

ಹಾಸನ: ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತಾರತಮ್ಯ ಮಾಡುತ್ತಿದೆ. ಆದರೆ ನಾನು ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಿದಿಲ್ಲ. ಫ್ಲೈಓರ್ ಕಾಮಗಾರಿಗೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಬಿಡುಗಡೆ ಮಾಡಿದರೆ ಶೀಘ್ರದಲ್ಲೇ ನಾಲ್ಕು ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಬಹುದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಒತ್ತಾಯಿಸಿದರು.
ಕಳೆದ 10 ವರ್ಷಗಳಿಂದ ನಗರದ ಎನ್.ಆರ್.ವೃತ್ತದಿಂದ ಜಿಲ್ಲಾ ನ್ಯಾಯಲದವರೆಗೆ ನಿರ್ಮಾಣವಾಗುತ್ತಿರುವ ಫ್ಲೈಓರ್ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಈಗಾಗಲೇ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 23 ಕೋಟಿರೂ. ಮೊತ್ತದ ಟೆಂಡರ್ ಪ್ರಕ್ರಿಯೆ ನಡೆಸುತ್ತಿದೆ. ಕೂಡಲೇ ರಾಜ್ಯ ಸರ್ಕಾರ ತನ್ನ ಪಾಲಿನ 25 ಕೋಟಿರೂ. ಬಿಡುಗಡೆ ಮಾಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಫ್ಲೈಓರ್ ಕಾಮಗಾರಿಗೆ ಒಟ್ಟು 98 ಕೋಟಿರೂ. ಅನುದಾನದಲ್ಲಿ ಕೈಗೆತ್ತಿಕೊಂಡ ಚತುಷ್ಪಥ ಮೇಲ್ಸೇತುವೆ ಕಾಮಗಾರಿಗೆ ರಾಜ್ಯ ಸರ್ಕಾರ ಪಾಲು 68 ಕೋಟಿರೂ. ಹಾಗು ಕೇಂದ್ರದ ಪಾಲು 38 ಕೋಟಿರೂ. ಎಂದು ನಿಗದಿಗೊಳಿಸಲಾಗಿತ್ತು. ಆದರೆ, ಈಗಿನ ಕಾಂಗ್ರೆಸ್ ಸರ್ಕಾರ ಬಾಕಿ ಇರುವ 25 ಕೋಟಿರೂ. ಅನುದಾನ ನೀಡದೆ ಜಿಲ್ಲೆಯನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭೂಸ್ವಾಧೀನಕಕ್ಕೆ 18 ಕೋಟಿರೂ. ಸೇರಿ ಕಾಮಗಾರಿಗಾಗಿ 25 ಕೋಟಿರೂ. ಒಟ್ಟು 43 ಕೋಟಿರೂ. ಬಿಡುಗಡೆಗೊಳಿಸಿದ್ದೆ. ಆದರೆ, ಈಗಿನ ರಾಜ್ಯಸರ್ಕಾರ ಬಾಕಿ ಇರುವ 25 ಕೋಟಿರೂ. ನೀಡದೆ ಇರುವುದರಿಂದ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಈ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದ ಗಮನ ಸೆಳೆದ ಪರಿಣಾಮ ಹೆಚ್ಚುವರಿಯಾಗಿ ಮೇಲ್ಸೇತುವೆ ಕಾಮಗಾರಿಗಾಗಿ 18 ಕೋಟಿರೂ. ಹಾಗು 5 ಕೋಟಿರೂ. ವೆಚ್ಚದಲ್ಲಿ ಅಂಡರ್ ಪಾಸ್ ಕಾಮಗಾರಿಗೆ ಹಣ ಬಿಡುಗಡೆಗೊಳಿಸಿ ಟೆಂಟರ್ ಕೂಡ ಕರೆಯಲಾಗಿದೆ ಎಂದು ತಿಳಿಸಿದರು.
