

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಗೆ 46,303 ಮೆಟ್ರಿಕ್ ಟನ್ ರಸಗೊಬ್ಬರ ಅವಶ್ಯಕತೆ ಇದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.
ಹಿಂದಿನ ಈ ಅವಧಿಯಲ್ಲಿ 1.51 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಜತೆಗೆ 50,573 ಮೆಟ್ರಿಕ್ ಟನ್ ರಸಗೊಬ್ಬರ ಬೇಕೆಂದು ಅಂದಾಜಿಸಲಾಗಿತ್ತು. ಆದರೆ, ಬರದಿಂದ ನಿರೀಕ್ಷೆ ಮತ್ತು ಸಾಧನೆಯಲ್ಲಿ ಭಾರಿ ಪ್ರಮಾಣದಲ್ಲಿ ಏರುಪೇರು ಕಂಡು ಬಂತು. ಈಗಲೂ ಗುರಿ ನಿಗದಿ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ವ್ಯಾಪಕವಾಗಿ ಸುರಿಯುತ್ತಿದೆ. ದ್ರಾಕ್ಷಿ ಸೇರಿ ಇತರ ತೋಟಗಾರಿಕಾ ಬೆಳೆಗೆ ಹಾನಿಯಾಗಿದೆ. ಮತ್ತೊಂದೆಡೆ ರೈತರು ಇನ್ನೇನು ಪ್ರಾರಂಭವಾಗಲಿರುವ ಮುಂಗಾರು ಹಂಗಾಮಿಗೆ ಕೃಷಿ ಚಟುವಟಿಕೆ ಸಿದ್ಧತೆ ಕಡೆಗೆ ಗಮನ ಹರಿಸಿದ್ದಾರೆ.
ಹೂವು, ಹಣ್ಣು, ತರಕಾರಿ, ಹಾಲು, ರೇಷ್ಮೆಗೆ ಹೆಸರುವಾಸಿಯಾಗಿರುವ ಈ ಭಾಗದಲ್ಲಿ 1,40,975 ಅತಿ ಸಣ್ಣ ರೈತರು, 45637 ಸಣ್ಣ ರೈತರು ಮತ್ತು 27743 ಇತರ ರೈತರಿದ್ದಾರೆ. ಮುಂಗಾರು ಹಂಗಾಮಿಗೆ 1.28 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ನಿರೀಕ್ಷೆ ಹೊಂದಲಾಗಿದೆ. ಇನ್ನು ಕೃಷಿ ಚಟುವಟಿಕೆಗೆ ಅಗತ್ಯವಿರುವ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಇಟ್ಟುಕೊಳ್ಳಲು ಕೃಷಿ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ರೈತರು ರಾಗಿ, ಮುಸುಕಿನಜೋಳ, ತೊಗರಿ, ಅಲಸಂದೆ, ನೆಲಗಡಲೆ ಮತ್ತು ನವಣೆಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಜಿಲ್ಲೆಯಲ್ಲಿನ 26 ರೈತ ಸಂಪರ್ಕ ಕೇಂದ್ರಗಳ ಮೂಲಕ ರಿಯಾಯಿತಿ ದರದ ಬಿತ್ತನೆ ಬೀಜ ವಿತರಣೆ, ನಿಯಮಾನುಸಾರ ಅಗತ್ಯ ರಸಗೊಬ್ಬರ ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದೆ.
