

ವಿರಾಜಪೇಟೆ: ಕೊಡಗು ಕ್ರೀಡಾ ಜಿಲ್ಲೆಯಾಗಿದ್ದು, ಹಾಕಿ ಜತೆಗೆ ಇತರ ಕ್ರೀಡೆಯಲ್ಲೂ ಪ್ರತಿಭೆಗಳು ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಪ್ರತಿಭೆಗಳಿಗೆ ಅವಕಾಶ ನೀಡಲು ಒಳಾಂಗಣ ಕ್ರೀಡಾಂಗಣ ಅನೂಕೂಲವಾಗಲಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.
ವಿರಾಜಪೇಟೆ ಜೂನಿಯರ್ ಕಾಲೇಜು ಬಳಿ 6 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಒಳಾಂಗಣ ಕ್ರೀಡಾಂಗಣವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, 2012ರಲ್ಲಿ ನಮ್ಮ ಸರ್ಕಾರ ಇದ್ದಾಗ ಒಳಾಂಗಣ ಕ್ರೀಡಾಂಗಣಕ್ಕೆ ನಾಲ್ಕು ಕೋಟಿ, ಪೊನ್ನಂಪೇಟೆ ಟರ್ಫ್ ಮೈದಾನಕ್ಕೆ 5 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ನೀಡಲಾಗಿತ್ತು. ತಾಂತ್ರಿಕ ತೊಂದರೆಗಳಿಂದ ಕ್ರೀಡಾಂಗಣ ಕೆಲಸ ತಡವಾಯಿತು. ಕ್ರೀಡಾಂಗಣದ ತಡೆಗೋಡೆ, ನೆಲ ಹಾಸುಗಳಿಗೆ ಮಳೆ ಹಾನಿ ಪರಿಹಾರದಲ್ಲಿ 91 ಲಕ್ಷ ರೂ. ನೀಡಲಾಗಿದೆ. ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಕೋರ್ಟ್ ಇದ್ದು , ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಬೇಕು. ಇತರರಿಗೆ ಸೂಕ್ತ ದರ ನಿಗದಿ ಮಾಡಿ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿ ಮಾಡಿ ನಿರ್ವಹಣೆಗೆ ಕ್ರಮ ವಹಿಸಲಾಗುತ್ತದೆ. ಅಲ್ಲದೆ ಈ ಸಮಿತಿಯಲ್ಲಿ ಕ್ರೀಡಾ ಪ್ರತಿನಿಧಿಯೂ ಇರಬೇಕು ಎಂದು ಹೇಳಿದರು.
ವಿರಾಜಪೇಟೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಕಿ ಸಂಸ್ಥೆ ಅಧ್ಯಕ್ಷ ಡಾ.ಮುಕ್ಕಾಟೀರ ಕಾರ್ಯಪ್ಪ ಮಾತನಾಡಿ, ಕ್ರೀಡಾಂಗಣವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು. ಬೇಸಿಗೆಯಲ್ಲಿ ನಮ್ಮ ಸಂಸ್ಥೆಯ ಮೂಲಕ ಹಾಕಿ ತರಬೇತಿ ನೀಡುತ್ತಿದ್ದೇವೆ. ಶಾಲಾ ಮಕ್ಕಳಿಗೆ ಇಲ್ಲಿ ಉತ್ತಮ ಅವಕಾಶವಿದೆ ಎಂದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ತಾತಂಡ ಜ್ಯೋತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯ, ಪುರಸಭೆ ಮುಖ್ಯಧಿಕಾರಿ ಚಂದ್ರಕುಮಾರ ಮಾತನಾಡಿದರು. ಜಿ.ಪಂ ಮಾಜಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಯಶೋದಾ, ಪುರಸಭೆ ಸದಸ್ಯೆ ಆಶಾ ಸುಬ್ಬಯ್ಯ ಮತ್ತಿತರರು ಇದ್ದರು.