

ಹಾಸನ: ಇದು ನನ್ನ ಚುನಾವಣೆ ಅಲ್ಲ. ದೇಶದ ಚುನಾವಣೆ. ನಾನು ಸಂಸದನಾಗಿ ನನ್ನ ಅಧಿಕಾರವಾಧಿಯಲ್ಲಿ 12,500 ಕೋಟಿ ಅನುದಾನವನ್ನು ಜಿಲ್ಲೆಗೆ ತಂದು ಕೆಲಸ ಮಾಡಿದ್ದೇನೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಬುಧವಾರ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಈ ಐದು ವರ್ಷಗಲ ಅವಧಿಯಲ್ಲಿ ನನ್ನಿಂದ ಏನಾದರೂ ತಪ್ಪುಗಳಾಗಿದ್ದರೆ ದಯವಿಟ್ಟು ಕ್ಷಮಿಸಿ. ನಾನು ನಿಮ್ಮ ಮನೆಯ ಮಗ. ನೀವು ನನ್ನನ್ನು ತಿದ್ದಬೇಕು. ಈಗಾಗಲೇ ಕಳೆದ ಐದು ವರ್ಷದಲ್ಲಿ ಸಾಕಷ್ಟು ಮಾರ್ಗದರ್ಶನದಿಂದ ನಾನು ಬದಲಾಗಿದ್ದೇನೆ. ಮುಂದೆಯೂ ಕೂಡ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಮಾಜಿ ಸಚಿವ ಎಚ್.ಡಿ. ರೇವಣ್ಣ ಮಾತನಾಡಿ, ಕುಮಾರಸ್ವಾಮಿ ಅವರ ಅಧಿಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಆಗಿರುವಂತಹ ಅಭಿವೃದ್ಧಿ ಕೆಲಸಗಳನ್ನು ಯಾರು ಮರೆಯುವಂತಿಲ್ಲ. ಕುಡಿಯುವ ನೀರು, ರಸ್ತೆ, ಶಿಕ್ಷಣ ಸೇರಿದಂತೆ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗಳಿಗೆ ಹೆಚ್ಚು ಅನುದಾನ ಕೊಟ್ಟಿದ್ದಾರೆ. ಇದರಿಂದಾಗಿ ಜಿಲ್ಲೆಯಲ್ಲಿ ಅತೀ ಹೆಚ್ಚು ಕಾಲೇಜುಗಳನ್ನು ತೆರೆಯಲು ಅವಕಾಶವಾಯಿತು ಎಂದು ಹೇಳಿದರು.
ರಾಜ್ಯ ಸರ್ಕಾರ ಶಾಸಕರಿಗೆ ಸರಿಯಾದ ರೀತಿ ಅನುದಾನ ನೀಡುತ್ತಿಲ್ಲ. ನಮಗೆ ಬರುವಂತಹ ಎರಡು ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ರೈತರ ಸಮಸ್ಯೆ, ವಿದ್ಯುತ್ ಸಮಸ್ಯೆ ಹಾಗೂ ಟಿಸಿ ಇಲ್ಲದೆ ಸಾಕಷ್ಟು ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಬೇಕಾದ ಸರ್ಕಾರ ನಿರ್ಲಕ್ಷೃ ವಹಿಸಿದೆ ಎಂದು ದೂರಿದರು.
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಲೋಕಸಭಾ ಚುನಾವಣೆಗೆ ನಾವೆಲ್ಲರೂ ಸನ್ನದ್ಧರಾಗಬೇಕು. ನರೇಂದ್ರ ಮೋದಿ ಅವರು ದೇವೇಗೌಡರು ಮತ್ತು ಎಚ್.ಡಿ. ಕುಮಾರಸ್ವಾಮಿ ಅವರ ಮೇಲೆ ಇಟ್ಟಿರುವ ಗೌರವವನ್ನು ರಾಷ್ಟ್ರಮಟ್ಟದಲ್ಲಿ ಉಳಿಸಿಕೊಳ್ಳಬೇಕಾಗಿದೆ. ಆ ಹಿನ್ನೆಲೆಯಲ್ಲಿ ನಾವೆಲ್ಲರೂ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಕಿವಿ ಮಾತು ಹೇಳಿದರು.
ಜಿಲ್ಲೆಗೆ ದೇವೇಗೌಡರ ಕುಟುಂಬದ ಕೊಡುಗೆ ಏನೆಂಬುದು ಜನರಿಗೆ ಗೊತ್ತಿದೆ. ಆದರೆ ಎದುರಾಳಿ ಅಭ್ಯರ್ಥಿಯ ಕೊಡುಗೆ ಏನು? ಅವರ ಸಾಧನೆಗಳೇನು? ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಪ್ರಜ್ವಲ್ ರೇವಣ್ಣ ಅವರು ಸಂಸತ್ತಿನಲ್ಲಿ ಜಿಲ್ಲೆ ಮತ್ತು ರಾಜ್ಯದ ಪರವಾಗಿ ಧ್ವನಿ ಎತ್ತಿ ಮಾತನಾಡಿದ್ದಾರೆ. ಅಲ್ಲದೆ ಸಾಕಷ್ಟು ಅನುದಾನ ತರುವ ಮೂಲಕ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ಹೇಳಿದರು.
