

ಚಾಮರಾಜನಗರ: ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಲು 1,100 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆ ಸಿದ್ಧವಾಗುತ್ತಿದ್ದು, ಹಂತ ಹಂತವಾಗಿ ಕೆರೆಗಳನ್ನು ತುಂಬಿಸುವ ಬೃಹತ್ ಯೋಜನೆಯನ್ನು ಸರ್ಕಾರ ಮಂಜೂರು ಮಾಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಚಾಮರಾಜನಗರ ಮತ್ತು ಹನೂರು ತಾಲೂಕಿನ ವಿವಿಧ ಇಲಾಖೆ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನೀರಾವರಿಯ 5 ಯೋಜನೆಗಳಿಗೆ ಮಂಜೂರಾತಿ ಕೊಟ್ಟು 694 ಕೋಟಿ ರೂ. ಖರ್ಚು ಮಾಡಿ 63 ಕೆರೆಗಳನ್ನು 2 ಯೋಜನೆಗಳಲ್ಲಿ ಪೂರ್ಣಗೊಳಿಸಿದ್ದೇವೆ. ಉಳಿದ 3 ಯೋಜನೆಗಳಲ್ಲಿ 121 ಕೆರೆಗಳನ್ನು ತುಂಬಿಸಲಿದ್ದೇವೆ. ಚಾಮರಾಜನಗರ, ಗುಂಡ್ಲುಪೇಟೆ ಭಾಗದ ಕೆರೆಗಳನ್ನು ತುಂಬಿಸುವ 754 ಕೋಟಿ ರೂ.ಗಳ ಯೋಜನೆ ನಮ್ಮ ಮುಂದೆ ಇದೆ. ಅದಕ್ಕೆ ಅನುಮೋದನೆ ನೀಡಲು ಬೋರ್ಡ್ ಮೀಟಿಂಗ್‌ಗೆ ಕಳುಹಿಸಿದ್ದೇವೆ. ಜನಾಪೇಕ್ಷೆಯಂತೆ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ನಾನು ನೀರಾವರಿ ಸಚಿವನಾಗಿದ್ದಾಗ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಾರಂಭವಾಯಿತು. ಆಗ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದರು. ಈ ಭಾಗದಲ್ಲಿ ಬರಗಾಲ ಕಾಡುತ್ತಿದೆ. ಬಡಜನರಿರುವ ಹಿಂದುಳಿದ ತಾಲೂಕುಗಳಿವೆ. ಕೃಷಿಯೇ ಮುಖ್ಯಉದ್ಯೋಗ ಎಂದು ಸುತ್ತೂರು ಶ್ರೀಗಳು ತಿಳಿಸಿದ್ದರು. ಹೀಗಾಗಿ ಕೆರೆ ತುಂಬಿಸುವ ಯೋಜನೆ ಮಾಡಬೇಕೆಂದು ಅವರು ಕೇಳಿಕೊಂಡಾಗ ಕೂಡಲೇ ಯೋಜನೆಯನ್ನು ಕೈಗೆತ್ತುಕೊಂಡು ಮೊದಲ ಹಂತವನ್ನು ಪೂರ್ಣಗೊಳಿಸಿದೆವು. ಎರಡನೇ ಹಂತವೂ ಸಂಪೂರ್ಣ ಮುಗಿಯುತ್ತಿದೆ. ಇದರೊಂದಿಗೆ ಉಳಿದ ಎಲ್ಲ ಕೆರೆಗಳನ್ನು ತುಂಬಿಸುತ್ತೇನೆ ಎಂದು ಪುನರುಚ್ಚರಿಸಿದರು.
ಜಿಲ್ಲೆಯನ್ನು ಕೈಗಾರಿಕೆಯಲ್ಲಿ ಪ್ರಸಿದ್ಧಿಗೊಳಿಸಲು ಸಾಧ್ಯವಿದೆ. ಇದಕ್ಕಾಗಿ ಉತ್ತರ ಕರ್ನಾಟಕದ ಮಾದರಿಯಲ್ಲಿ ಇಂಡಸ್ಟ್ರಿಯಲ್ ಟೌನ್‌ಶಿಪ್ ಮಾಡಿ 1 ಸಾವಿರ ಎಕರೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸ್ಥಾಪನೆ ಮಾಡುತ್ತೇವೆ. ಯುವಕರಿಗೆ ಉದ್ಯೋಗ ನೀಡಬೇಕೆಂಬ ಕಾರಣದಿಂದ ಈ ಯೋಜನೆಯನ್ನು ಜಿಲ್ಲೆಗೆ ಕೊಡುಗೆ ನೀಡುತ್ತೇವೆ ಎಂದರು.