ನಿಯಮ ಪಾಲನೆಗೆ ಸೂಚನೆ
ಇತ್ತೀಚೆಗೆ ತಹಸೀಲ್ದಾರ್ ಮತ್ತು ಕೃಷಿ ಇಲಾಖೆ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ರಸಗೊಬ್ಬರ ಅಂಗಡಿ ಮಾಲೀಕರ ಸಭೆ ನಡೆಸಿದ ಕೃಷಿ ಇಲಾಖೆ, ರಸಗೊಬ್ಬರ ಹಾಗು ಇನ್ನಿತರ ಪರಿಕರಗಳನ್ನು ನಿಗದಿತ ಬೆಲೆಗಿಂತ ದುಬಾರಿ ದರಕ್ಕೆ ಮಾರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ರಸಗೊಬ್ಬರದ ಮೂಟೆಗಳನ್ನು ಕಡ್ಡಾಯವಾಗಿ ಎಲೆಕ್ಟ್ರಾನಿಕ್ ತೂಕದ ಯಂತ್ರದ ಮೂಲಕವೇ ತೂಕ ಹಾಕಬೇಕು, ಕೃಷಿ ಪರಿಕರ, ರಸಗೊಬ್ಬರಗಳ ದರಗಳನ್ನು ಮಳಿಗೆ ಮುಂಭಾಗದಲ್ಲಿ ಪ್ರಕಟಿಸಬೇಕು, ಯೂರಿಯಾ ರಸಗೊಬ್ಬರದೊಂದಿಗೆ ಇತರ ರಸಗೊಬ್ಬರ ಇಲ್ಲವೇ ಲಘು ಪೋಷಕಾಂಶಗಳನ್ನು ಬೆರೆಸಬಾರದು ಎನ್ನುವುದು ಸೇರಿ ವಿವಿಧ ಮಾರ್ಗಸೂಚಿ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ.
ಸಮರ್ಪಕ ಪೂರೈಕೆಗೆ ಕ್ರಮ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಂಗಾರು ಅವಧಿಯ ಕೃಷಿ ಚಟುವಟಿಕೆ ಕುರಿತ ಸಿದ್ಧತೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಿದ್ದಾರೆ. ಇದರಿಂದ ಅಲರ್ಟ್ ಆಗಿರುವ ಜಿಲ್ಲಾಡಳಿತ ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆ ಆಗದಂತೆ, ಬೇಡಿಕೆಗೆ ಅನುಗುಣವಾಗಿ ಪೂರೈಸಲು ಕ್ರಮ ಕೈಗೊಂಡಿದೆ. ಈಗಾಗಲೇ ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಸಹಾಯಕ ನಿರ್ದೇಶಕರು ಆಯಾ ವ್ಯಾಪ್ತಿಯಲ್ಲಿನ ಗೋದಾಮು, ರೈತ ಸಂಪರ್ಕ ಕೇಂದ್ರ, ಗೊಬ್ಬರ ಮಾರಾಟ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇನ್ನು ಒಂದು ವೇಳೆ ನಿಯಮ ಉಲ್ಲಂಘಿಸಿ ಬಿತ್ತನೆ ಬೀಜ ಮತ್ತು ಗೊಬ್ಬರ ಮಾರಾಟ ಮಾಡುವುದು ಕಂಡುಬಂದಲ್ಲಿ ರೈತರು ದೂರು ಸಲ್ಲಿಸಬಹುದು ಎಂದು ಕೃಷಿ ಇಲಾಖೆ ತಿಳಿಸಿದೆ.
ಮುಂಗಾರು ಹಂಗಾಮಿನಲ್ಲಿ ಉತ್ತಮ ರೀತಿಯಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಪೂರಕವಾಗಿ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ದಾಸ್ತಾನು ಇಟ್ಟುಕೊಳ್ಳಲಾಗಿದೆ. ರೈತರಿಗೆ ನಿಯಮಾನುಸಾರ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
- ಜಾವೀದಾ ಬೇಗಂ, ಜಂಟಿ ಕೃಷಿ ನಿರ್ದೇಶಕಿ, ಚಿಕ್ಕಬಳ್ಳಾಪುರ
ಮುಂಗಾರು ಅವಧಿಗೆ ಗೊಬ್ಬರ ದಾಸ್ತಾನು ವಿವರ (ಮೆಟ್ರಿಕ್ ಟನ್‌ನಲ್ಲಿ)
ರಸಗೊಬ್ಬರ ಅವಶ್ಯಕತೆ ದಾಸ್ತಾನು
ಯೂರಿಯಾ 15,1234 6700
ಡಿಎಪಿ 6,572 2017
ಎಂಒಪಿ 1210 638
ಎಸ್‌ಎಸ್‌ಪಿ 14868 358
ಎನ್‌ಪಿಕೆ ಕಾಂಪ್ಲೆಕ್ಸ್ 21,912 10,600
ಒಟ್ಟು 46,303 20,309