ಜಿಲ್ಲೆಯ ಎಲ್ಲೆಡೆ ಸಂಭ್ರಮದ ಶ್ರೀರಾಮ ನವಮಿ : ಭಕ್ತರಿಂದ ತುಂಬಿ ತುಳುಕಿದ ದೇವಾಲಯಗಳು, ಮಜ್ಜಿಗೆ, ಪಾನಕ, ಕೋಸಂಬರಿ ವಿತರಣೆ

1
Published on

ರಾಮನಗರ: ಮರ್ಯಾದ ಪುರುಷ ಶ್ರೀರಾಮನ ಜನ್ಮದಿನವಾದ ಶ್ರೀರಾಮ ನವಮಿಯನ್ನು ಜಿಲ್ಲೆಯಲ್ಲಿ ಸಂಭ್ರಮ ಮತ್ತು ಶ್ರದ್ಧಾ ಭಕ್ತಿಯಿಂದ ಭಾನುವಾರ ಆಚರಣೆ ಮಾಡಲಾಯಿತು.

ಜಿಲ್ಲೆಯ ರಾಮ ಹಾಗೂ ಹನುಮ ದೇವಾಲಯಗಳಲ್ಲಿ ಭಾನುವಾರ ಬೆಳಗ್ಗೆ ವಿಶೇಷ ಪೂಜಾ ಕೆಂಕರ್ಯಗಳು ನಡೆದವು. ಬ್ರಾಹ್ಮಿ ಮುಹೂರ್ತದ ವೇಳೆಗೆ ದೇವಾಲಯಗಳಲ್ಲಿ ಪೂಜಾ ಕಾರ್ಯಗಳಿಗೆ ಚಾಲನೆ ನೀಡಲಾಯಿತು. ಪಂಚಾಮತ ಅಭಿಷೇಕದ ನಂತರ ಅಲಂಕಾರ ಮಾಡಿ, ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.

ಜನ ಜಂಗುಳಿ: ಕರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದಲೂ ರದ್ದಾಗಿದ್ದ ರಾಮನವಮಿ ಈ ಬಾರಿ ಅದ್ದೂರಿತನ ಪಡೆದುಕೊಂಡಿತ್ತು. ಜನರೂ ಅತಿ ಉತ್ಸಾಹದಿಂದಲೇ ಪಾಲ್ಗೊಳ್ಳುವ ಮೂಲಕ ಎಲ್ಲ ಆಂಜನೇಯ ಮತ್ತು ರಾಮನ ದೇವಾಲಯಗಳಲ್ಲಿ ಜನಜಂಗುಳಿ ತುಂಬಿತ್ತು. ಜನರು ಹೆಚ್ಚಾದ ಕಾರಣದಿಂದಾಗಿ ಎಲ್ಲ ದೇವಾಲಯಗಳಲ್ಲಿ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದ ದೃಶ್ಯಗಳು ಕಂಡು ಬಂದವು.

ದೇವಾಲಯಗಳಂತೆ ಮನೆಯಲ್ಲಿಯೂ ರಾಮನವಮಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಪಾನಕ ಮಜ್ಜಿಗೆ ಹಾಗೂ ಕೋಸಂಬರಿ ಮಾಡಿ, ದೇವರಿಗೆ ನೆವೆದ್ಯ ಸಮರ್ಪಣೆ ಮಾಡಲಾಯಿತು. ರಾಮಜಪ ಸೇರಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ, ಅದ್ದೂರಿಯಾಗಿಯೇ ರಾಮನವಮಿ ಆಚರಣೆ ಮಾಡಲಾಗಿದೆ. ನಗರದ ಪ್ರಸಿದ್ಧ ರಾಮದೇವರ ಬೆಟ್ಟದಲ್ಲಿ ಪಟ್ಟಾಭಿಸೀತಾರಾಮನಿಗೆ ವಿಶೇಷ ಅಲಂಕಾರ ಮಾಡಲಾಯಿತು. ದೇವಾಲಯಕ್ಕೆ ಆಗಮಿಸಿದ್ದ ಭಕ್ತರಿಗೆ ಮಧ್ಯಾಹ್ನದ ಹೋಳಿಗೆ ಊಟ ಬಡಿಸಲಾಯಿತು.

ದೇವಾಲಯ ಆವರಣ, ಇತರ ಕಡೆಗಳಲ್ಲಿ ರಾಮ ಜಪ ಹಾಗೂ ಭಜನೆ ಮಾಡಲಾಗಿದೆ. ಕೆಲವು ಮಹಿಳೆಯರು ದೇವಾಲಯದಲ್ಲಿ ಮಂತ್ರಪಠಣ ಮಾಡುವ ಮೂಲಕ ಮರ್ಯಾದಾ ಪುರುಷೋತ್ತಮನಿಗೆ ಭಕ್ತಿ ಸಮರ್ಪಿಸಿದ್ದಾರೆ. ದಿನವಿಡೀ ಭಜನೆ ಹಾಗೂ ದೇವರ ನಾಮಸ್ಮರಣೆ ನಡೆಯಿತು.

ರಾಮನವಮಿ ಪ್ರಯುಕ್ತ ಅಲ್ಲಲ್ಲಿ ಅರವಂಟಿಕೆ ಸ್ಥಾಪನೆ ಮಾಡಿ, ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಕೋಸಂಬರಿ, ಮಜ್ಜಿಗೆ ಹಾಗೂ ಪಾನಕ ವಿತರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net