಿನ ವಿಸ್ತರಿತ ಮಾರ್ಗದ ಉದ್ಘಾಟನೆ ವೇಳೆ ಕೇಂದ್ರ ಸಚಿವರಿಗೆ ಸಚಿವ ಎಂಟಿಬಿ ನಾಗರಾಜ್ ಮನವಿ ಕೊಟ್ಟಿದ್ದರು. ಇದಕ್ಕೆ ಕೇಂದ್ರ ಸಚಿವರೂ ಸ್ಪಂದಿಸಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net