

ಬೀದರ್: ಬೆಂಗಳೂರಿನ ಕಿರ್ಲೊಸ್ಕರ್ ಟೊಯೊಟಾ, ಟೊಯೊಟಾ ಎಂಜಿನ್, ಪುಣೆಯ ಜನರಲ್ ಎಲೆಕ್ಟ್ರಿಕ್ ಹಾಗೂ ಫ್ಲ್ಯಾಶ್ ವಿವನ್ ಕಂಪನಿಗಳ ಸಹಯೋಗದಲ್ಲಿ ಇಲ್ಲಿಯ ಸರ್ಕಾರಿ ಪಾಲಿಟೆಕ್ನಿಕ್‍ನ ಪ್ಲೆಸ್‍ಮೆಂಟ್ ಘಟಕವು ಆಯೋಜಿಸಿದ್ದ ಕ್ಯಾಂಪಸ್ ಸಂದರ್ಶನದಲ್ಲಿ ಜಿಲ್ಲೆಯ 75 ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿದೆ.
ಕಂಪನಿಗಳ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನದ ಆಧಾರದಲ್ಲಿ 120 ಅಭ್ಯರ್ಥಿಗಳ ಪೈಕಿ ಮೆಕ್ಯಾನಿಕಲ್ ಹಾಗೂ ಆಟೊಮೊಬೈಲ್ ಡಿಪ್ಲೊಮಾದ 65 ಹಾಗೂ ಐಟಿಐನ 10 ಅಭ್ಯರ್ಥಿಗಳನ್ನು ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡಿಕೊಂಡರು. ಸ್ಥಳದಲ್ಲೇ ಉದ್ಯೋಗ ದೃಢೀಕರಣ ಪತ್ರ ನೀಡಿದರು.
ಸರ್ಕಾರಿ ಪಾಲಿಟೆಕ್ನಿಕ್ ಪ್ರಾಚಾರ್ಯ ಮಲ್ಲಿಕಾರ್ಜುನ ಬಿ.ಆರ್. ಮಾತನಾಡಿ, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉದ್ಯೋಗಾವಕಾಶವನ್ನೂ ಕಲ್ಪಿಸಿಕೊಡಲು ಶ್ರಮಿಸುತ್ತಿದೆ ಎಂದು ತಿಳಿಸಿದರು.
ಪ್ಲೆಸ್‍ಮೆಂಟ್ ಅಧಿಕಾರಿ ಮಹೇಶ ಸ್ವಾಮಿ ಮಾತನಾಡಿ, ಸರ್ಕಾರಿ ಪಾಲಿಟೆಕ್ನಿಕ್‍ನಲ್ಲಿ ವ್ಯಾಸಂಗ ಪೂರ್ಣಗೊಳಿಸಿದ ಮೆಕ್ಯಾನಿಕಲ್ ಹಾಗೂ ಆಟೊಮೊಬೈಲ್ ಡಿಪ್ಲೊಮಾದ ಎಲ್ಲ ವಿದ್ಯಾರ್ಥಿಗಳಿಗೆ ಉದ್ಯೋಗ ಲಭಿಸಿದೆ. ಪಾಲಿಟೆಕ್ನಿಕ್‍ನಲ್ಲಿ ಮೇಲಿಂದ ಮೇಲೆ ಕ್ಯಾಂಪಸ್ ಸಂದರ್ಶನ ಏರ್ಪಡಿಸುತ್ತಿರುವುದಕ್ಕೆ ಇಲಾಖೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು.
ಕಂಪ್ಯೂಟರ್ ಶಿಕ್ಷಕ ವಕೀಲ್ ಪಟೇಲ್ ಮಾತನಾಡಿ, ಎರಡು ವಾರದೊಳಗೆ ನಡೆದ ಎರಡು ಸಂದರ್ಶನಗಳಲ್ಲಿ ಜಿಲ್ಲೆಯ ಒಟ್ಟು 185 ಅಭ್ಯರ್ಥಿಗಳಿಗೆ ಉದ್ಯೋಗ ದೊರೆತಿದೆ ಎಂದು ತಿಳಿಸಿದರು.
ಕಾಳಗಿ ಸರ್ಕಾರಿ ಪಾಲಿಟೆಕ್ನಿಕ್‍ನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ವಿಜಯಕುಮಾರ ವಲ್ಲೂರ, ಟೊಯೊಟಾ ಕಾರ್ಖಾನೆಯ ಮನೋಜ ಬಿ.ಆರ್, ಜನರಲ್ ಎಲೆಕ್ಟ್ರಿಕ್ ಕಂಪನಿಯ ಮಾನವ ಸಂಪನ್ಮೂಲ ಅಧಿಕಾರಿ ರೇಷ್ಮಾ ಮಾತನಾಡಿದರು.
ರಿಜಿಸ್ಟ್ರಾರ್ ಸಿರಾಜೊದ್ದಿನ್, ಉಪನ್ಯಾಸಕರು ಇದ್ದರು. ಅರುಣ ಮುಕಾಶಿ ನಿರೂಪಿಸಿದರು.