ಜಿಲ್ಲೆಗೆ ರಾಜ್ಯ ಸರ್ಕಾರ ನೀಡಿದ್ದು ರೂ. 750 ಕೋಟಿ

TKE BHIRATI)
ತರೀಕೆರೆಯಲ್ಲಿ ಅಮೃತ್ ಕುಡಿಯುವ ನೀರು ಪೂರೈಸುವ ಕಾಮಗಾರಿಗೆ ನಗರಾಭಿವೃದ್ಧಿ ಹಾಗೂ ಪೌರಾಡಳಿತ ಸಚಿವ ಬಿ.ಎಸ್.ಸುರೇಶ್ ಭೂಮಿ ಪೂಜೆ ನೆರವೇರಿಸಿದರು. ಜಿ.ಎಚ್.ಶ್ರೀನಿವಾಸ್, ಎಚ್.ಡಿ.ತಮ್ಮಯ್ಯ, ಬಿ.ಎನ್.ಚಂದ್ರಪ್ಪ, ಟಿ.ವಿ.ಶಿವಶಂಕರಪ್ಪ, ವಸಂತ್‌ಕುಮಾರ್, ಪಾರ್ವತಮ್ಮ ಇತರರಿದ್ದರು.
Published on

ತರೀಕೆರೆ: ನಗರಾಭಿವೃದ್ಧಿ ಇಲಾಖೆ ಮೂಲಕ ಚಿಕ್ಕಮಗಳೂರು ಜಿಲ್ಲೆಗೆ 500 ಕೋಟಿ ರೂ. ನೀಡಿರುವುದು ಮಾತ್ರವಲ್ಲ, ರಾಜ್ಯ ಸರ್ಕಾರ ಕಳೆದ ಒಂದೂವರೆ ವರ್ಷದಲ್ಲಿ ತರೀಕೆರೆ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗೆ 250 ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಹೇಳಿದರು.

ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ಬುಧವಾರ ನಿರ್ಮಿಸಿದ್ದ ವೇದಿಕೆಯಲ್ಲಿ ಪಟ್ಟಣದ ಎಲ್ಲ ವಾರ್ಡ್‌ಗಳಿಗೆ ಅಮೃತ್ 2.0 ಯೋಜನೆಯಡಿ ಕುಡಿಯುವ ನೀರು ಪೂರೈಸುವ ಅಂದಾಜು 41 ಕೋಟಿ ರೂ. ವೆಚ್ಚದ ಕಾಮಗಾರಿ ಹಾಗೂ ಅಜ್ಜಂಪುರ ಪಟ್ಟಣದಲ್ಲಿ ಡಲ್ಟ್ ವಿಶೇಷ ಅನುದಾನದಡಿ ಕೈಗೊಳ್ಳುತ್ತಿರುವ ಖಾಸಗಿ ಬಸ್ ನಿಲ್ದಾಣ ಅಭಿವೃದ್ಧಿ ಮತ್ತು ಪಟ್ಟಣ ಪಂಚಾಯಿತಿ ರಸ್ತೆಯಲ್ಲಿ ಫುಟ್‌ಪಾತ್ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಮುಂದುವರಿಯುತ್ತಿದ್ದು, ರಾಜ್ಯದ ಜನತೆಯ ಋಣ ಕಾಂಗ್ರೆಸ್ ಮೇಲಿದೆ. ಅಭಿವೃದ್ಧಿ ಮೂಲಕ ಮತದಾರರ ಋಣ ತೀರಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಲಿದೆ. ಮುಂದಿನ ದಿನಗಳಲ್ಲಿ ತರೀಕೆರೆ ಕ್ಷೇತ್ರದ ಪ್ರಗತಿಗೆ ಸಾಕಷ್ಟು ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರ ಜನರ ತೆರಿಗೆ ಹಣವನ್ನು ಜನರಿಗಾಗಿಯೇ ಖರ್ಚು ಮಾಡುತ್ತಿದೆ. ಸರ್ಕಾರದಲ್ಲಿ ಅನುದಾನ ಇಲ್ಲದಿದ್ದರೆ ಇಷ್ಟೊಂದು ಅಭಿವೃದ್ಧಿ ಕಾರ್ಯಕೈಗೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಬಿಜೆಪಿ ಸುಳ್ಳು ಹೇಳುವುದು, ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸುವ ರಾಜಕಾರಣ ಮಾಡುತ್ತಿದೆ. ದೇಶ ಒಡೆಯುವ ರಾಜಕಾರಣಿಗಳ ಬಗ್ಗೆ ಜನತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಡಲ್ಟ್ ಯೋಜನೆಯ 5.5 ಕೋಟಿ ರೂ. ಸೇರಿ ಪಟ್ಟಣದ ಬಿ.ಎಚ್.ರಸ್ತೆ ಅಭಿವೃದ್ಧಿಗೆ ಈವರೆಗೆ ವಿವಿಧ ಯೋಜನೆಗಳಿಂದ 51 ಕೋಟಿ ಅನುದಾನ ತರಲಾಗಿದೆ. ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣಕ್ಕೆ 9 ಕೋಟಿ ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಪುರಸಭೆ ನೂತನ ಕಟ್ಟಡಕ್ಕೆ 10 ಕೋಟಿ ಕೊಡಿಸಿಕೊಡಲಾಗುವುದು. ಅಜ್ಜಂಪುರ ಇಂದಿರಾ ಕ್ಯಾಂಟಿನ್ ಶೀಘ್ರ ಆರಂಭವಾಗಲಿದೆ ಎಂದು ತಿಳಿಸಿದರು.

