ಜಿಲ್ಲೆಯ 40 ಸಾವಿರಕ್ಕೂ ಅಧಿಕ ವೃದ್ಧರು ಅಪಾಯದಲ್ಲಿ

carona logo
Published on

ಕಾರವಾರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕರೊನಾ ಸಾವಿನ ಪ್ರಮಾಣವನ್ನು ಇಳಿಸಲು ಜಿಲ್ಲಾಡಳಿತ 40 ಸಾವಿರಕ್ಕೂ ಅಧಿಕ ಹಿರಿಯ ನಾಗರಿಕರ ಮೇಲೆ ತೀವ್ರ ನಿಗಾ ವಹಿಸಲು ನಿರ್ಣಯಿಸಿದೆ.

ವಿವಿಧ ಆರೋಗ್ಯ ಸಮಸ್ಯೆ ಇರುವವರನ್ನು ಗುರುತಿಸಿದ್ದು, ಅವರಿಗೆ ಸೂಕ್ತ ಆರೋಗ್ಯ ಸಲಹೆ ನೀಡಿ ನಿಗಾ ವಹಿಸುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ತಿಳಿಸಿದ್ದಾರೆ.

ಆರೋಗ್ಯ ಕಾರ್ಯಕರ್ತೆಯರು ಜಿಲ್ಲೆಯಲ್ಲಿ ಸೆ. 4 ರಿಂದ 11 ರವರೆಗೆ ಸರ್ವೆ ಕಾರ್ಯ ನಡೆಸಿದ್ದರು. ಒಟ್ಟು 3,36, 476 ಮನೆಗಳನ್ನು ಭೇಟಿ ಮಾಡಿ ಅದರಲ್ಲಿ 14,87,927 ಜನರ ಆರೋಗ್ಯ ಮಾಹಿತಿ ಪಡೆಯಲಾಗಿತ್ತು. 60 ವರ್ಷ ಮೇಲ್ಪಟ್ಟ 1,37,717 ಜನ ಇರುವುದು ಕಂಡುಬಂದಿದೆ. ಪಲ್ಸ್ ಆಕ್ಸಿಮೀಟರ್ ಮೂಲಕ ಹಿರಿಯ ನಾಗರಿಕರ ಬಿಪಿ, ರಕ್ತದಲ್ಲಿರುವ ಆಮ್ಲಜನಕದ ಪ್ರಮಾಣ ಗುರುತಿಸಲಾಗಿದೆ. ಅಲ್ಲದೆ, ಗ್ಲೂಕೋಮೀಟರ್ ಮೂಲಕ ಮಧು ಮೇಹ ತಪಾಸಣೆ ಕೈಗೊಳ್ಳಲಾಗಿದೆ.

ಗ್ಲೂಕೋಸ್ ಮಟ್ಟ (ಆರ್​ಬಿಎಸ್) 140 ಎಂಜಿಗಿಂತ ಹೆಚ್ಚಿರುವ 6569 ಜನರನ್ನು ಗುರುತಿಸಲಾಗಿದೆ. 131 ಜನರ ರಕ್ತದಲ್ಲಿ ಆಮ್ಲಜನಕ ಪ್ರಮಾಣ (ಎಸ್​ಪಿಒ2) ಶೇ. 92 ಕ್ಕಿಂತ ಕಡಿಮೆ ಇರುವುದು ಕಂಡುಬಂದಿದೆ. 50185 ಜನರಲ್ಲಿ ರಕ್ತದೊತ್ತಡ ಇದೆ. 26255 ಜನರಲ್ಲಿ ಸಕ್ಕರೆ ಕಾಯಿಲೆ ಇರುವುದು ಪತ್ತೆಯಾಗಿದೆ. 3544 ಜನರಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. 295 ಜನ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. 6026 ಜನರು ಇತರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದರಿಂದ ಅವರನ್ನು ನೇರವಾಗಿ ಅಪಾಯಕ್ಕೆ ಒಡ್ಡುವವರುಇ ಎಂದು ಗುರುತಿಸಲಾಗಿದೆ. 2185 ಜನರಿಗೆ ತಕ್ಷಣ ಕರೊನಾ ಪರೀಕ್ಷೆ ಮಾಡಿಸಲು ಸೂಚಿಸಲಾಗಿದೆ.

134 ಜನರಿಗೆ ಕರೊನಾ: ಭಾನುವಾರ ಜಿಲ್ಲೆಯಲ್ಲಿ 134 ಜನರಿಗೆ ಕರೊನಾ ಇರುವುದು ಖಚಿತವಾಗಿದೆ. ಕಾರವಾರದಲ್ಲಿ 13, ಅಂಕೋಲಾದಲ್ಲಿ 8, ಹೊನ್ನಾವರದಲ್ಲಿ 1, ಭಟ್ಕಳದಲ್ಲಿ 5, ಶಿರಸಿಯಲ್ಲಿ 12, ಸಿದ್ದಾಪುರದಲ್ಲಿ 27, ಯಲ್ಲಾಪುರದಲ್ಲಿ 37, ಹಳಿಯಾಳದಲ್ಲಿ 21, ಜೊಯಿಡಾದಲ್ಲಿ 10 ಜನರಿಗೆ ಕರೊನಾ ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 6938 ಕ್ಕೆ ಏರಿದೆ. 854 ಜನ ಆಸ್ಪತ್ರೆಯಲ್ಲಿ ಹಾಗೂ 1102 ಜನ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1956 ಸಕ್ರಿಯ ಪ್ರಕರಣಗಳಿವೆ.

