ಜಿಲ್ಲೆಗೊಂದು ಮಹಿಳಾ ಆಯೋಗದ ಸೆಲ್

2606Klb05
Published on

ಕಲಬುರಗಿ: ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಕೆಲಸದ ಸ್ಥಳದಲ್ಲಿ ಕಿರುಕುಳ ಸೇರಿ ವಿವಿಧ ಪ್ರಕರಣದಲ್ಲಿ ಮಹಿಳೆಯರಿಗೆ ದೂರು ನೀಡಲು ಜಿಲ್ಲೆಗೊಂದು ರಾಜ್ಯ ಮಹಿಳಾ ಆಯೋಗದ ಸೆಲ್ ಆರಂಭಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಮಹಿಳಾ ಆಯೋಗದ ರಾಜ್ಯಾಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.

ಆಯೋಗಕ್ಕೆ ದೂರು ಸಲ್ಲಿಸಲು ಮಹಿಳೆಯರು ಬೆಂಗಳೂರಿಗೆ ಬರಬೇಕಾಗುತ್ತದೆ. ಆದ್ದರಿಂದ ದೂರು ನೀಡಲು ಸಾಧ್ಯವಾಗುತ್ತಿಲ್ಲ. ಸಮೀಪದ ಜಿಲ್ಲಾ ಕೇಂದ್ರದಲ್ಲಿ ದೂರು ಕೇಂದ್ರವಿದ್ದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಒಂದು ಸೆಲ್ ಸ್ಥಾಪಿಸಿ, ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆಲ್ ಸೇರಿ ನಮ್ಮನ್ನು ನೇರವಾಗಿ ಸಂಪರ್ಕಿಸಿದರೆ (೯೯೮೦೦೧೬೮೯೮) ತಕ್ಷಣ ಸ್ಪಂದಿಸಲಾಗುವುದು. ಜಿಲ್ಲಾವಾರು ಎಲ್ಲ ಇಲಾಖೆ ಅಧಿಕಾರಿಗಳು ಸಶಕ್ತರಾಗಿದ್ದು, ಅಲ್ಲಿ ಮೀರಿದರೆ ನಮ್ಮನ್ನು ಸಂಪರ್ಕಿಸಬೇಕು. ಕಲಬುರಗಿ, ಕೋಲಾರದಂತಹ ಗಡಿ ಪ್ರದೇಶದಲ್ಲಿ ಮಹಿಳೆಯರ ಕಳ್ಳ ಸಾಗಣೆಗೆ ಕಡಿವಾಣ ತಡೆಯಬೇಕಿದೆ. ಅಪಹರಣಕ್ಕೆ ಒಳಗಾದ ಬಾಲಕಿಯರು, ಮಹಿಳೆಯರನ್ನು ಕಾನೂನು ಬಾಹಿರ ಚಟುವಟಿಕೆಗೆ ಬಳಸಿಕೊಳ್ಳುವ ದೊಡ್ಡ ಮಾಫಿಯಾ ನಿಯಂತ್ರಿಸಬೇಕಿದೆ. ಮಹಿಳಾ ಸಂಬಂಧಿತ ಇಲಾಖೆಗಳು ಅರಿವು ಮೂಡಿಸಲು ಒತ್ತು ನೀಡಬೇಕಿದೆ ಎಂದರು.

ಜಿಲ್ಲೆಯಲ್ಲಿ ಮಿಷನ್ ಸುರಕ್ಷಾ, ಅನೆಮಿಯಾ ಮುಕ್ತ ಕರ್ನಾಟಕ ಅಭಿಯಾನ, ಜನಸ್ನೇಹಿಯಂತ ಉತ್ತಮ ಯೋಜನೆಗಳ ಬಗ್ಗೆ ಶ್ಲಾಘಿಸಿದರು. ಮಹಿಳೆಯರು ಕಾಣೆ ಬಗ್ಗೆ ಗಂಭೀರವಾಗಿ ಪರಿಗಣಿಸಲು ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಪಂ ಸಿಇಒ ಭಂವರ್ ಸಿಂಗ್ ಮೀನಾ, ಎಸ್‌ಪಿ ಅಕ್ಷಯ ಹಾಕೆ, ಡಿಸಿಪಿ ಕನಿಕಾ ಸಿಕ್ರಿವಾಲ್, ಹೆಚ್ಚುವರಿ ಎಸ್‌ಪಿ ಶ್ರೀನಿಧಿ, ಎಸಿಪಿ ಬಿಂಧುಮಣಿ ಆರ್.ಎನ್.ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net