ಗಡಿ ಜಿಲ್ಲೆಯಾಗಿರುವ ಚಾ.ನಗರ ಸಮಗ್ರ ಹಾಗೂ ಯೋಜನಾಬದ್ಧವಾಗಿ ಅಭಿವೃದ್ಧಿಯಾಗಲು ಸಕಾಲ ಕೂಡಿಬಂದಿದೆ. ಜಿಲ್ಲೆಯಾಗಿ 25 ವರ್ಷಗಳ ನಂತರ ಮೂಲಸೌಕರ್ಯಗಳನ್ನು ನಾವಿಂದು ಕಾಣುತ್ತಿದ್ದೇವೆ. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರನ್ನು ನೆನಪು ಮಾಡಿಕೊಳ್ಳಬೇಕು. ನಮ್ಮ ಸರ್ಕಾರ ಬಂದ ಮೇಲೆ ಆಶೋತ್ತರ ತಾಲೂಕುಗಳ ಅಭಿವೃದ್ಧಿಗೆ ಮುಂದಾಗಿದೆ.
ಚಾಮರಾಜನಗರವನ್ನು ಆಶೋತ್ತರ ಜಿಲ್ಲೆ ಎಂದು ಪರಿಗಣಿಸಿ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಪೌಷ್ಟಿಕ ಆಹಾರ ಮತ್ತು ಸಮಗ್ರ ಅಭಿವೃದ್ಧಿಯ ಗುರಿ ಇಟ್ಟುಕೊಂಡಿದೆ ಎಂದು ತಿಳಿಸಿದರು.
ವಸತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೌಢ್ಯ ತೊಡೆದು ಹಾಕಿ ಎರಡು ಬಾರಿ ಜಿಲ್ಲೆಗೆ ಭೇಟಿ ನೀಡಿರುವುದಕ್ಕೆ ಧನ್ಯವಾದ ತಿಳಿಸಿದರು.
ಕೋವಿಡ್, ಪ್ರಾಕೃತಿಕ ವಿಕೋಪದಿಂದ ಉಂಟಾದ ನಷ್ಟವನ್ನು ಮತ್ತೆ ಎದುರಾಗದಂತೆ ನೋಡಿಕೊಳ್ಳಬೇಕಿದೆ. ಮುಗ್ಧರು, ಸ್ವಾಭಿಮಾನಿಗಳು, ಸಂಸ್ಕಾರಕ್ಕೆ ಹೆಸರಾಗಿರುವ ಚಾಮರಾಜನಗರ ಬೇರೆ ಜಿಲ್ಲೆಗಳಂತೆ ಅಭಿವೃದ್ಧಿಯಾಗಬೇಕು. 1,100 ಕೋಟಿ ರೂ.ಗಳ ಯೋಜನೆಗೆ ಸಿಎಂ ಚಾಲನೆ ನೀಡಿದ್ದಾರೆ. ಜಿಲ್ಲೆಯ ಜನತೆಯ ಜೀವನ ಮಟ್ಟ ಸುಧಾರಣೆಗೆ ಎಲ್ಲ ಕೆರೆಗಳಿಗೂ ನೀರು ತುಂಬಿಸುವ ಯೋಜನೆಗೆ ಸಿಎಂ ಡಿಪಿಆರ್ ಮಾಡಿಸಿದ್ದಾರೆ ಎಂದು ಹೇಳಿದರು.
ಇದೇ ವೇಳೆ ‘ಸಾಧನ ಪರ್ವ’ ಕಿರು ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು. ವಿವಿಧ ಇಲಾಖೆಗಳ ಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಿದರು. ಕಂದಾಯ ಸಚಿವ ಆರ್.ಅಶೋಕ್, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ, ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ನಿಜಗುಣರಾಜು, ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ ನಟರಾಜು, ಸದಸ್ಯ ಚಂದ್ರಶೇಖರ್, ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ.ಮಲ್ಲಿಕಾರ್ಜುನಪ್ಪ, ಬಿಜೆಪಿ ರೈತ ಮುಖಂಡ ಅಮ್ಮನಪುರ ಮಲ್ಲೇಶ್, ಜಿಲ್ಲಾಧ್ಯಕ್ಷ ಆರ್.ಸುಂದರ್, ಉಪಾಧ್ಯಕ್ಷ ವೃಷಭೇಂದ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್, ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್, ಜಿಲ್ಲಾಧಿಕಾರಿ ಡಿ.ಎಸ್.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್ ಇತರರು ಭಾಗವಹಿಸಿದ್ದರು.