ಕಾರವಾರದಲ್ಲಿ 1, ಅಂಕೋಲಾದಲ್ಲಿ 5, ಹೊನ್ನಾವರದಲ್ಲಿ 11, ಶಿರಸಿಯಲ್ಲಿ 6, ಹಳಿಯಾಳದಲ್ಲಿ 9, ಜೊಯಿಡಾದಲ್ಲಿ 3 ಜನ ಸೇರಿ ಒಟ್ಟು 35 ಜನ ಕರೊನಾದಿಂದ ಗುಣ ಹೊಂದಿದ್ದಾರೆ. ಹಳಿಯಾಳ ಹಾಗೂ ದಾಂಡೇಲಿಯಲ್ಲಿ ಕರೊನಾದಿಂದ 2 ಅಂಕೋಲಾದಲ್ಲಿ 1 ಸಾವು ಸಂಭವಿಸಿದೆ. ಒಟ್ಟಾರೆ ಕರೊನಾದಿಂದ ಮೃತಪಟ್ಟವರ ಸಂಖ್ಯೆ 83 ಕ್ಕೆ ಏರಿಕೆಯಾಗಿದೆ.

ಹೆಬ್ಬಾರ ಗುಣ: ಕಾರ್ವಿುಕ, ಸಕ್ಕರೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ಕರೊನಾದಿಂದ ಗುಣ ಹೊಂದಿದ್ದಾರೆ. ಅವರ, ಕುಟುಂಬದವರ, ಹಾಗೂ ಅವರ ಆಪ್ತ ಸಹಾಯಕ ಕಮಲಾಕ ನಾಯ್ಕ ಅವರ ಗಂಟಲ ದ್ರವದ ಮಾದರಿ ನೆಗೆಟಿವ್ ಬಂದಿದೆ. ಸದ್ಯ ಹೋಂ ಕ್ವಾರಂಟೈನ್​ನಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದೇನೆ. ಶೀಘ್ರದಲ್ಲಿ ಜನ ಕಾರ್ಯಕ್ಕೆ ಮರಳಲಿದ್ದೇನೆ ಎಂದು ಸಚಿವ ಶಿವರಾಮ ಹೆಬ್ಬಾರ ವಿಜಯವಾಣಿಗೆ ತಿಳಿಸಿದ್ದಾರೆ.

ಸರ್ಕಾರಿ ವೈದ್ಯ ಕರೊನಾದಿಂದ ಸಾವು

ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಅರಿವಳಿಕೆ ತಜ್ಞ ಡಾ. ಬಸವನಗೌಡ(61)ಭಾನುವಾರ ಕರೊನಾದಿಂದ ಸಾವನ್ನಪ್ಪಿದ್ದಾರೆ.

ದಾವಣಗೆರೆ ಜಿಲ್ಲೆಯ ಮಲೆಬೆನ್ನೂರಿನವರಾದ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಭಟ್ಕಳದ ಸರ್ಕಾರಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಿವೃತ್ತಿಯ ನಂತರ ಅವರು ಶಿರಸಿ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲ ತಿಂಗಳಿಂದ ಕರ್ತವ್ಯ ಮುಂದುವರಿಸಿದ್ದರು.

ಆ.25 ರಂದು ಅವರಿಗೆ ಕರೊನಾ ಪಾಸಿಟಿವ್ ಬಂದಿತ್ತು. ಚಿಕಿತ್ಸೆಗಾಗಿ ಅವರು ದಾವಣಗೆರೆಗೆ ತೆರಳಿದ್ದರು. ಕೆಲ ದಿನಗಳಿಂದ ಅವರನ್ನು ವೆಂಟಿಲೇಟರ್​ನಲ್ಲಿ ಇಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಮೃತರ ಪತ್ನಿ ಹಾಗೂ ಪುತ್ರ ಅಮೇರಿಕದಲ್ಲಿ ವಾಸವಾಗಿದ್ದಾರೆ.

ಬೇರೆ ಆರೋಗ್ಯ ಸಮಸ್ಯೆ ಇರುವವರು ಕರೊನಾಗೆ ತುತ್ತಾದರೆ ಸಾವನ್ನಪ್ಪುವ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಅಂಥವರನ್ನು ಗುರುತಿಸಿ ನಿಗಾ ವಹಿಸುವ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಮನೆ, ಮನೆ ಆರೋಗ್ಯ ಪರೀಕ್ಷೆ ಮಾಡಿ, ದಾಖಲೆಗಳನ್ನು ಸಂಗ್ರಹಿಸಿದ್ದು, ತೊಂದರೆಗೆ ತಕ್ಷಣ ತೆರೆದುಕೊಳ್ಳುವವರ ಬಗ್ಗೆ ತೀವ್ರ ನಿಗಾ ವಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕರೊನಾದಿಂದ ಉಂಟಾಗುವ ಸಾವಿನ ಪ್ರಮಾಣವನ್ನು ತಗ್ಗಿಸುವುದು ನಮ್ಮ ಮೂಲ ಉದ್ದೇಶ. ಈ ನಿಟ್ಟಿನಲ್ಲಿ ಜನ ನಮ್ಮೊಟ್ಟಿಗೆ ಸಹಕರಿಸಬೇಕು. ಡಾ.ಹರೀಶ ಕುಮಾರ ಕೆ., ಜಿಲ್ಲಾಧಿಕಾರಿ, ಉತ್ತರ ಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net