ಅಮೃತ್ 2.0 ಯೋಜನೆಯಡಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿದ ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಬಿ.ಎಸ್.ಸುರೇಶ್ ಅವರಿಗೆ ಪ್ರತಿಭಟನೆಯ ಬಿಸಿ ತಟ್ಟಿತು. ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದ ಬಿಜೆಪಿ ಪ್ರಮುಖರು ಮತ್ತು ಕಾರ್ಯಕರ್ತರು ಶಾಸಕ ಜಿ.ಎಚ್.ಶ್ರೀನಿವಾಸ್ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ ಪರಿಶ್ರಮದಿಂದ ಅನುದಾನದ ಜತೆ ಅನುಷ್ಠಾನವಾದ ಅಮೃತ್ 2.0 ಯೋಜನೆಗೆ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗ ನಾಚಿಕೆ ಇಲ್ಲದ ಶಾಸಕ ಜಿ.ಎಚ್.ಶ್ರೀನಿವಾಸ್ ಮತ್ತದೇ ಯೋಜನೆಯ ಕಾಮಗಾರಿಗೆ ಸಚಿವರ ಮೂಲಕ ಶಂಕುಸ್ಥಾಪನೆ ನೆರವೇರಿಸಲು ಹೊರಟಿದ್ದಾರೆ. ಪಟ್ಟಣದ ಅಭಿವೃದ್ಧಿಗೆ ಬಿಡಿಗಾಸು ತರದ ಶಾಸಕ ಜನರ ಮುಂದೆ ಬಿಲ್ಡಪ್ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ಎಲ್ಲ ನಡೆ ಗಮನಿಸುತ್ತಿರುವ ಕ್ಷೇತ್ರದ ಜನ ಮುಂದೆ ಪಾಠ ಕಲಿಸಲಿದ್ದಾರೆ ಎಂದು ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ, ಮ್ಯಾಮ್ಕೋಸ್ ನಿರ್ದೇಶಕ ಟಿ.ಎಲ್.ರಮೇಶ್ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಗರಗದಹಳ್ಳಿ ಪ್ರತಾಪ್ ಆಕ್ರೋಶ ವ್ಯಕ್ತಪಡಿಸಿದರು.

ಅಮೃತ್ 2.0 ಯೋಜನೆಯಡಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಹೋದ ಜಿಪಂ ಮಾಜಿ ಉಪಾಧ್ಯಕ್ಷ ಕೆ.ಆರ್.ಆನಂದಪ್ಪ, ಮ್ಯಾಮ್ಕೋಸ್ ನಿರ್ದೇಶಕ ಟಿ.ಎಲ್.ರಮೇಶ್, ಬಿಜೆಪಿ ಮಂಡಲ ಅಧ್ಯಕ್ಷ ಗರಗದಹಳ್ಳಿ ಪ್ರತಾಪ್, ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್, ಬಿಜೆಪಿ ವಕ್ತಾರ ಬಿ.ಸೋಮಶೇಖರ್, ಪ್ರಧಾನ ಕಾರ್ಯದರ್ಶಿ ಜಿ.ಎಸ್.ವಸಂತ್‌ಕುಮಾರ್, ಯುವ ಮೋರ್ಚಾ ಕಾರ್ಯದರ್ಶಿ ಡಿ.ಜಿ.ಸಂಕೇತ್, ಗ್ರಾಪಂ ಮಾಜಿ ಅಧ್ಯಕ್ಷ ಇ.ಸಿ.ಚರಣ್‌ಕುಮಾರ್, ಉಪಾಧ್ಯಕ್ಷ ಬಿ.ಸುರೇಶ್ ಇತರ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ಶಾಸಕ ಎಚ್.ಡಿ.ತಮ್ಮಯ್ಯ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಕೆಪಿಸಿಸಿ ಸದಸ್ಯ ಎಚ್.ವಿಶ್ವನಾಥ್, ಮಾಜಿ ಸದಸ್ಯ ಟಿ.ವಿ.ಶಿವಶಂಕರಪ್ಪ, ಪುರಸಭೆ ಅಧ್ಯಕ್ಷ ವಸಂತ್‌ಕುಮಾರ್, ಉಪಾಧ್ಯಕ್ಷೆ ಪಾರ್ವತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್‌ಕುಮಾರ್, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಎಚ್.ಯು.ಾರೂಕ್, ದಯಾನಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net