ಫ್ಲೈಓರ್ ಕಾಮಗಾರಿಗೆ ರಾಜ್ಯ ತನ್ನ ಪಾಲಿನ ಹಣ ಬಿಡುಗಡೆ ಮಾಡಿದ್ದಾರೆ.ಕೇಂದ್ರದಿಂದಲೇ ಹಣ ತಂದು ಕೆಲಸ ಮುಗಿಸುವುದು ನಮಗೆ ಗೊತ್ತಿದೆ. ಕಾಮಗಾರಿ ನಡೆಯುತ್ತಿರುವ ಮಾರ್ಗದಲ್ಲಿ ಭೂಸ್ವಾಧೀನಕ್ಕೆ 18 ಕೋಟಿರೂ. ಪರಿಹಾರ ನೀಡಿದೆ. ಆದರೂ ಕೆಲವೊಂದು ಕಡೆಗಳಲ್ಲಿ ನಿವಾಸಿಗಳು, ವರ್ತರು ಭೂಒತ್ತುವರಿ ಮಾಡಿಕೊಂಡಿದ್ದಾರೆ. ಪರಿಹಾರ ಪಡೆದುಕೊಂಡು, ಪುನಃ ಒತ್ತುವರಿ ಮಾಡಿಕೊಂಡಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದ ಅವರು, ಕೂಡಲೇ ಈ ಬಗ್ಗೆ ಜಿಲ್ಲಾಧಿಕಾರಿ ಗಮನ ಹರಿಸಿ ಒತ್ತುವರಿ ತೆರವುಗೊಳಿಸಬೇಕು. ಜಿಲ್ಲಾಧಿಕಾರಿ ಕೇವಲ ರಸ್ತೆಯಲ್ಲಿ ಕಸ ಗುಡಿಸಿ ಫೋಟೋ ತೆಗೆಸಿಕೊಳ್ಳುವುದಲ್ಲ, ಒತ್ತುವರಿ ತೆರವುಗೊಳಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.
ಹಾಸನ-ಬೇಲೂರು ರೈಲ್ವೆ ಮಾರ್ಗ ನಿರ್ಮಾಣಕ್ಕೆ ಯೋಜನೆ ರೂಪಿಸಿ ಹಲವು ವರ್ಷಗಳು ಕಳೆದರೂ ಅಧಿಕಾರಿಗಳಿಗೆ ಇದುವರೆಗೂ ಭೂಸ್ವಾಧೀನ ಪಡಿಕೊಳ್ಳಲು ಸಾಧ್ಯವಾಗಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಆಸಕ್ತಿ ತೋರದೆ ಇರುವುದರಿಂದ ಅಧಿಕಾರಿಗಳು ಕೂಡ ನಿರ್ಲಕ್ಷೃ ಮನೋಭಾವ ತಾಳಿದ್ದಾರೆ ಎಂದು ಹೇಳಿದರು.
ನಗರದ ಕೆಐಎಡಿಬಿ ಪ್ರದೇಶದ ನಾಗತವಳ್ಳಿಯಲ್ಲಿ ಈ ಹಿಂದೆ ಪಾರ್ಕ್‌ಗೆ ಜಾಗ ಮೀಸಲಾಗಿಲ್ಲ ಎನ್ನುವುದಾದರೆ ರಾಜಕೀಯವನ್ನೇ ಬಿಟ್ಟು ಹೋಗುತ್ತೇನೆ. ಪಾರ್ಕ್‌ಗೆ ಮೀಸಲಾಗಿದ್ದ ಜಾಗವನ್ನು ಪುಷ್ಪಗಿರಿ ವೇರ್‌ಹೌಸ್‌ಗೆ ಮಂಜೂರು ಮಾಡಿಸುವುದರ ಹಿಂದೆ ಯಾರೆಲ್ಲ ಇದ್ದಾರೆ ಎಂಬುದರ ಬಗ್ಗೆ ಪೊಲೀಸರೇ ಹೇಳಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರೇ ತನಿಖೆ ನಡೆಸಿ ಸರ್ಕಾರಿ ಜಾಗವನ್ನು ಉಳಿಸುವ ಕೆಲಸ ಮಾಡಬೇಕು ಒತ್ತಾಯಿಸಿದರು.