ಜಿಲ್ಲೆಯ ಅಭಿವೃದ್ಧಿಗೆ ತ್ರಿಮೂರ್ತಿಗಳ ಸಂಕಲ್ಪ

3-klr-1
Published on

ಕೋಲಾರ: ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಮಗೆ ಸಿಕ್ಕಿರುವ ಅವಕಾಶವನ್ನು ಸದು ಪಯೋಗಪಡಿಸಿಕೊಳ್ಳುವುದಾಗಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ವೆಂಕಟರಾಜು ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯ ಜನರ ನಿರೀಕ್ಷೆ, ಅಗತ್ಯ ಸೌಕರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.

ನಾನು ಮೂಲತಃ ರಾಜಸ್ಥಾನದವನಾದರೂ ನನಗೆ ಕರ್ನಾಟಕದಲ್ಲಿ ಕೆಲಸ ಮಾಡುವ ಅದೃಷ್ಟ ಸಿಕ್ಕಿದೆ, ಕೊಪ್ಪಳದಲ್ಲಿ ಜಿಪಂ ಸಿಇಒ ಆಗಿದ್ದೆ, ಈಗ ಕೋಲಾರ ಡಿಸಿಯಾಗಿ ಬಂದಿದ್ದೇನೆ, ನನಗೂ ಮತ್ತು ’ಕ’ಗೂ ಬಹಳ ಅನ್ಯೂನ್ಯತೆ ಇದೆ, ಜತೆಗೆ ಕೋಲಾರದ ಹೆಸರು ಕೇಳಿದ ಕೂಡಲೇ ನೆನಪಾಗುವುದು ಕೆಎಎಸ್ ಎಂದರೆ ಕೋಲಾರ ಅಡ್ಮಿನಿಸ್ಟ್ರೇಷನ್ ಸರ್ವಿಸ್ ಅಂತ ಖ್ಯಾತಿ ಪಡೆದಿದೆ, ಇಲ್ಲಿನ ಅನೇಕರು ಕೆಎಎಸ್, ಐಎಎಸ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಕೀರ್ತಿ ತಂದುಕೊಟ್ಟಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಜಿಲ್ಲೆಯ ಅಭಿವೃದ್ಧಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಶ್ರಮಿಸುವ ಜತೆಗೆ ಜನರ ಸಹಕಾರ ದೊರೆತಲ್ಲಿ ಕೆಲಸಗಳು ಸುಲಲಿತವಾಗಿ ಸಾಗಲಿದೆ ಎಂದರು. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಿ.ದೇವರಾಜ್ ಮಾತನಾಡಿ, ಪೊಲೀಸರು ಠಾಣೆಗೆ ಬರುವ ಬಡವರು, ಶ್ರೀ ಸಾಮಾನ್ಯರನ್ನು ಗೌರವದಿಂದ ಕಾಣಬೇಕು, ಬಳಸುವ ದಂಡದಲ್ಲಿ ಅರ್ಧ ಭಾಗ ಬೆಣ್ಣೆಯಂತೆ ಮೃದುವಾಗಿರಬೇಕು, ಇನ್ನರ್ಧ ವಜ್ರದಂತೆ ಇದ್ದರೆ ಠಾಣೆಗೆ ಬಂದು ದರ್ಪ ತೋರುವ ಅಸಾಮಿಗಳಿಗೆ ಬುದ್ಧಿಕಲಿಸಲು ಅನುಕೂಲವಾಗುತ್ತದೆ, ಈ ವಿಚಾರವಾಗಿ ಈಗಾಗಲೆ ಜಿಲ್ಲೆಯ ಪೊಲೀಸ್ ಠಾಣೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲೆಯ ಋಣ ಮಣ್ಣಿನ ತೀರಿಸಲು ಬಂದಿರುವೆ, ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು. ಜಿಲ್ಲೆಯಲ್ಲಿರುವ ಸ್ವಯಂ ಘೋಷಿತ ಸಂಘಟನೆಗಳ ಅಧ್ಯಕ್ಷರು, ಸಂಚಾಲಕರು ಒಳ್ಳೆಯ ಕೆಲಸ ಮಾಡಿದರೆ ಸಹಕಾರ ನೀಡುತ್ತೇನೆ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವುದು, ಕಚೇರಿಗಳಿಗೆ ಬಂದು ಧಮ್ಕಿ ಹಾಕಿದರೆ ಅಂತಹವರನ್ನು ಮಟ್ಟ ಹಾಕುತ್ತೇನೆ, ಪತ್ರಿಕೋದ್ಯಮ ಪವಿತ್ರವಾದ ವೃತ್ತಿ, ಕೆಲವರು ಪ್ರೆಸ್ ಎಂದು ವಾಹನಗಳ ಮೇಲೆ ಅನಧಿಕೃತವಾಗಿ ಸ್ಟಿಕ್ಕರ್ ಅಂಟಿಸಿಕೊಂಡು ಅಪಚಾರ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕಾನೂನು ರೀತಿ ಕ್ರಮ ಕೈಗೊಳ್ಳುವೆ ಎಂದು ಎಚ್ಚರಿಸಿದರು.

ಜಿಪಂ ಸಿಇಒ ಉಕೇಶ್ ಕುಮಾರ್ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಡಿಸಿ, ಎಸ್ಪಿ ಅವರ ಜತೆಗೂಡಿ ಕೆಲಸ ಮಾಡುವೆ ಎಂದರು. ಸಂಘದ ಅಧ್ಯಕ್ಷ ವಿ.ಮುನಿರಾಜು, ರಾಜ್ಯ ಸಮಿತಿ ಸದಸ್ಯ ಬಿ.ವಿ.ಗೋಪಿನಾಥ್, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಸುರೇಶ್ ಕುಮಾರ್, ಉಪಾಧ್ಯಕ್ಷ ರಾಘವೇಂದ್ರರಾವ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net