ಕುಮಾರಣ್ಣ ಸರ್ವ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅವರಿಗೆ ಅನಾರೋಗ್ಯದ ಸಮಸ್ಯೆಯಿಂದ ಶಸ್ತ್ರಚಿಕಿತ್ಸೆಗೆ ಹೋಗುತ್ತಿದ್ದಾರೆ. ಆ ಭಗವಂತ ಅವರಿಗೆ ಇನ್ನು ಹೆಚ್ಚು ಆಯಸ್ಸು ಮತ್ತು ಶಕ್ತಿ ನೀಡಲಿ ಬೇಗ ಅವರು ಗುಣಮುಖರಾಗಲಿ ವಾಪಸ್ ಬರಲಿ ಎಂದು ಬಾಲಕೃಷ್ಣ ಕಣ್ಣೀರು ಹಾಕಿದರು.
ಶಾಸಕ ಎಚ್.ಪಿ. ಸ್ವರೂಪ ಮಾತನಾಡಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣ ಅವರ ಗೆಲುವು ನಿಶ್ಚಿತ. ಮತ್ತೊಮ್ಮೆ ಹಾಸನದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ. ಜೆಡಿಎಸ್ ಪಕ್ಷದ ಕಾರ್ಯಕರ್ತರು ಈಗಿಂದಲೇ ಪ್ರಚಾರ ಆರಂಭಿಸಿ ಮನೆ ಮನೆಗೆ ದೇವೇಗೌಡರ ಕುಟುಂಬದ ಸಾಧನೆಯನ್ನು ತಿಳಿಸಬೇಕು. ಕುಮಾರಣ್ಣ ಅವರ ಅಧಿಕಾರದಲ್ಲಿ ನಡೆದಿರುವಂತಹ ಅಭಿವೃದ್ಧಿ ಕೆಲಸಗಳನ್ನು ತಿಳಿಸುವ ಮೂಲಕ 2 ಲಕ್ಷ ಮತಗಳ ಅಂತರದಲ್ಲಿ ಅವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಅರಕಲಗೂಡು ಕ್ಷೇತ್ರದ ಶಾಸಕ ಎ.ಮಂಜು ಮಾತನಾಡಿ, ಪ್ರಜ್ವಲ್ ರೇವಣ್ಣ ಅವರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮ ಮೇಲಿದೆ. ನನಗೆ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ದೇವೇಗೌಡರು ಮತ್ತು ಕುಮಾರಣ್ಣ ಕರೆದು ಟಿಕೆಟ್ ನೀಡಿದ್ದಾರೆ. ಆದರೆ ನಾನು ಅವರ ವಿರುದ್ಧವಾಗಿ ಹೋಗುವುದಿಲ್ಲ. ಆ ಪ್ರೀತಿಯನ್ನು ಉಳಿಸಿಕೊಳ್ಳಬೇಕಾದರೆ ನೀವು ಕೂಡ ನನ್ನನ್ನು ಪ್ರೀತಿಯಿಂದ ಕಾಣಬೇಕು ಎಂದು ರೇವಣ್ಣ ಕುಟುಂಬಕ್ಕೆ ಹೇಳಿದರು.
ಅರಸೀಕೆರೆ ಕ್ಷೇತ್ರದ ಮುಖಂಡ ಎನ್.ಆರ್. ಸಂತೋಷ್ ಮಾತನಾಡಿ, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅರಸೀಕೆರೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತವನ್ನು ಪ್ರಜ್ವಲ್ ರೇವಣ್ಣ ಅವರಿಗೆ ಕೊಡಿಸದಿದ್ದರೆ ನನ್ನನ್ನು ಸಂತೋಷ್ ಎಂದು ಕರೆಯಬೇಡಿ ಎಂದು ಪ್ರತಿಷ್ಞೆ ಮಾಡಿದರು.
ರಾಹುಕಾಲ, ತರಾತುರಿಯಲ್ಲಿ ಉದ್ಘಾಟನೆ:
ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಸಭೆಯನ್ನು 11 ಗಂಟೆಗೆ ಆಯೋಜಿಸಲಾಗಿತ್ತು. ಮಧ್ಯಾಹ್ನ 12 ಗಂಟೆ ಸಮೀಪಿಸುತ್ತಾ ಬಂದರೂ ಎಚ್.ಡಿ. ಕುಮಾರಸ್ವಾಮಿ ಬರಲಿಲ್ಲ. ಹೀಗಾಗಿ 12 ಗಂಟೆಯ ಒಳಗೆ ಕಾರ್ಯಕ್ರಮವನ್ನು ಎಚ್.ಡಿ. ಕುಮಾರಸ್ವಾಮಿ ಅನುಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು. ಇದಕ್ಕೆ ಕಾರಣ 12 ಗಂಟೆಯ ನಂತರ ರಾಹುಕಾಲ ಇರುವುದರಿಂದ ರೇವಣ್ಣ, ಕುಮಾರಸ್ವಾಮಿ ಬರುವ ಮೊದಲೇ ತರಾತುರಿಯಲ್ಲಿ ವೇದಿಕೆಯಲ್ಲಿದ್ದಂತಹ ಮುಖಂಡರ ಜತೆ ಕಾರ್ಯಕ್ರಮ ಉದ್ಘಾಟಿಸಿದರು.